ಅಸ್ತಮಾ ರೋಗಕ್ಕೆ ಉಚಿತ ಮಂತ್ರೌಷಧಿ
ಲಕ್ಷ್ಮೇಶ್ವರ: ಜೀವಮಾನವಿಡೀ ಕಾಡುವ ಅಸ್ತಮಾ ರೋಗಕ್ಕೆ ಉಚಿತ ಆಯುರ್ವೇದ ಮಂತ್ರೌಷಧಿ ನೀಡುವ ತಜ್ಞ ವೈದ್ಯ ದಿ.ಬಾಬುರಾವ್ ಕುಲಕರ್ಣಿ ಅವರ ಆಶೀರ್ವಾದದೊಂದಿಗೆ ನಡೆಯುತ್ತಿರುವ ಉಚಿತ ಅಸ್ತಮಾ ಯಜ್ಞಕ್ಕೀಗ ೫೭ನೇ ವರ್ಷದ ಸಂಭ್ರಮ.
ಅಸ್ತಮಾ ರೋಗಕ್ಕೆ ಕಳೆದ ೫೬ ವರ್ಷಗಳಿಂದ ನೀಡುತ್ತಿರುವ ಔಷಧಿಯಿಂದ ಲಕ್ಷಾಂತರ ಜನ ಗುಣಮುಖರಾಗಿದ್ದು, ಸತತ ೫೭ನೇ ವರ್ಷದಲ್ಲಿ ಈ ಕಾರ್ಯ ಮುನ್ನಡೆದಿದೆ. ವ್ಯಕ್ತಿಯಲ್ಲಿ ಕಫ ಹೆಚ್ಚಾದಾಗ ಉಸಿರಾಟ ತೊಂದರೆಯಾಗುತ್ತದೆ. ಈ ರೋಗ ಇಂಗ್ಲಿಷ್ ಔಷಧಿಯಿಂದಲೂ ವಾಸಿಯಾಗಲ್ಲವೆಂಬ ಭಯ ಜನಸಾಮಾನ್ಯರಲ್ಲಿದೆ. ಇದಕ್ಕೆ ಅಪವಾದವೆಂಬಂತೆ ಕಳೆದ ೫೪ ವರ್ಷಗಳಿಂದ ಉಚಿತ ಅಸ್ತಮಾ ಔಷಧಿ ನೀಡುತ್ತಿದ್ದ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಈ ರೋಗ ಹೋಗಲಾಡಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ದಿ.ವೈದ್ಯ ಬಾಬುರಾವ್ ಕುಲಕರ್ಣಿ ಪ್ರಖ್ಯಾತ ವೈದ್ಯರಾಗಿದ್ದ ಹನುಮಂತಪ್ಪ ಮುರಗೋಡ ಎಂಬುವರಲ್ಲಿ ಆಯುರ್ವೇದದ ಔಷಧಿಗಳ ಜ್ಞಾನ ಪಡೆದಿದ್ದರು. ಔಷಧಕ್ಕಾಗಿ ಹಿಮಾಲಯ, ಕಾಶ್ಮೀರ, ಕನ್ಯಾಕುಮಾರಿ ಅನೇಕ ಕಡೆಗಳಲ್ಲಿ ವನಸ್ಪತಿಗಳನ್ನು ಸಂಗ್ರಹಿಸಿ ಅಸ್ತಮಾ ರೋಗಕ್ಕೆ ಔಷಧಿ ನೀಡಿ ಲಕ್ಷಾಂತರ ಜನರನ್ನು ರೋಗದಿಂದ ಪಾರು ಮಾಡಿದ್ದಾರೆ. ೫೪ ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ಸ್ವರ್ಗಸ್ಥರಾಗಿರುವ ಬಾಬುರಾವ್ ಕುಲಕರ್ಣಿಯವರ ಸೇವೆಯನ್ನು ಅವರ ಶಿಷ್ಯ ಬಳಗ ಮುಂದುವರೆಸಿದೆ. ವರ್ಷದಿಂದ ವರ್ಷಕ್ಕೆ ಈ ಔಷಧಿಗೆ ಬೇಡಿಕೆ ಹೆಚ್ಚುತ್ತಿದೆ. ಅನ್ಯ ರಾಜ್ಯಗಳಿಂದ ಸಾವಿರಾರು ಜನರು ಔಷಧಿಗಾಗಿ ಆಗಮಿಸುತ್ತಿರುವುದು ಈ ಯಜ್ಞದ ಹೆಗ್ಗಳಿಕೆ.
8ರಂದು ಔಷಧಿ ವಿತರಣೆ
ಅಸ್ತಮಾ ರೋಗಕ್ಕೆ ಜೂನ್ 8ರಂದು ಗುರುವಾರ ರಾತ್ರಿ 12.58ಕ್ಕೆ ಮೃಗಶಿರಾ ಮಳೆಯ ನಕ್ಷತ್ರ ಕಾಲದಲ್ಲಿ ಔಷಧಿ ನೀಡಲಾಗುತ್ತಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಿರೇಬಣ ಹಳೆ ಪೊಲೀಸ್ ಠಾಣೆಯ ಹತ್ತಿರದ ಸರಕಾರಿ ಪ್ರಾಥಮಿಕ ಶಾಲೆ ನಂ. ೧ರಲ್ಲಿ ವಿತರಣೆ ನಡೆಯಲಿದೆ.