For the best experience, open
https://m.samyuktakarnataka.in
on your mobile browser.

ಆಂತರಿಕ ದೇಶದ್ರೋಹಿಗಳನ್ನು ಮಟ್ಟ ಹಾಕಿ

08:53 PM Sep 12, 2024 IST | Samyukta Karnataka
ಆಂತರಿಕ ದೇಶದ್ರೋಹಿಗಳನ್ನು ಮಟ್ಟ ಹಾಕಿ

ಹುಬ್ಬಳ್ಳಿ: ಇಂದು ದೇಶದ ಹೊರಗೆ ಮತ್ತು ಒಳಗೆ ದೇಶದ್ರೋಹಿಗಳಿದ್ದಾರೆ. ಬಹಿರಂಗವಾಗಿಯೇ ದೇಶದ್ರೋಹಿ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಯುವಕರು ದೇಶದ ರಕ್ಷಣೆಗೆ ತಮ್ಮ ಜೀವನ ಮುಡಿಪಾಗಿಡಲು ಸಿದ್ಧರಾಗಿರಬೇಕು. ಆಂತರಿಕ ದೇಶದ್ರೋಹಿಗಳನ್ನು ಮಟ್ಟಹಾಕಬೇಕು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ದೇಶಭಕ್ತಿ, ಹೋರಾಟದ ಯಶೋಗಾಥೆ ಪ್ರೇರಣೆಯಾಗಿಸಿಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಗುರುವಾರ ಇಲ್ಲಿನ ಜೆ.ಸಿ.ನಗರದ ಅಕ್ಕನ ಬಳಗದಲ್ಲಿ ಶ್ರೀ ಗಜಾನನ ಮಹಾಮಂಡಳದ ವತಿಯಿಂದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ" ಸ್ವೀಕರಿಸಿ ಮಾತನಾಡಿದರು.
ಹಿಂದೆ ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಒಳಗಿನ ದೇಶದ್ರೋಹಿಗಳನ್ನು ಮೆಟ್ಟಿನಿಂತು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ತಾಯಿ ಮಗನಂತಿದ್ದ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರು ಮಲ್ಲಪ್ಪ ಶೆಟ್ಟಿ ಅಂತಹ ಒಳಗಿನ ದೇಶದ್ರೋಹಿಗಳಿದ್ದರೂ ಕೂಡ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ರಕ್ತ ಹಂಚಿಕೊಂಡು ಹುಟ್ಟಿರುವ ನಾವೆಲ್ಲರೂ ಸೌಭಾಗ್ಯವಂತರು. ಅಂತಹ ಮಹಾನ್ ರಾಷ್ಟ್ರಭಕ್ತರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಅಪಾರ ಸಂತೋಷವಾಗಿದೆ. ಸಮಾಜಸೇವೆಗೆ ಮತ್ತಷ್ಟು ಬಲಬಂದಿದೆ ಎಂದು ಭಾವಪರವಶರಾಗಿ ನುಡಿದರು.
ಬೃಹನ್ ಹೊಸಮಠದ ಜಗದ್ಗುರು ಡಾ. ಚಂದ್ರಶೇಖರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ ತಂದೆಯ ಪರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಿದರು.

Tags :