ಅವಕಾಶ ವಂಚಿತರಿಗೆ ಶಕ್ತಿ ತುಂಬುವುದೇ ನಿಜವಾದ ಸ್ವಾತಂತ್ರ್ಯದ ಅರ್ಥ
ಬೆಂಗಳೂರು: ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲ ಅವಕಾಶ ವಂಚಿತರಿಗೆ ಶಕ್ತಿ ತುಂಬುವುದೇ ನಿಜವಾದ ಸ್ವಾತಂತ್ರ್ಯದ ಅರ್ಥ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅವಕಾಶ ವಂಚಿತರಿಗಾಗಿ ಶ್ರಮಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಅವಕಾಶ ವಂಚಿತರ ಬಗ್ಗೆ ಕಾಳಜಿ, ಉಗ್ರವಾದವನ್ನು ತೀವ್ರವಾಗಿ ಹತ್ತಿಕ್ಕುವ ಕೆಲಸ ಮಾಡಿದರು. ಅದಕ್ಕಾಗಿಯೇ ಪ್ರಾಣ ಕಳೆದುಕೊಂಡರು. ದೇಶಕ್ಕಾಗಿ ಪ್ರಾಣ ತೆತ್ತ ಧೀಮಂತ ಮಹಿಳೆ ಅವರು. ಅವರ ಮಾರ್ಗದರ್ಶನದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಇಂದಿರಾ ಗಾಂಧಿಯವರು ಸುಮಾರು ಹದಿನಾರು ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರ ತಂದೆ ದಿವಂಗತ ಜವಾಹರ್ ಲಾಲ್ ನೆಹರೂ ರವರು ಸಕ್ರಿಯ ರಾಜಕಾಣದಲ್ಲಿ ತೊಡಗಿದ್ದವರು. ಮಹಾತ್ಮ ಗಾಂಧೀಜಿಯವರು ಸೇರಿದಂತೆ ದೇಶದ ಹಿರಿಯ ನಾಯಕರ ಒಡನಾಟವನ್ನು ಅವರ ಕುಟುಂಬ ಹೊಂದಿತ್ತು. ದೇಶದ ಸ್ವಾತಂತ್ರ್ಯ ಇಂದಿರಾ ಗಾಂಧಿಯವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಜನಪರ ನಿಲುವು ಹೊಂದಿದ್ದ ಇಂದಿರಾಗಾಂಧಿಯವರು ತಮ್ಮ ಇಡೀ ಜೀವನವನ್ನು ದೇಶ ಸೇವೆಗೆ ಮುಪಾಗಿಟ್ಟಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಂತರ ಪ್ರಧಾನಿಯಾದ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗಿದೆ. ದೇಶದ ಪರ ತೀರ್ಮಾನಗಳನ್ನು ಬಹಳ ದೃಢವಾಗಿ ತೆಗೆದುಕೊಳ್ಳುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಸ್ಮರಿಸಿದರು.
ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದವರಲ್ಲಿ ಕಾಂಗ್ರೆಸ್ ನಾಯಕರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂದು ಅಧಿಕಾರದಲ್ಲಿರುವ ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಯಾವ ತ್ಯಾಗ ಬಲಿದಾನಗಳನ್ನು ಮಾಡಿಲ್ಲ. ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ, ಬಡವರ ಕಾಳಜಿ, ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಜವಾಹರ್ ಲಾಲ್ ನೆಹರೂರವರು ಪ್ರಧ್ಹಾನಿಯಾಗಿದ್ದಾಗ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ದುಸ್ಥಿತಿಯಲ್ಲಿತ್ತು. ಇಂಥ ಸಂದರ್ಭದಲ್ಲಿ ದೇಶವನ್ನು ಕಟ್ಟುವ ಕೆಲಸವನ್ನು ಮಾಡಿದರು.
ಇಂದಿರಾಗಾಂಧಿಯವರು ದೇಶವನ್ನು ಬಲಪಡಿಸುವ ಹಾಗೂ ಬಡವರಿಗೆ ಶಕ್ತಿ ತುಂಬಿದರು. ವಿರೋಧಪಕ್ಷದವರು ಇಂದಿರಾಗಾಂಧಿ ಹಠಾವೋ ಎಂಬ ಟೀಕೆಗೆ, ಗರೀಬಿ ಹಠಾವೋ ಎಂದು ಪ್ರತ್ಯುತ್ತರ ನೀಡುತ್ತಿದ್ದರು. ದೇಶದಲ್ಲಿ ಆಹಾರ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಬಾಬು ಜಗಜೀವನರಾಂ ರವರ ಸಹಕಾರದೊಂದಿಗೆ ಹಸಿರು ಕ್ರಾಂತಿಯನ್ನು ತಂದು ಅಹಾರ ಸ್ವಾವಲಂಬನೆಯನ್ನು ತಂದರು. ದೇಶದ ಜನಸಂಖ್ಯೆ ಹೆಚ್ಚಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ. ನಿರಂತರ ಹಸಿರುಕ್ರಾಂತಿ ನಡೆಯಬೇಕಿದೆ. ಪ್ರಧಾನಿಯಾಗಿ ಇಂದಿರಾ ಗಾಂಧಿಯವರು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಿದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.