ಆಡಳಿತದಲ್ಲಿ ಸಂಘರ್ಷದ ಬದಲು ಸಹಮತದ ಮಾರ್ಗವೇ ಸೂಕ್ತ
ಸರ್ಕಾರದ ಆಡಳಿತ ವ್ಯವಹಾರದಲ್ಲಿ ಕಾರ್ಯ ನಿರ್ವಹಣೆಯ ಜವಾಬ್ದಾರಿ ಕೇವಲ ಅಧಿಕಾರಸ್ಥರಿಗೆ ಮಾತ್ರವೇ ಸೀಮಿತವಾಗಿಲ್ಲ. ಜನತಂತ್ರ ಪದ್ಧತಿಯಲ್ಲಿ ಹಕ್ಕೊತ್ತಾಯ ಮಂಡಿಸುವ ಸ್ಥಾನದಲ್ಲಿರುವ ಪ್ರತಿಪಕ್ಷಗಳ ಮಾತನ್ನು ಆಲಿಸಿ ಗುಣಾವಗುಣಗಳನ್ನು ಪರಾಮರ್ಶಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳುವ ಪರಮಾಧಿಕಾರ ಇರುವುದು ಸರ್ಕಾರಕ್ಕೆ. ಮುಖ್ಯಮಂತ್ರಿ ನೇತೃತ್ವದ ಮಂತ್ರಿ ಪರಿಷತ್ತಿನ ಸೂತ್ರಧಾರತ್ವ ಇರುವ ಸರ್ಕಾರದ್ದೇ ನಿರ್ಣಯಾಧಿಕಾರ. ಇದರ ಜಾರಿ ಪ್ರಕ್ರಿಯೆ ಅಧಿಕಾರವಿರುವುದು ಅಧಿಕಾರಶಾಹಿಗೆ. ಕಾನೂನಿನ ಅರ್ಥ ವ್ಯಾಪ್ತಿಗಳನ್ನು ವಿಶ್ಲೇಷಿಸಿ ರಾಜ್ಯಾಂಗ ಸಂಲಗ್ನತೆಯನ್ನು ವಿವರಿಸುವ ಸಾಮರ್ಥ್ಯವಿರುವ ವಕೀಲರದು ಆಡಳಿತದಲ್ಲಿ ಸಲಹೆಗಾರನ ಪಾತ್ರ. ಜನರ ಭಾವಕೋಶವನ್ನು ಗುರುತಿಸಿ ಅಭಿಪ್ರಾಯ ನಿರೂಪಕರು ಹಾಗೂ ನಿರ್ಣಯ ಕೈಗೊಳ್ಳುವವರಿಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವವರು ಮಾಧ್ಯಮದ ಕಾರ್ಯಕರ್ತರು. ಈ ಎಲ್ಲಾ ಅಂಗಗಳು ಕೂಡಾ ಪರಸ್ಪರ ಪೂರಕ. ಒಂದಕ್ಕೊಂದು ಹೊಂದಿಕೊಂಡೇ ಕೆಲಸ ಮಾಡುವುದು ಈ ಆಡಳಿತದ ಸೌಂದರ್ಯ. ರಾಮನಗರದಲ್ಲಿ ಜರುಗಿರುವ ಪೊಲೀಸರು ಹಾಗೂ ವಕೀಲರ ನಡುವಣ ಸಂಘರ್ಷ ಬೀದಿ ಕಾಳಗಕ್ಕೆ ತಿರುಗಿ ಈಗ ರಾಜಕೀಯ ಬಣ್ಣ ಮೆತ್ತಿಕೊಳ್ಳುತ್ತಿರುವ ಸಂದರ್ಭದಲ್ಲಿ ಬಹಳ ಎಚ್ಚರದಿಂದ ಸಾರ್ವಜನಿಕರ ವಿಶ್ವಾಸಕ್ಕೆ ಭಂಗ ಬಾರದ ರೀತಿಯಲ್ಲಿ ಎಲ್ಲಾ ಅಂಗಗಳು ಕೂಡಾ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಪರಿಸ್ಥಿತಿ ಬೇಡುತ್ತಿದೆ. ಈ ಅಂಗಗಳ ಪೈಕಿ ಯಾವುದೂ ಮೇಲಲ್ಲ - ಹಾಗೆಯೇ ಯಾವುದೂ ಕೀಳಲ್ಲ. ಎಲ್ಲವೂ ಸರಿಸಮಾನ. ಜವಾಬ್ದಾರಿ ಮತ್ತು ಕರ್ತವ್ಯಗಳು ಬೇರೆ ಬೇರೆ.
ರಾಮನಗರದಲ್ಲಿ ಜರುಗಿರುವ ಪ್ರಕರಣದ ಬಗ್ಗೆ ವಿವರಗಳನ್ನು ವಿಶ್ಲೇಷಿಸುವ ಸಮಯ ಇದಲ್ಲ. ಏಕೆಂದರೆ, ಸಂಘರ್ಷಕ್ಕೆ ಮಂಗಳ ಹಾಡಬೇಕಾದಾಗ ವಿಶ್ಲೇಷಣೆಯ ರೂಪದಲ್ಲಿ ನೀರನ್ನು ಮತ್ತಷ್ಟು ಕದಡುವುದು ಸಾಧುವಾದ ಮಾರ್ಗವಲ್ಲ. ಹೀಗಾಗಿ ಜರುಗಿರುವ ಘಟನಾವಳಿಯಲ್ಲಿ ಅತಿರೇಕಗಳು ನುಸುಳಿದ್ದರೆ ಅದನ್ನು ಪರಸ್ಪರ ಮಾತುಕತೆಯ ಮೂಲಕ ಸರಿಪಡಿಸಿಕೊಂಡು ಮುನ್ನಡೆಯಬೇಕಾದದ್ದು ಪೊಲೀಸರು ಹಾಗೂ ವಕೀಲರ ಧರ್ಮ. ಸಾಮಾನ್ಯವಾಗಿ ಸಣ್ಣಪುಟ್ಟ ಘಟನೆಗಳ ಸಂದರ್ಭದಲ್ಲಿ ಬಳಕೆಯಾಗುವ ಶಬ್ದಗಳು ಹಾಗೂ ಅನಗತ್ಯವಾಗಿ ಪ್ರಯೋಗವಾಗುವ ಅಧಿಕಾರದ ಪ್ರಭಾವ ಸಾಮಾನ್ಯ ಪರಿಸ್ಥಿತಿಯನ್ನು ಅಸಾಮಾನ್ಯ ಪರಿಸ್ಥಿತಿಗೆ ಕೊಂಡೊಯ್ಯಬಹುದು. ಲಭ್ಯವಾಗಿರುವ ವರದಿಗಳ ಪ್ರಕಾರ ರಾಮನಗರದ ಈಗಿನ ಪರಿಸ್ಥಿತಿಗೆ ಕಾರಣವೂ ಇದೇ. ಕೋಪವನ್ನು ಬುದ್ಧಿಯ ಕೈಗೆ ಯಾವತ್ತಿಗೂ ಕೊಡಬಾರದು. ಆದರೆ, ಹೃದಯಕ್ಕೆ ಈ ಕೋಪದಲ್ಲಿರುವ ತಾಪದ ಪೂರ್ವಾಪರ ಅರ್ಥವಾಗಬಹುದು. ಬುದ್ಧಿಗೆ ಅರ್ಥವಾಗುವುದು ಕೇವಲ ಪ್ರತಿಷ್ಠೆ ಮತ್ತು ಅಹಮಿಕೆ ಮಾತ್ರ. ಸರ್ಕಾರಗಳು ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದಾಗ ಸಂಘರ್ಷ ತಣ್ಣಗಾದರೂ ಬೂದಿ ಮುಚ್ಚಿದ ಕೆಂಡಕ್ಕೆ ತಿರುಗುವುದು ಖಂಡಿತ. ಇದಕ್ಕಾಗಿ ಸರ್ಕಾರದವರು ಮಾಡಬೇಕಾದ ಕೆಲಸವೆಂದರೆ ನಿಷ್ಪಕ್ಷಪಾತ ದೃಷ್ಟಿಕೋನಕ್ಕೆ ಹೆಸರಾದ ನಿಷ್ಣಾತ ಹಿರಿಯ ಅಧಿಕಾರಿಗಳು ಹಾಗೂ ವಕೀಲರ ನಿಯೋಗದ ಮೂಲಕ ಇಂತಹ ಸಂಧಾನ ಮಾತುಕತೆಗಳು ನಡೆಯುವಂತೆ ಮಾಡಿ ಮುಂದೆ ಎಲ್ಲಿಯೂ ಕೂಡಾ ಇಂತಹ ದುರ್ಘಟನೆ ಜರುಗದಂತೆ ಮುನ್ನೆಚ್ಚರಿಕೆ ವಹಿಸಬಹುದು.
ಸರ್ವೆಸಾಮಾನ್ಯವಾಗಿ ಆಡಳಿತ ವ್ಯವಹಾರದ ಹಲವಾರು ಸಂದರ್ಭಗಳಲ್ಲಿ ಪೊಲೀಸರು ಹಾಗೂ ವಕೀಲರ ಸಹಯೋಗ ಅಪೇಕ್ಷಿತ. ಮಾಧ್ಯಮದ ಸಹಯೋಗವೂ ಈ ಸಂದರ್ಭದಲ್ಲಿ ನಿರೀಕ್ಷಿತವೇ. ಅನೇಕ ಸಂದರ್ಭಗಳಲ್ಲಿ ಪೊಲೀಸರು ಹಾಗೂ ಮಾಧ್ಯಮದ ನಡುವೆ ಘರ್ಷಣೆಗಳು ಜರುಗಿರುವ ನಿದರ್ಶನಗಳು ಸಾಕಷ್ಟು ಇವೆ. ಹಾಗೆಯೇ ವಕೀಲರು ಹಾಗೂ ಪತ್ರಕರ್ತರ ನಡುವೆ ಜರುಗಿರುವ ಜಟಾಪಟಿಗಳು ಇವೆ. ಇದು ಸಾಲದು ಎಂಬಂತೆ ಪೊಲೀಸರು ವಕೀಲರ ನಡುವೆ ಹಲವಾರು ಕಡೆ ಘರ್ಷಣೆ ಜರುಗಿರುವ ಘಟನಾವಳಿಗಳಿವೆ. ಯಾರೋ ಒಬ್ಬರು ತಮ್ಮ ಜವಾಬ್ದಾರಿ ನಿರ್ವಹಣೆಯ ಉತ್ಸಾಹದಲ್ಲಿ ಮಿತಿ ಮೀರಿದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಅತಿರೇಕವಾಗಿ ನಡೆದುಕೊಂಡಾಗ ಇನ್ನೊಬ್ಬರು ಅದಕ್ಕೆ ಪ್ರತಿಯಾಗಿ ಸೇರಿಗೆ ಸವ್ವಾಸೇರು ಎನ್ನುವ ರೀತಿಯಲ್ಲಿ ತಿರುಗಿಬಿದ್ದಿರಬಹುದು. ಕ್ರಿಯೆಗೆ ಪ್ರತಿಕ್ರಿಯೆ ಸರ್ವೆಸಾಮಾನ್ಯ. ಇಂತಹ ಕ್ರಿಯೆಗಳು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಬ್ಬಿಬ್ಬರ ನಡುವೆ ಜರುಗುವ ತಿಕ್ಕಾಟ ಮಾತ್ರ. ಆದರೆ, ಅಂತೆಕಂತೆಗಳ ಮೇಲೆ ಬಣ್ಣ ಕಟ್ಟಿ ವಿವಾದದ ಧೂಳನ್ನು ಎಬ್ಬಿಸುವ ಹಿತಾಸಕ್ತರಲ್ಲಿ ಪಟ್ಟಭದ್ರ ದೃಷ್ಟಿಕೋನ ಇರುವುದನ್ನು ಕಂಡರೂ ಪ್ರತಿಷ್ಠೆಯ ಹಂಗಿಗೆ ಬಿದ್ದವರು ಸೇಡಿನ ಗುಂಗಿಗೆ ಶರಣಾಗುವುದು ಸ್ವಾಭಾವಿಕ. ಏನೇ ಆದರೂ, ಇಂತಹ ದುರ್ಘಟನೆಗಳು ಜರುಗದಂತೆ ನೋಡಿಕೊಳ್ಳುವುದು ಆರೋಗ್ಯಕರ ಸಮಾಜದ ಜವಾಬ್ದಾರಿಯೂ ಹೌದು ಕರ್ತವ್ಯವೂ ಹೌದು. ಸರ್ಕಾರ ಈ ವಿಚಾರದಲ್ಲಿ ಎಚ್ಚರದ ಮಾರ್ಗವನ್ನು ವಹಿಸುವುದು ಎಲ್ಲ ದೃಷ್ಟಿಯಿಂದಲೂ ಶ್ರೇಯಸ್ಕರ.