ಆಟವಾಡುತ್ತಿದ್ದ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವು
ಕೊಪ್ಪ: ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಸಂಭವಿಸಿದೆ.
ಸೀಮಾ(6), ರಾಧಿಕಾ (2), ಮೃತ ಮಕ್ಕಳು, ಮಧ್ಯ ಪ್ರದೇಶ ಮೂಲದ ಸುನೀತಾ ಎಂಬುವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದರು.
ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕಾಫಿ ತೋಟಕ್ಕೆ ಹೋಗಿದ್ದ ತಾಯಿ ಕೂಲಿ ಮುಗಿಸಿ ಮತ್ತೆ ಮನೆಗೆ ಬಂದಾಗ ಮಕ್ಕಳು ನಾಪತ್ತೆಯಾಗಿದ್ದರು.
ಗಾಬರಿಗೊಂಡ ತಾಯಿ ಸುನಿತಾ ಸುತ್ತಮುತ್ತಲಿನ ಕಾರ್ಮಿಕರಿಗೆ ಮಕ್ಕಳು ಇಲ್ಲದಿರುವ ವಿಷಯವನ್ನು ತಿಳಿಸಿದಾಗ ಕಾರ್ಮಿಕರು ಸುತ್ತ ಪರಿಶೀಲನೆ ನಡೆಸಿದಾಗ ಸಮೀಪದ ಬಾವಿಯಲ್ಲಿ ಮಕ್ಕಳ ಮೃತ ದೇಹ ಪತ್ತೆಯಾಗಿದೆ.
ತಾಯಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋದಾಗ ಆಟವಾಡುತ್ತಾ ಭಾವಿಯ ಬಳಿ ಬಂದು ಆಯ ತಪ್ಪಿ ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭೂ ಮಟ್ಟದಿಂದ ಬಾವಿ ಕೇವಲ ಮೂರರಿಂದ ನಾಲ್ಕು ಅಡಿಯಷ್ಟು ನೀರಿನ ಮಟ್ಟ ಇದ್ದು ಕೈಗೆ ತಾಕುತ್ತದೆ.
ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.