For the best experience, open
https://m.samyuktakarnataka.in
on your mobile browser.

ಆಚಾರಗೆಟ್ಟ ವಿಚಾರವಂತಿಕೆ

01:31 AM Feb 28, 2024 IST | Samyukta Karnataka
ಆಚಾರಗೆಟ್ಟ ವಿಚಾರವಂತಿಕೆ

ರಾಜ್ಯಸಭೆ ಚುನಾವಣೆ ಪ್ರತಿಬಾರಿಯೂ ವಿಶಿಷ್ಟ ರೂಪವನ್ನು ಪಡೆದುಕೊಳ್ಳಲು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿರುವ ರಾಜಕೀಯ ಪರಿಸ್ಥಿತಿಯೇ ಕಾರಣ. ರಾಜ್ಯಸಭೆ ಚುನಾವಣೆ ನೇರ ಚುನಾವಣೆಯಲ್ಲದಿದ್ದರೂ ನೇರ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಳದಾರಿಗಳಿಗೆ ರಹದಾರಿಗಳನ್ನು ಪಡೆದುಕೊಂಡು ವಿಜೃಂಭಿಸುತ್ತಿರುವುದು ಸಂವಿಧಾನದ ವಿಚಾರವಂತಿಕೆಗೆ ಸೆಡ್ಡು ಹೊಡೆಯುವ ಅಟ್ಟಹಾಸದ ನಡೆ. ಪಕ್ಷಾಂತರ ನಿಷೇಧ ಶಾಸನ ರಾಜ್ಯಾಂಗ ಹತ್ತನೆಯ ಶೆಡ್ಯೂಲ್‌ನಲ್ಲಿ ಸೇರ್ಪಡೆಯಾದ ನಂತರ ರಾಜ್ಯಸಭೆ ಚುನಾವಣೆಯಾದರೂ ಪರಿಪಕ್ವವಾಗಿ ನಡೆಯುತ್ತದೆ ಎಂಬ ವಿಶ್ವಾಸ ಕಮರಿಹೋಗಲು ಕಾರಣವಾಗಿರುವುದು ಶಾಸನಗಳಲ್ಲಿರುವ ಒಳಕಿಂಡಿ. ಬಹಿರಂಗ ಮತದಾನ ಪದ್ಧತಿಯ ಮೂಲಕವೇ ಮತ ಚಲಾವಣೆಯಾದರೂ ಹಾಗೊಮ್ಮೆ ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಮತಾಂತರ ಮಾಡುವ ಜನಪ್ರತಿನಿಧಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಲಾಗದೇ ಇರುವ ಅಸಹಾಯಕ ಸ್ಥಿತಿ ಅಪಾಯಗಳನ್ನು ಲೆಕ್ಕಿಸದೆ ಎಲ್ಲಾ ಸಾಧ್ಯತೆಗಳನ್ನೂ ಮೀರಿ ನಡೆಯುವ ಪ್ರವೃತ್ತಿ ನಿಜವಾದ ಅರ್ಥದಲ್ಲಿ ಜನತಂತ್ರ ಪದ್ಧತಿಗೆ ಒಂದು ದೊಡ್ಡ ಅಪಚಾರ.
ಉತ್ತರ ಪ್ರದೇಶದಲ್ಲಂತೂ ಪಕ್ಷದ ಕಟ್ಟಾಜ್ಞೆಯನ್ನೇ ಧಿಕ್ಕರಿಸಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಲ್ಲವೇ ಇನ್ನೊಂದು ಪಕ್ಷದ ಜೊತೆ ಗುರುತಿಸಿಕೊಂಡು ರಾಜ್ಯಸಭೆ ಚುನಾವಣೆಯ ಫಲಿತಾಂಶವನ್ನೇ ಏರುಪೇರು ಮಾಡಿರುವ ಬೆಳವಣಿಗೆ ರಾಜಕಾರಣವೆಂಬುದು ಮೂರು ಕಾಸಿನ ಬೀದಿ ಆಟ ಎಂದು ಜನ ಆಡಿಕೊಳ್ಳುವಂತಾಗಿದೆ. ಇನ್ನು, ಕರ್ನಾಟಕದ ಸ್ಥಿತಿ ಏನೂ ಭಿನ್ನವಾಗಿಲ್ಲ. ೨೨೪ ಸದಸ್ಯ ಬಲದ ವಿಧಾನಸಭೆಯಿಂದ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆಯ್ಕೆಯಾಗಬೇಕಾಗಿದ್ದ ಈ ಚುನಾವಣೆಯ ಬಲಾಬಲದ ಆಧಾರದ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಮೂರು, ಅಧಿಕೃತ ಪ್ರತಿಪಕ್ಷ ಬಿಜೆಪಿಗೆ ಒಂದು ಸ್ಥಾನ ಗೆಲುವು ಸಾಧಿಸಿದ ನಂತರ ಉಳಿಯುವ ಹೆಚ್ಚುವರಿ ಮತಗಳು ನಾನಾ ರೀತಿಯ ಬೆಳವಣಿಗೆಗಳಿಗೆ ಪ್ರೇರಣೆಯಾದದ್ದು ಈ ಬಾರಿ ಚುನಾವಣೆಯ ವಿಶೇಷ. ಐದನೆಯ ಅಭ್ಯರ್ಥಿಯಾಗಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಕುಪೇಂದ್ರ ರೆಡ್ಡಿ ಶಾಸಕರ ಮತಾಂತರ ನಿರೀಕ್ಷಿಸಿ ಕಣದಲ್ಲಿ ಸಕ್ರಿಯವಾಗಿದ್ದಂತೂ ನಿಜ. ಆದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರನ್ನು ಈಗಿನ ಸಂದರ್ಭದಲ್ಲಿ ತಮ್ಮ ಪರವಾಗಿ ಒಲಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಇದು ಗೊತ್ತಿದ್ದರೂ ಕೂಡಾ ಕುಪೇಂದ್ರ ರೆಡ್ಡಿ ಅವರು ಕಣದಲ್ಲಿ ಉಳಿದದ್ದು ಕೆಲ ಮಟ್ಟಿಗೆ ರಾಜಕೀಯ ಸಾಹಸವಂತಿಕೆಯೇ. ಬಿಜೆಪಿಯ ಕೆಲ ಶಾಸಕರು ಮತಾಂತರ ಮಾಡಿದ್ದಾರೆ ಎಂಬ ಆರೋಪಗಳ ಗುಲ್ಲು ದಟ್ಟವಾಗುತ್ತಿರುವ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲು ಬಿಜೆಪಿಯವರು ವೀರಾವೇಶದಿಂದ ಮುಂದಾಗಿದ್ದರೂ ಕೂಡಾ ಶಾಸನ ಹಾಗೂ ಅನುಭವದ ಆಧಾರದ ಮೇರೆಗೆ ಹೇಳುವುದಾದರೆ ಇದರಿಂದ ಯಾವುದೇ ನಿರ್ಣಾಯಕ ಬೆಳವಣಿಗೆ ಸಾಧ್ಯವಿಲ್ಲ. ಹೆಚ್ಚೆಂದರೆ ಮತಾಂತರದ ಆರೋಪದ ಮೇರೆಗೆ ಸಂಬಂಧಿತ ಶಂಕಿತ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬಹುದು. ಆದರೆ, ಅವರ ಶಾಸಕ ಸದಸ್ಯತ್ವವನ್ನು ಅನರ್ಹಗೊಳಿಸುವುದು ಅಸಾಧ್ಯ. ಏಕೆಂದರೆ, ಶಾಸನದಲ್ಲಿ ಇಂತಹ ಅವಕಾಶ ಇಲ್ಲ. ೧೯೯೯-೨೦೦೪ರ ಅವಧಿಯ ವಿಧಾನಸಭೆಯಲ್ಲಿ ಬಿಜೆಪಿ ಪರವಾಗಿ ಸಕಲೇಶಪುರದಿಂದ ಆಯ್ಕೆಯಾಗಿದ್ದ ಬಿ.ಬಿ. ಶಿವಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಿ ತೃಪ್ತಿಪಟ್ಟುಕೊಂಡಿದ್ದಂತೆ ಈಗಲೂ ಕೂಡಾ ಬಿಜೆಪಿ ಅದೇ ಕ್ರಮಕ್ಕೆ ಮುಂದಾಗಬಹುದು. ಇಂತಹ ಒಳಕಿಂಡಿಗಳನ್ನು ಸರಿಪಡಿಸಲು ಮುಖ್ಯವಾಗಿ ಆಗಬೇಕಾದದ್ದು ಪಕ್ಷಾಂತರ ನಿಷೇಧ ಕಾಯ್ದೆಯ ವಿವಿಧ ಕಲಮುಗಳು ತಿದ್ದುಪಡಿ. ಇದಕ್ಕೆ ಸಂಸತ್ತು ಮನಸ್ಸು ಮಾಡಬೇಕು ಅಷ್ಟೇ.
ಶಾಸನದ ಗೊತ್ತುಗುರಿ ಏನೇ ಇರಲಿ, ಜನಾದೇಶದ ಮೂಲಕ ಒಂದು ಕ್ಷೇತ್ರದಿಂದ ಒಂದು ಪಕ್ಷದ ಟಿಕೆಟ್ ಮೇಲೆ ಗೆದ್ದು ಬಂದ ಶಾಸಕರು ಆ ಪಕ್ಷಕ್ಕೆ ನಿಷ್ಠವಾಗಿ ನಡೆದುಕೊಳ್ಳುವುದು ರಾಜಕಾರಣದಲ್ಲಿ ಅಪೇಕ್ಷಿತ ಬೆಳವಣಿಗೆ. ಹಾಗೆಯೇ ಹೀಗೆ ಪಕ್ಷದ ಟಿಕೆಟ್ ಮೇಲೆ ಗೆದ್ದು ಬಂದ ಶಾಸಕರನ್ನು ವಿಶ್ವಾಸದಿಂದ ನಡೆಸಿಕೊಳ್ಳುವುದು ಕೂಡಾ ಪಕ್ಷದ ಹೃದಯವಂತಿಕೆಯ ಜವಾಬ್ದಾರಿ ಕೂಡಾ. ಇವೆರಡರ ನಡುವೆ ಯಾವುದೇ ತಾಕಲಾಟ ಆಗಬಾರದು. ಈಗಿರುವ ಶಾಸನದ ಪ್ರಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನಿಲುವೇ ಅಂತಿಮ. ಹೀಗಾಗಿ ಶಾಸನದಲ್ಲಿರುವ ಈ ಒಳಕಿಂಡಿಗಳನ್ನು ಗುರುತಿಸಿ ಈ ಕಾಲಕ್ಕೆ ಹೊಂದುವ ರೀತಿಯಲ್ಲಿ ಬದಲಾವಣೆ ಮಾಡದಿದ್ದರೆ ಈ ಶಾಸನ ಇರುವುದು ಕೇವಲ ವಿಚಾರವಂತಿಕೆಯ ಪ್ರದರ್ಶನಕ್ಕೆ ಮಾತ್ರ - ಆಚಾರವಂತಿಕೆಯೇ ಬೇರೆ ಎಂಬಂತಾಗಿಬಿಡುವ ಅಪಾಯ ನಮ್ಮ ಕಣ್ಣೆದುರಿಗೆ ನಾಟಕದಂತೆ ನಡೆಯುತ್ತಿದೆ. ಇಂತಹ ಆಚಾರವಿಚಾರಗೆಟ್ಟ ನಾಟಕಕ್ಕೆ ಮಂಗಳ ಹಾಡಬೇಕಾದರೆ ಎಲ್ಲ ರಾಜಕೀಯ ಪಕ್ಷಗಳು ಒಮ್ಮನಸ್ಸಿನಿಂದ ೧೦ನೇ ಶೆಡ್ಯೂಲ್‌ನಲ್ಲಿರುವ ಶಾಸನವನ್ನು ಸಂಸತ್ತಿನಲ್ಲಿ ಚರ್ಚಿಸಿ ಮರುರೂಪಿಸುವ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಾಗಿದೆ.