ಆಂಬುಲೆನ್ಸ್ ಅಪಘಾತ : ಗರ್ಭಿಣಿ ಸಾವು
ವಿಜಯಪುರ: ಗರ್ಭಿಣಿಯನ್ನು ಕರೆದೋಯ್ಯುತ್ತಿದ್ದ 108 ಆಂಬುಲೆನ್ಸ್ ಟ್ರ್ಯಾಕ್ಟರ್ ಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ಗರ್ಭಿಣಿ ಮಹಿಳೆ ಭಾಗ್ಯಶ್ರೀ ರಾವುತಪ್ಪ ಪಾರಣ್ಣವರ (19) ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನೊಪ್ಪಿರುವ ದಾರುಣ ಘಟನೆ ಹೂವಿನಹಿಪ್ಪರಗಿ ಬಳಿ ನಡೆದಿದೆ.
ನಾವದಗಿ ಮೃತ ಗರ್ಭಿಣಿ ಭಾಗ್ಯಶ್ರೀ ಕಳೆದ ಒಂದೂವರೆ ವರ್ಷದ ಹಿಂದೆ ರಾವುತಪ್ಪ ಪಾರಣ್ಣವರ ಜೊತೆ ವಿವಾಹವಾಗಿತ್ತು. ಇತ್ತೀಚಿಗೆ ಮೊದಲ ಹೆರಿಗೆಗಾಗಿ ತವರು ಮನೆಗೆ ತೆರಳಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ನಾವದಗಿ ಗ್ರಾಮದಿಂದ ತಾಳಿಕೋಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದಂತೆ ಅಲ್ಲಿನ ವೈದ್ಯರು ವಿಜಯಪುರದ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ್ದರು. ಶನಿವಾರ ನಸುಕಿನ ಜಾವ ಆಂಬುಲೆನ್ಸ್ ಮೂಲಕ ವಿಜಯಪುರಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ಹೂವಿನಹಿಪ್ಪರಗಿ ಬಳಿ ಅಪಘಾತವಾಗಿ ದುರ್ಘಟನೆ ಸಂಭಾವಿಸಿದೆ.
ಹೇಗಾಯಿತು…..
ಗರ್ಭಿಣಿ ಮಹಿಳೆ ಭಾಗ್ಯಶ್ರೀ ಅವರನ್ನು ತಾಳಿಕೋಟಿ ಸರ್ಕಾರಿ ಆಸ್ಪತ್ರೆಯಿಂದ ವಿಜಯಪುರಕ್ಕೆ ತರುತ್ತಿದ್ದಾಗ ಟ್ರ್ಯಾಕ್ಟರ್ ಒಂದು ಪಕ್ಕದ ಹೊಲದಿಂದ ರಸ್ತೆಗೆ ಬಂದಿದೆ. ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.
ಆಸ್ಪತ್ರೆ ಮುಂದೆ ಹೈಡ್ರಾಮಾ….
ಅಪಘಾತದಿಂದ ಗರ್ಭಿಣಿ ಮಹಿಳೆ ಭಾಗ್ಯಶ್ರೀ ಮೃತಪತ್ತಿರುವುದು ತಿಳಿಯುತ್ತಿದ್ದಂತೆ ಸಂಬಂಧಿಕರು ತಾಳಿಕೋಟಿ ಆಸ್ಪತ್ರೆಗೆ ತೆರಳಿ ಅಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ಧರಣಿ ನಡೆಸಿದ್ದಾರೆ. ಗರ್ಭಿಣಿ ಮಹಿಳೆ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಸಂಬಂಧಿಕರು ಕೂಡ ಧರಣಿ ನಡೆಸಿದ್ದಾರೆ.