ಆಂತರಿಕ ವಿದ್ರೋಹಕ್ಕೆ ಕಠಿಣ ಕ್ರಮ
ಹುಬ್ಬಳ್ಳಿ: ಭಾರತದ ಆಂತರಿಕ ವಿದ್ರೋಹಿಗಳನ್ನು ಮುಲಾಜಿಲ್ಲದೇ ಮಟ್ಟ ಹಾಕಲು ಇದು ಸಕಾಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ಇಲ್ಲಿಗೆ ಸಮೀಪದ ಜೈನ ಕ್ಷೇತ್ರ, ವರೂರಿನ ನವಗ್ರಹ ತೀರ್ಥದಲ್ಲಿ ಒತ್ತಿ ಹೇಳಿದರು. ದೇಶದ ವಿರುದ್ಧ ವಿನಾಕಾರಣ ನಕಾರಾತ್ಮಕ ನಿರೂಪಣೆ ಮಾಡುವರನ್ನು ಭಾರತ ಸಹಿಸಲ್ಲ ಎಂದು ಎಚ್ಚರಿಸಿದರು.
ಸಮೀಪದ ವರೂರಿನಲ್ಲಿ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಪ್ರಧಾನ ವಿಧಿ ವಿಧಾನಗಳು ಹಾಗೂ ಜಿನ ಧರ್ಮದ ಮಹತ್ವ ಸಾರುವ ದೇಶದ ಮೊದಲ ಸುಮೇರು ಪರ್ವತ' ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚುತ್ತಿರುವ ದೇಶದ್ರೋಹದ ಕುರಿತು ತಮ್ಮ ಭಾಷಣದಲ್ಲಿ ಇನ್ನಿಲ್ಲದಂತೆ ಕಳವಳ ವ್ಯಕ್ತಪಡಿಸಿದರು.
ಎಲ್ಲರನ್ನೂ ಒಳಗೊಂಡ ವಿಕಸಿತ ಭಾರತವೇ ನಮ್ಮ ಗುರಿ. ಹೀಗಾಗಿ ಆರೋಗ್ಯಕರ ಸಂವಾದ ಮತ್ತು ಮನವೊಲಿಕೆಗಳು ಭಾರತದ ನೀತಿಯಾಗಿವೆ. ಇಷ್ಟಾಗಿಯೂ ಇಂತಹ ವಿದ್ರೋಹಿ ಶಕ್ತಿಗಳು ನಮ್ಮಲ್ಲಿ ಜೀವಂತವಾಗಿ ಉಳಿದಲ್ಲಿ, ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಳ್ಳದೇ ಬೇರೆ ದಾರಿ ಇಲ್ಲ' ಎನ್ನುವ ಮೂಲಕ ಕಠಿಣ ಸಂದೇಶವನ್ನು ರವಾನಿಸಿದರು. ಇಂಥ ಶಕ್ತಿಗಳನ್ನು ಎದುರಿಸಲು `ಶಸ್ತ್ರವೇ ಅಸ್ತ್ರ' ಎಂಬುದನ್ನು ಪರೋಕ್ಷವಾಗಿ ಸೂಚಿಸಿದರು.
ಜೈನ ಧರ್ಮದ ಶಾಂತಿ-ಅಹಿಂಸೆ ಮತ್ತು ಅಪರಿಗ್ರಹ ತತ್ವಗಳು ಇಂದು ದೇಶ ಮಾತ್ರವಲ್ಲ; ಇಡೀ ವಿಶ್ವದ ಅನಿವಾರ್ಯತೆ. ಇವುಗಳಲ್ಲಿ ನಂಬಿಕೆ ಇಟ್ಟು ೨೦೪೭ರ ವಿಕಸಿತ ಭಾರತಕ್ಕಾಗಿ ದೇಶ ಸಜ್ಜಾಗುತ್ತಿದೆ. ಈ ಶಾಂತಿ ಸಂದೇಶ ನಮ್ಮ ಉಸಿರಾದರೂ ಹಿಂಸೆಗಿಳಿಯುವ ಶಕ್ತಿಗಳ ಕೈ ಮೇಲಾದರೆ ಮೂಕ ಪ್ರೇಕ್ಷಕರಂತೆ ವರ್ತಿಸಲು ಸಾಧ್ಯವಿಲ್ಲ ಎಂದು ದೇಶದ್ರೋಹಿಗಳು, ಭಾರತವನ್ನು ಒಳಗಿದ್ದೇ ವಿರೋಧಿಸುವವರು ಹಾಗೂ ಶಾಂತಿ ಕದಡುವವರಿಗೆ ಉಪ ರಾಷ್ಟ್ರಪತಿಗಳು ಪ್ರಬಲವಾದ ಎಚ್ಚರಿಕೆಯನ್ನು ನೀಡಿದರು. ದುಷ್ಟರನ್ನು ಶಿಕ್ಷಿಸಿ ಎಂಬುದಾಗಿ ನಮ್ಮ ಆಧ್ಯಾತ್ಮವೂ ಹೇಳಿದೆ ಎಂದು ಅವರು ನುಡಿದರು.