For the best experience, open
https://m.samyuktakarnataka.in
on your mobile browser.

ಆತ್ಮಶ್ಲಾಘನೆ-ಪರನಿಂದನೆ

02:00 AM Apr 02, 2024 IST | Samyukta Karnataka
ಆತ್ಮಶ್ಲಾಘನೆ ಪರನಿಂದನೆ

ಆತ್ಮಶ್ಲಾಘನೆ-ಪರನಿಂದನೆ ಸೂತ್ರ ರಾಜಕಾರಣದಲ್ಲಿ ಸರ್ವಋತು ಬಂದರಿನ ಹಾಗೆ; ಎದುರಾಳಿಗಳನ್ನು ಟೀಕಿಸಲು ಎಲ್ಲ ಸಮಯವೂ ಯೋಗ್ಯವೇ. ಇದರ ಅರ್ಥ ಸಮರ್ಥನೆಗೆ ಇರುವ ಇನ್ನೊಂದು ಅಸ್ತ್ರವೆಂದರೆ ಆತ್ಮಶ್ಲಾಘನೆ. ಚುನಾವಣೆಯ ಕಾಲದಲ್ಲಂತೂ ಈ ಸೂತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಅಷ್ಟೆ ಅಲ್ಲ ಇದಕ್ಕೆ ನಾನಾ ರೀತಿಯ ಆಯಾಮಗಳನ್ನು ಕೊಟ್ಟು ಓಬಿರಾಯನ ಕಾಲದಲ್ಲಿ ಆಗಿಹೋಗಿರುವ ಘಟನಾವಳಿಗಳನ್ನು ಅಗೆದು ಬಗೆದು ಅದಕ್ಕೆ ವರ್ತಮಾನದ ರೂಪವನ್ನು ಕೊಟ್ಟು ಮೇಲುಗೈ ಸಾಧಿಸುವ ಮಾರ್ಗವೇ ಚುನಾವಣೆಯ ಖದರ್ ಹೆಚ್ಚಲು ಮುಖ್ಯ ಕಾರಣ.
ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ, ಕೋಲಾರ ಕ್ಷೇತ್ರಗಳಲ್ಲಿ ಈಗ ಆರೋಪ ಮತ್ತು ಪ್ರತ್ಯಾರೋಪಗಳ ವಸ್ತುವೇ ಈ ಆತ್ಮಶ್ಲಾಘನೆ ಪರನಿಂದನೆ. ಸಾರ್ವಜನಿಕರ ಜ್ಞಾಪಕಶಕ್ತಿ ಕಡಿಮೆ ಎಂಬುದು ಕೆಲವರ ನಂಬಿಕೆ. ಆದರೆ, ಇದೊಂದು ಸಾರ್ವತ್ರಿಕ ಚಲಾವಣೆಯಲ್ಲಿರುವ ಮಾತಷ್ಟೆ. ಕೆಲವರಿಗೆ ಜರುಗಿಹೋಗಿರುವ ಪ್ರತಿಯೊಂದು ಘಟನಾವಳಿಯದು ಅಳಿಸಲಾಗದ ನೆನಪು. ಹೀಗಾಗಿ ಸತ್ಯ ಮಿಥ್ಯಗಳ ತುಲಾಭಾರ ಮಾಡುವ ಸಾಮರ್ಥ್ಯವಿರುವುದು ನೆನಪಿನ ದೋಣಿಯಲ್ಲಿ ವಿಹರಿಸುತ್ತಿರುವ ಸಾರ್ವಜನಿಕರಿಗೆ. ಪರಿಸ್ಥಿತಿ ಬೇರೆಯಾಗಿರಬಹುದು. ಆದರೆ, ಪಾತ್ರಗಳು ಮಾತ್ರ ಅವೇ. ಬದಲಾಗಿರುವುದೇನೆಂದರೆ ನಿರ್ವಹಿಸುವ ಪಾತ್ರಧಾರಿಗಳು ಮಾತ್ರ. ಆಗ ಗೆದ್ದವರಿಗೆ ಈಗ ಬಿದ್ದವರ ಸಾಂಗತ್ಯ. ಎಡಬಿಡಂಗಿಯಾಗಿದ್ದವರಿಗೆ ಸುವರ್ಣಾವಕಾಶ. ಯಾವ ಕ್ಷೇತ್ರದಲ್ಲಿಯೇ ನೋಡಿ ಈ ಎಡಬಿಡಂಗಿಗಳ ಆಟ ಒಂದು ರೀತಿಯಲ್ಲಿ ರಾಜಕಾರಣಕ್ಕೆ ಕಪ್ಪು ಚುಕ್ಕೆ ಬರುವ ರೀತಿಯಲ್ಲಿ ಇರುವುದು ನಿಜಕ್ಕೂ ಬೇಸರದ ಸಂಗತಿ.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಮನಸ್ಸನ್ನು ಬೇರೆ ಕಡೆ ತಿರುಗಿಸಿ ತಮ್ಮ ಮಾತಿಗೆ ಹೆಚ್ಚಿನ ಬೆಂಬಲ ಸಿಗುವಂತೆ ಮಾಡಲು ಹೊಸ ಹೊಸ ಅಸ್ತ್ರಗಳನ್ನು ಹೂಡುತ್ತಿರುವ ಬೆಳವಣಿಗೆಯೂ ಸತತವಾಗಿ ಚಾಲನೆಯಲ್ಲಿದೆ. ಭಾರತ ಹಾಗೂ ಶ್ರೀಲಂಕಾದ ನಡುವಣ ಕಛ್‌ತೀವು ನಡುಗಡ್ಡೆಯನ್ನು ಪಂಡಿತ್ ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶ್ರೀಲಂಕಾಗೆ ಬಿಟ್ಟುಕೊಡಲು ಒಪ್ಪಿದ ನಂತರ ಇಂದಿರಾಗಾಂಧಿಯವರ ಸರ್ಕಾರ ಅದನ್ನು ಅಧಿಕೃತ ಆದೇಶವಾಗಿ ಹೊರಡಿಸಿತು ಎಂಬ ಹೊಸ ಅಸ್ತ್ರವನ್ನು ಕೇಂದ್ರ ಸರ್ಕಾರ ವಿದೇಶಾಂಗ ಸಚಿವ ಜೈಶಂಕರ್ ಮೂಲಕ ಪ್ರಯೋಗಿಸಿರುವುದು ದೇಶಾದ್ಯಂತ ಚರ್ಚೆಯ ಸರಕು.
ದೇಶದ ಸಾರ್ವಭೌಮತ್ವವನ್ನು ಯಾರೊಬ್ಬರೂ ಬಿಟ್ಟುಕೊಡಲು ಸಾಧ್ಯವಿಲ್ಲ. ಒಂದಿಂಚು ಭೂಮಿಯನ್ನು ನೆರೆ ರಾಷ್ಟ್ರಗಳಿಗೆ ದಾನ ಅಥವಾ ಯಾವುದೇ ರೂಪದಲ್ಲಿ ಕೊಡಲು ಅವಕಾಶವಿಲ್ಲ. ಹಾಗಿದ್ದರೆ ಹಿಂದೆ ಈ ನಡುಗಡ್ಡೆ ಶ್ರೀಲಂಕಾ ಪಾಲಾದದ್ದು ಹೇಗೆ ಎಂಬ ಬಗ್ಗೆ ತಿಳಿಯುವ ಕುತೂಹಲ ಸಹಜವಾಗಿಯೇ ಸಾರ್ವಜನಿಕರಿಗೆ ಇದೆ. ವಿಚಿತ್ರವೆಂದರೆ ಇದನ್ನು ಖಚಿತವಾಗಿ ಹೇಳುವವರಾಗಲೀ ಇಲ್ಲವೇ ಸಮಯ ಸಂದರ್ಭವನ್ನು ವಿವರಿಸುವವರಾಗಲೀ ಯಾರೊಬ್ಬರೂ ಇಲ್ಲ. ಕೇವಲ ಲಿಖಿತ ದಾಖಲೆಗಳಷ್ಟೆ ಈ ಚರ್ಚೆಗೆ ಆಧಾರ. ಲಿಖಿತ ದಾಖಲೆಗಳಿಂತ ಮಿಗಿಲಾಗಿ ಮಾತುಕತೆಯ ಸಂದರ್ಭದಲ್ಲಿ ಜರುಗಿರಬಹುದಾದ ಒಪ್ಪಂದಗಳ ವಿವರಗಳೇ ಇಲ್ಲದೇ ಈಗ ನಿರ್ಣಯಾತ್ಮಕವಾಗಿ ವಾದಗಳನ್ನು ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ದೊಡ್ಡ ಪ್ರಶ್ನೆ. ಕೆಲವರ ದೃಷ್ಟಿಯಲ್ಲಿ ಗೋರಿ ಅಗೆಯುವ ಕೆಲಸ ಚುನಾವಣೆಯ ಸಂದರ್ಭದಲ್ಲಿ ಆಗಬೇಕಿರಲಿಲ್ಲ. ಇದು ದೇಶಕ್ಕೆ ಸಂಬಂಧಿಸಿದ ಮುಖ್ಯವಾದ ಪ್ರಶ್ನೆಯೇ. ಆದರೆ, ಚುನಾವಣೆಯ ನಂತರ ಈ ಮಹತ್ವದ ಪ್ರಶ್ನೆ ಎತ್ತಿದ್ದರೆ ನಿಷ್ಪಕ್ಷಪಾತವಾಗಿ ಚರ್ಚೆಯಲ್ಲಿ ಪಾಲ್ಗೊಂಡು ದೇಶಕ್ಕೆ ಕೈತಪ್ಪಿ ಹೋಗಿರುವ ನಡುಗಡ್ಡಿಯನ್ನು ಮರಳಿ ವಾಪಸ್ ಪಡೆಯುವ ಬಗ್ಗೆ ಮಾರ್ಗೋಪಾಯವನ್ನು ಕಂಡುಕೊಳ್ಳಬಹುದಿತ್ತು. ರಾಜಕಾರಣದಲ್ಲಿ ಸಮಯ ಸಂದರ್ಭಗಳ ಷರತ್ತುಗಳ ಇರುವುದಿಲ್ಲ.
ಅನುಕೂಲಕ್ಕೆ ಬೇಕಾದ ಸಮಯವೇ ಮುಹೂರ್ತ. ಸಂದರ್ಭವೇ ಅಮೃತಘಳಿಗೆ. ಇಂತಹ ಬೆಳವಣಿಗೆಗಳಿಂದ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಗಳ ಮೂಲಕ ದೇಶವಾಸಿಗಳ ಮಟ್ಟದಲ್ಲಿ ಜರುಗಬೇಕಾಗಿದ್ದ ಉನ್ನತ ಮಟ್ಟದ ಚರ್ಚೆ ಹೊಸ ತಿರುವನ್ನು ಪಡೆದುಕೊಂಡಿರುವುದು ಒಂದರ್ಥದಲ್ಲಿ ಪರ-ವಿರೋಧದ ಗುರುತ್ವಾಕರ್ಷಣೆಯ ಬಲ. ಚುನಾವಣೆ ಎಂದ ಮೇಲೆ ಅದರ ಮಹತ್ವವಿರುವುದು ತಟಸ್ಥ ಮತದಾರರ ಸಾಮರ್ಥ್ಯದ ಮೇಲೆ. ಇದರ ಜೊತೆಗೆ ಅದೃಶ್ಯ ಮತದಾರರು ಸೇರಿಕೊಂಡರೆ ಆಗ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಣಿಸುವ ಮೇಲುಗೈ ಮತಗಟ್ಟೆಯಲ್ಲಿ ಏರುಪೇರಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗುರುತ್ವಾಕರ್ಷಣೆಗಾಗಿಯೇ ಜಾತಿ, ವರ್ಗ, ಭಾಷೆ, ಪ್ರದೇಶ, ಬಣ್ಣ ಹೀಗೆ ಸಮಸ್ತವನ್ನು ಬಳಸಿಕೊಳ್ಳುವ ರಾಜಕೀಯ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಹ ಈಗಿನ ವಾತಾವರಣದಲ್ಲಿ ಭಾರತದ ಭವಿಷ್ಯವನ್ನು ರೂಪಿಸುವ ಲೋಕಸಭಾ ಚುನಾವಣೆಯ ಫಲಿತಾಂಶ ಯಾವ ಕಡೆ ವಾಲುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.