ಆತಂಕವಾದಿಗಳೇ ನಮ್ಮನ್ನು ಆಳುವ ಸ್ಥಿತಿ ಬರಲಿದೆ
ಉಡುಪಿ: ಇಂದು ನಡೆಯುತ್ತಿರುವ ಮತಾಂತರ, ಧಾರ್ಮಿಕ ಆಕ್ರಮಣ, ಭಯೋತ್ಪಾದನೆ, ಸೈಬರ್ ಕ್ರೈಂ, ಸ್ತ್ರೀ ಶೋಷಣೆ ಮತ್ತಿತರ ಅಸಂವಿಧಾನಿಕ ಕೃತ್ಯಗಳು ಹೀಗೆಯೇ ಮುಂದುವರಿದರೆ ಭಾರತಕ್ಕೆ ಬಹುದೊಡ್ಡ ಅಪಾಯ ಕಾದಿದೆ. ಆತಂಕವಾದಿಗಳೇ ನಮ್ಮನ್ನು ಆಳುವ ಸ್ಥಿತಿ ಬರಲಿದೆ. ಭಾರತೀಯ ಸಂಸ್ಕೃತಿ, ಧರ್ಮ, ಪರಂಪರೆ ಆಚರಿಸುವವರೇ ಸ್ವಾತಂತ್ರ್ಯ ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ ಎಂದು ಉಡುಪಿ ಶ್ರೀ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಎಚ್ಚರಿಸಿದರು.
ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ 45ನೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಅವರು ಬುಧವಾರ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ಆಶೀರ್ವಚನ ನೀಡಿದರು.
ಆಂಗ್ಲರ ದಾಸ್ಯದಿಂದ 1947ರಲ್ಲಿ ನಾವು ಮುಕ್ತಿ ಪಡೆದವು. ಆದರೆ ಇಂದಿಗೂ ಅನೇಕ ವಿಷಯಗಳಲ್ಲಿ ಗುಲಾಮರಾಗಿಯೇ ಇದ್ದೇವೆ. ನಮ್ಮ ಶಿಕ್ಷಣ ಪದ್ಧತಿ ಬ್ರಿಟಿಷರ ಅನುಕರಣೆಯೇ ಆಗಿದೆ. ಅನೇಕ ಕಚೇರಿಗಳಲ್ಲಿ ಬ್ರಿಟಿಷ್ ಪದ್ಧತಿಯೇ ಜಾರಿಯಲ್ಲಿದೆ. ಈ ನೆಲಕ್ಕೆ ತನ್ನದೇ ಆದ ಸಂಸ್ಕೃತಿ ಮತ್ತು ಬದುಕುವ ರೀತಿ, ಮೌಲ್ಯಗಳಿವೆ. ಆದರೆ ಅವುಗಳನ್ನು ದಿಟ್ಟತನದಿಂದ ಆಚರಿಸುವ, ಅನುಸರಿಸುವವರಿಗೆ ಇಂದು ಸಂಕಷ್ಟ ಎದುರಾಗಿದೆ. ಭರತ ಖಂಡದಲ್ಲಿ ಸಾವಿರಾರು ವರ್ಷಗಳಿಂದ ಋಷಿಮುನಿಗಳು, ಸಾಧು ಸಂತರು ಹಾಕಿಕೊಟ್ಟ ಹಿಂದೂ ಪರಂಪರೆಯನ್ನು ಅನುಸರಿಸುವುದೇ ತಪ್ಪು ಎಂದು ಕೆಲವರು ಚಳವಳಿಗಳನ್ನೇ ಮಾಡಿದ್ದಾರೆ. ನಮ್ಮ ಮಣ್ಣಿನ ಸನಾತನ ಪದ್ಧತಿಯಂತೆ ಬದುಕು ನಡೆಸುವುದು ‘ಜಾತ್ಯತೀತ ತತ್ವ’ಕ್ಕೆ ವಿರೋಧ ಎಂದು ಕೆಲವರು ಬಣ್ಣಿಸುತ್ತಿದ್ದಾರೆ. ಯಾವ ದೇಶದಲ್ಲಿ ಹೀಗೆ ಹೇಳುವ ಸಂವಿಧಾನ ಮತ್ತು ನೀತಿ ಇದೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ರಾಜಕೀಯ ನಾಯಕರಿಗೆ ಸಂಹಿತೆ ಇಲ್ಲವೇ ?
ರಾಜಕೀಯ ನಾಯಕರು ನಾವು ಏನು ಬೇಕಾದರೂ ಮಾಡಬಹುದು ಎಂಬ ಆ ನಿಯಂತ್ರಿತ ಸ್ವಾತಂತ್ರ್ಯವನ್ನು ಹೊಂದಿಬಿಟ್ಟಿದ್ದಾರೆ. ಅವರ ವರ್ತನೆಗೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿವೆ. ಅವರಿಗೆ ಯಾವುದೇ ಸಂಹಿತೆಗಳು ಇಲ್ಲವೇ ? ನಾಯಕರಿಗೆ ಸ್ವಾತಂತ್ರ್ಯ ಎಂಬ ಪದದ ಅರ್ಥ ತಿಳಿಯಬೇಕಿದೆ. ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರತಿಪಾದಿಸುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳನ್ನು ಧೈರ್ಯದಿಂದ ಕೈಗೊಳ್ಳುವ ಪ್ರವೃತ್ತಿ ಆಡಳಿತ ಪಕ್ಷಕ್ಕೂ ಇಂದು ಇಲ್ಲದಾಗಿರುವುದು ಬೇಸರಕರ ಎಂದು ಶ್ರೀಪಾದರು ಹೇಳಿದರು.
ಸ್ವಾತಂತ್ರ್ಯ ಎಂಬುದು ಕೇವಲ ರಾಜ ತಾಂತ್ರಿಕವಾಗಿ ಒಲಿದರೆ ಸಾಲದು. ಸನಾತನ ಭಾರತೀಯ ಪರಂಪರೆ, ಮೌಲ್ಯ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಜೀವ ವೈವಿಧ್ಯತೆಗಳನ್ನು ಸಮಗ್ರವಾಗಿ ಕಾಪಾಡುವ, ಗೌರವಯುತವಾಗಿ ಬದುಕಿ ನಾಡಿನ ಹಿತಕ್ಕೆ ಜೀವಿಸುವ ಕ್ರಮವೇ ನಿಜವಾದ ಸ್ವಾತಂತ್ರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೆಲವು ಸಾಹಿತಿಗಳು, ಕಲಾವಿದರು, ವಿಚಾರವಾದಿ ಎನಿಸಿಕೊಂಡವರು ಸನಾತನ ಪರಂಪರೆಯ ಋಷಿಗಳು, ಪುರಾಣ ಪುರುಷರು, ಮರ್ಯಾದ ಪುರುಷೋತ್ತಮರು, ವೀರ ವನಿತೆಯರ ಬಗ್ಗೆ ‘ಸೃಜನಶೀಲತೆ’ ಎಂಬ ಹೆಸರಿನಲ್ಲಿ ಮಹಾಕಾವ್ಯಗಳನ್ನೇ ತಮಗೆ ಬೇಕಾದಂತೆ ತಿರುಚಿ, ಪಾತ್ರಗಳನ್ನು ಹೀನಾಯವಾಗಿ ಚಿತ್ರಿಸುವುದು ಸರ್ವಥಾ ಸಲ್ಲದು ಎಂದು ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಸಂವಿಧಾನವು ಎಲ್ಲಿಯೂ ವಿಚ್ಛಿದ್ರಕಾರಿ ಕೃತ್ಯ ಮಾಡು ಎಂದು ಹೇಳಿಲ್ಲ ಎಂದು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉಚಿತ ಸವಲತ್ತು ಏತಕ್ಕಾಗಿ: ಯುವಕರು, ದಲಿತರು, ಆರ್ಥಿಕವಾಗಿ ಹಿಂದುಳಿದವರು,ಶೋಷಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೊದಲು ಅವರಿಗೆ ಅರ್ಹ ಉದ್ಯೋಗ ಸೃಷ್ಟಿಮಾಡಿ. ಆಳುವ ಪಕ್ಷಗಳು ಕಾಯಕ ಸಂಸ್ಕೃತಿಯನ್ನು ಬೆಂಬಲಿಸುವ ಬದಲು ‘ಉಚಿತ ಭಾಗ್ಯ’ ಗಳನ್ನು ನೀಡಿ ಒಂದು ಪೀಳಿಗೆಯನ್ನೇ ಸೋಮಾರಿಗಳನ್ನಾಗಿಸುವ ಕೃತ್ಯವನ್ನು ಮಾಡುತ್ತಿವೆ. ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಮೊದಲು ಕೈ ತುಂಬಾ ಕೆಲಸ ಕೊಡಿ. ಆನಂತರ ಸಂಬಳ, ಸವಲತ್ತು ನೀಡಿ. ಅದನ್ನು ಹೊರತುಪಡಿಸಿ ಕೇವಲ ಓಟ್ ಬ್ಯಾಂಕ್‌ಗಾಗಿ ಉಚಿತ ಸವಲತ್ತು ನೀಡಿ ಸಮಾಜವನ್ನು ದುಡಿಮೆಯಿಂದ ವಿಮುಖ ಮಾಡುವುದು ಸ್ವಾತಂತ್ರ್ಯ ಭಾರತದ ಅಭ್ಯುದಯಕ್ಕೆ ಮಾರಕ ಎಂದು ಸ್ವಾಮೀಜಿ ನೇರವಾಗಿ ವ್ಯವಸ್ಥೆ ಟೀಕಿಸಿದರು.
ಪ್ರತಿಯೊಬ್ಬರೂ ನಮ್ಮ ನೆಲ, ನಮ್ಮ ತನ, ನಮ್ಮ ರಾಷ್ಟ್ರ, ನಮ್ಮ ಸಂವಿಧಾನ ಎಂಬ ಗೌರವಾದರ ಮೂಡಿಸಿಕೊಂಡು ರಾಷ್ಟ್ರೀಯ ವಾಹಿನಿಯಲ್ಲಿ ಒಂದಾಗಬೇಕು. ಮನ ಬಂದಂತೆ ಬದುಕುವ ಸ್ವೇಚ್ಛೆಗೆ ಒಳಗಾದರೆ ಅದು ಅನಿಯಂತ್ರಿತ ಸ್ವಾತಂತ್ರ್ಯವೆಂದಾಗುತ್ತದೆ. ರಾಷ್ಟ್ರ ಘಾತಕ ಶಕ್ತಿಗಳನ್ನು ಸದೆ ಪಡೆಯುವ, ಭಯೋತ್ಪಾದನೆ ಮಟ್ಟ ಹಾಕುವ, ಭಾರತೀಯತೆಯನ್ನು ಎತ್ತಿ ಹಿಡಿಯುವ ದಿಟ್ಟ ನಿರ್ಧಾರಕ್ಕೆ ಸರ್ಕಾರ ಮುಂದಾಗಬೇಕು ಎಂದರು.