For the best experience, open
https://m.samyuktakarnataka.in
on your mobile browser.

ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ

01:29 PM Oct 07, 2024 IST | Samyukta Karnataka
ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ

ನಮ್ಮ‌ ಹೈಕಮಾಂಡ ಬಹಳ ಸ್ಪಷ್ಟವಾಗಿದೆ, ಈ ಸರ್ಕಾರ ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ

ಗದಗ: ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚಟುವಟಿಕೆ ನಡೆಯುತ್ತಿದೆ. ವಿಶೇಷವಾಗಿ ಹಿರಿಯ ಸಚಿವರು ದೆಹಲಿ ಭೇಟಿ ಮಾಡುವುದು ನೋಡಿದರೆ ಗೊತ್ತಾಗುತ್ತದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಸತತ, ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ
ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಇಂತಹ ಸರ್ಕಾರದ ಪಡೆದಿರುವುದು ಕರ್ನಾಟಕದ ದೌರ್ಭಾಗ್ಯ, ಆದರೆ, ಈ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಯಾವುದೇ ಕೆಲಸಕ್ಕೆ ಭೇಟಿಯಾಗಿರಬಹುದು. ನಮ್ಮ‌ ಹೈಕಮಾಂಡ ಬಹಳ ಸ್ಪಷ್ಟವಾಗಿದೆ, ಈ ಸರ್ಕಾರ ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು. ದಸರಾ ನಂತರ ಸಿಎಂ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಅವರ ಲೆಕ್ಕಾಚಾರದಲ್ಲಿ ಹೇಳಿದ್ದಾರೆ. ನನ್ನ ಪ್ರಕಾರ ಸಿಎಂ ರಾಜೀನಾಮೆ ನೀಡಲು ಮಾನಸಿಕವಾಗಿ ತಯಾರಿ ಆಗುತ್ತಿದ್ದಾರೆ ಎಂದು ಹೇಳಿದರು.
ಜಾತಿ ಗಣತಿ ಚರ್ಚೆಯಾಗಲಿ: ಜಾತಿಗಣತಿ ವಿಷಯವಾಗಿ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿಕೆ ಪ್ರತಿಕ್ರಿಯಿಸಿ ಅವರು ಮನದಾಳದ ಮಾತು ಹೇಳಿದ್ದಾರೆ‌. ಜಾತಿಗಣತಿ ಮುಖ್ಯನೋ ಸರ್ಕಾರ ಬೀಳೋದು ಮುಖ್ಯವೋ ಅನ್ನುವುದನ್ನು ಬಿ.ಕೆ ಹರಿಪ್ರಸಾದ್ ಸ್ಪಷ್ಟ ಪಡಿಸಲಿ. ಜಾತಿಗಣತಿ ಪ್ರಕ್ರಿಯೆ ಅಲ್ಲ, ಅದು ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಮಾಡಿದ್ದು. ನಿಖರವಾಗಿ ಜಾತಿಗಣತಿಯ ಆದೇಶವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಕಮಿಟಿ ಕೊಟ್ಟ ವರದಿಯನ್ನು ಯಾಕೆ ಸ್ವೀಕರಸಿಲ್ಲ. ಜಯಪ್ರಕಾಶ್ ಹೆಗಡೆ ಅವರು ಆಯೋಗದ ಅಧ್ಯಕ್ಷರಾಗಿ 2-3 ತಿಂಗಳಲ್ಲಿ ಹೇಗೆ ವರದಿ ಕೊಡುತ್ತಾರೆ ? ಕಾಂತರಾಜ್ ಅವರು 2-3 ವರ್ಷ ಡಾಟಾ ತೆಗೆದುಕೊಂಡಿದ್ದರು. ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.. ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗ ಉದ್ದಾರ ಮಾಡುತ್ತೇವೆ ಅಂತ ಹೇಳುತ್ತಾರೆ. ಗೊಂದಲ ಸ್ಪಷ್ಟವಾಗಬೇಕು. ವೈಜ್ಞಾನಿಕವಾಗಿ ಆಗಬೇಕು. ಹಿಂದುಳಿದವರಿಗೆ ಹೆಚ್ಚಿನ ಕಾರ್ಯಕ್ರಮ ಬರಬೇಕು. ಜಾತಿಗಣತಿ ಬಿಡುಗಡೆ ಮಾಡಿ ಅಂತಾ ಮೊನ್ನೆಯೇ ಹೇಳಿದ್ದೇನೆ. ವರದಿಕೊಟ್ಟು 8-10 ತಿಂಗಳಾಯಿತು ಯಾಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮುಡಾ ಹಗರಣದ ಆರೋಪ ಬಂದಮೇಲೆ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮಾತಾಡುತ್ತಾರೆ. ಜಾತಿ ಗಣತಿ ವರದಿ ಬಿಡಿಗಡೆಗೆ ಅವರ ಪಕ್ಷದಲ್ಲಿ ಮೊದಲಿನಿಂದಲೂ ವಿರೋಧ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಶಾಮನೂರ ಶಿವಶಂಕರಪ್ಪ ವಿರೋಧಿಸಿ ಸಹಿ ಮಾಡಿಕೊಟ್ಟಿದ್ದಾರೆ. ಅವ್ರಲ್ಲಿನೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ. ಆದಷ್ಟು ಬೇಗ ಜಾತಿಗಣತಿ ಹೊರಬಂದು ಚರ್ಚೆಯಾಗಲಿ ಎಂದು ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮರು ಸ್ಥಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ಮಾಹಿತಿ ಇಲ್ಲ.ಅವರು ಮೊನ್ನೆಯೇ ಹೇಳಿದ್ದಾರೆ ಮಾಡಲಿ. ನಮ್ಮ ಪಕ್ಷ ತನ್ನದೇ ಕಾರ್ಯಕರ್ತ ಪಡೆ ಹೊಂದಿದೆ. ನಮ್ಮದು ರಾಷ್ಟ್ರೀಯ ಪಕ್ಷ ನಾವು ನಿರಂತರ ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Tags :