For the best experience, open
https://m.samyuktakarnataka.in
on your mobile browser.

ಆತ್ಮಹತ್ಯೆಯಂತೂ ಬೇಡವೇ ಬೇಡ…

04:00 AM Sep 10, 2024 IST | Samyukta Karnataka
ಆತ್ಮಹತ್ಯೆಯಂತೂ ಬೇಡವೇ ಬೇಡ…

(ಇಂದು ಆತ್ಮಹತ್ಯೆ ತಡೆಗಟ್ಟುವ ದಿನ)
ಪ್ರತಿ ವರುಷದ ಸೆಪ್ಟೆಂಬರ್ ೧೦ನೇ ತಾರೀಖು ವಿಶ್ವದಾದ್ಯಂತ ಆತ್ಮಹತ್ಯೆ ತಡೆಗಟ್ಟುವ ದಿನ'ವನ್ನು ಹಮ್ಮಿಕೊಳ್ಳುತ್ತೇವೆ. ಇದನ್ನು ಕೆಲವರು ಅದ್ದೂರಿಯಿಂದ ಹಮ್ಮಿಕೊಳ್ಳುವವರು (ಆಚರಿಸುವವರು?) ಹಲವರಾದರೆ, ಅತ್ಯಂತ ಖೇದದಿಂದ, ದುಃಖದಿಂದ ಇದರ ಬಗ್ಗೆ ಜಾಗೃತಿ ಮೂಡಿಸುವವರು ಹಲವರು. ಏಕೆಂದರೆ, ಅವರು ತಮ್ಮ ಆಪ್ತರನ್ನಾಗಲೀ, ಸಂಬಂಧಿಕರನ್ನಾಗಲೀ ಈ ತರಹದ ಘೋರ ಕೃತ್ಯದಿಂದ ಕಳೆದುಕೊಂಡಿರುತ್ತಾರೆ!.ಆತ್ಮಹತ್ಯೆ' ಘೋರ ಪಾಪ, ಇದನ್ನು ಯಾರೂ ಕಾರ್ಯರೂಪದಲ್ಲಿ ತರಬಾರದೆಂದು ಶಾಸ್ತ್ರಗಳು ಬಣ್ಣಿಸಿದರೂ ಆಲಿಸುವವರು ಯಾರು? ಆತ್ಮಹತ್ಯೆ ಎಂಬ ಘೋರ ಘಟನೆಗಳು ನಡೆಯದಂತೆ, ಅವತರಿಸದಂತೆ ಜಾಗೃತಿ, ಅರಿವು ಈ ಎಲ್ಲ ಹಿಂದಿನ ದಿನಗಳಿಗಿಂತಲೂ, ಈ ದಿನಗಳಲ್ಲಿ ಮೂಡಿಸಬೇಕಾದ ಅವಶ್ಯಕತೆ ತೀವ್ರವಾಗಿದೆ. ಏಕೆಂದರೆ ಆಧುನಿಕ ಸಮಾಜ ಇಷ್ಟೆಲ್ಲಾ ಮುಂದುವರೆದರೂ, ಎಲ್ಲ ತರಹದ ಅನುಕೂಲತೆಗಳನ್ನು ಪಡೆದರೂ, ಇನ್ನೂ ಮಾನವನ "ದುರಾಸೆ" ನಿಂತಿಲ್ಲ, ಮೊಟಕುಗೊಂಡಿಲ್ಲ. "ಮಿತಿ ಮೀರಿದ ದುರಾಸೆ ಹಾಗೂ ಇತಿಮಿತಿವುಳ್ಳ ಸಾಮರ್ಥ್ಯ" ಇವೆರಡರ ಮಧ್ಯೆ "ದ್ವಂದ್ವ" ತೋರಿದಲ್ಲಿ ಆತ್ಮಹತ್ಯೆಯಂತಹ ಘೋರ ಕೃತ್ಯಗಳು ಜರುಗಿಯಾವು!
ಗಾದೆ ಸುಳ್ಳಾಗಬಲ್ಲದೇ?: "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ವಾಕ್ಯ ಪ್ರಚಲಿತದಲ್ಲಿದೆ. ಆದರೆ "ಆತ್ಮಹತ್ಯೆ"ಯ ವಿಚಾರಗಳನ್ನು ಅವಲೋಕಿಸಿದಾಗ ನಾವು ಈ ತರಹದ "ಡೆಲ್ಯೂಶನ್" ನಿಂದ ಹೊರಬರಲೇ ಬೇಕು. "ಮಾತು ಬೆಳ್ಳಿ, ಮೌನ ಬಂಗಾರ", ಎಂಬ ಗಾದೆಯನ್ನು ಎಲ್ಲರೂ ಅರಿತಿರಲು ಸಾಕು. ಆದರೆ, ಆತ್ಮಹತ್ಯೆ ತಡೆಗಟ್ಟುವ ಸಂದರ್ಭದಲ್ಲಿ "ಮಾತು ಬೆಳ್ಳಿ ಅಲ್ಲವೇ ಅಲ್ಲ, ಮಾತೇ ಬಂಗಾರ". ಏಕೆಂದರೆ ಈ ವರ್ಷದ ಆತ್ಮಹತ್ಯೆ ತಡೆಗಟ್ಟುವ ದಿನದ ಧ್ಯೇಯ ಹೀಗಿದೆ, "ಆತ್ಮಹತ್ಯೆಯ ಬಗ್ಗೆ ನಿರೂಪಣೆ ಬದಲಾಯಿಸಿ, ಸಂಭಾಷಣೆ ಪ್ರಾರಂಭಿಸಿ". ಸಂಭಾಷಣೆಗೆ ನಮ್ಮ "ಮಾತೇ" ಮುಖ್ಯ, ಅದೇ ಬಂಡವಾಳವಲ್ಲವೇ? ಆದ್ದರಿಂದಲೇ ಉದ್ಗರಿಸಬಹುದು, "ಮಾತು ಬೆಳ್ಳಿ, ಮೌನ ಬಂಗಾರ" ಎಂಬ ಗಾದೆ ಮಾತು ಇಂದು ಸುಳ್ಳಾಗಿದೆ! ಮನೋ ವೈದ್ಯರು ತಮ್ಮ "ಮಾತು" ಗಳಿಂದಲೇ(ಟಾಕ್ ಥೆರಪಿ) ಅನೇಕ ವ್ಯಕ್ತಿಗಳ ಖಿನ್ನತೆ, ಡಿಪ್ರೆಶನ್, ಆತ್ಮಹತ್ಯೆ ವಿಚಾರಗಳಿಗೆ ವಿರಾಮ ನೀಡಬಲ್ಲರು. ಏಕೆಂದರೆ ಮನೋ ವೈದ್ಯರು ರೋಗಿಯ ಸುಪ್ತ ಮನದಲ್ಲಿ ಆಳವಾಗಿ ಬೇರೂರಿರುವ ಮಾನಸಿಕ ಶಸ್ತ್ರಾಸ್ತ್ರಗಳನ್ನು(ಮೆಂಟಲ್ ಡಿಫೆನ್ಸಸ್) ಅರಿಯಬಲ್ಲರು, ಅವಲೋಕಿಸಬಲ್ಲರು.

ಏನಿದು ಕೆಟಮಿನ್ ಚಿಕಿತ್ಸೆ?
ಕೆಟಮಿನ್ ಎಂಬ ದ್ರವವನ್ನು ಮನೋ ವೈದ್ಯರು ಸುಮಾರು ೬ ರಿಂದ ೮ ಸೆಶನ್‌ಗಳಲ್ಲಿ, ಸಲೈನ್ ಬಾಟಲಿಯ ಮುಖಾಂತರ ರೋಗಿಯ ರಕ್ತನಾಳದಲ್ಲಿ ನೀಡುವವರು. ಪ್ರತಿಯೊಂದು ಚಿಕಿತ್ಸೆಯ ಅವಧಿ ಸುಮಾರು ೪೦ ನಿಮಿಷ. ಈ ಚಿಕಿತ್ಸೆಯಿಂದ ರೋಗಿಗಳು ಆತ್ಮಹತ್ಯೆ ವಿಚಾರಗಳಿಂದ, ಖಿನ್ನತೆಯಿಂದ, ಗೀಳು ವಿಚಾರಗಳಿಂದ ಸಂಪೂರ್ಣವಾಗಿ, ಅತ್ಯಂತ ತ್ವರಿತವಾಗಿ, ಎಲ್ಲರೂ ಅಚ್ಚರಿಪಡುವಂತೆ ಹೊರ ಬರುವವರು! ಇದೊಂದು ಸಂಜೀವಿನಿ ಅಥವಾ ರಾಮ ಬಾಣದ ಚಿಕಿತ್ಸೆ ಅಂದರೆ ಅತಿಶಯೋಕ್ತಿ ಆಗದು!. ಇನ್ನೊಂದು ಅತ್ಯಂತ ಸರಳ, ಸುರಕ್ಷಿತ, ತೀವ್ರ ಫಲಕಾರಿಯಾದ ಚಿಕಿತ್ಸೆ ಅಂದರೆ "ಇ.ಸಿ.ಟಿ".

ಚಿಕಿತ್ಸೆ ಇದೆಯೇ? ಫಲಕಾರಿಯೇ?
ನಿಸ್ಸಂಶಯವಾಗಿಯೂ ಚಿಕಿತ್ಸೆ ಸಂಪೂರ್ಣವಾಗಿ ಲಭ್ಯ. ಮನೋ ವೈದ್ಯರು ತಮ್ಮ "ಟಾಕ್ ಥೆರಪಿ", "ಕೌನ್ಸೆಲಿಂಗ", "ಆಪ್ತ ಸಮಾಲೋಚನೆ", "ಔಷಧಿ ಚಿಕಿತ್ಸೆ"ಗಳ ಮುಖಾಂತರ ವ್ಯಕ್ತಿಯನ್ನು ಆತ್ಮಹತ್ಯೆ ವಿಚಾರಗಳಿಂದ, ಸಾವಿನ ದವಡೆಯಿಂದ ಪಾರು ಮಾಡಬಲ್ಲರು. ಇಂದು ಅತ್ಯಂತ ಪರಿಣಾಮಕಾರಿಯಾದ ಖಿನ್ನತೆ ನಿವಾರಣೆಯ ಔಷಧಿಗಳು ಮಾರುಕಟ್ಟೆಯಲ್ಲಿಯೂ ಲಭ್ಯ.

ಮಾತನಾಡಿ, ಮಾತನಾಡಿ, ಮಾತನಾಡಿ
ಖಿನ್ನತೆವುಳ್ಳವರಿಗೆ, ಆತ್ಮಹತ್ಯೆ ವಿಚಾರಗಳಿಂದ ತತ್ತರಿಸುವವರಿಗೆ ಒಂದು ಪ್ರಮುಖ ಸಲಹೆ ಅಂದರೆ, "ಒಬ್ಬಂಟಿಯಾಗಬೇಡಿ, ನೀವು ಒಬ್ಬರೇ ಅಲ್ಲ, ಮಾತನಾಡಿ, ಮಾತನಾಡಿ, ಮಾತನಾಡಿ". ನಿಮ್ಮ ಆಪ್ತರ ಜೊತೆಗೆ, ಸಂಬಂಧಿಕರ ಜೊತೆಗೆ, ಹತ್ತಿರದವರ ಜೊತೆಗೆ, ಸ್ನೇಹಿತರ ಜೊತೆಗೆ, ನಿಮ್ಮ ಮನೋ ವೈದ್ಯರ ಜೊತೆಗೆ ಮಾತನಾಡಿ.
ನೆನಪಿಡಿ, ಆತ್ಮಹತ್ಯೆ ಎಂಬುದು ತಡೆಗಟ್ಟಬಲ್ಲ ಸಾವು. ಇದನ್ನು ಸಾಗರೋಪದಾಯದಲ್ಲಿ ನಿಲ್ಲಿಸೋಣ!. ಎಲ್ಲರ ಜೊತೆಗೆ "ಮಾತನಾಡಿ", "ಸಂಭಾಷಿಸಿ". ಈ ದಿಶೆಯಲ್ಲಿ "ಮಾತೇ ಮಾಣಿಕ್ಯ" ಎಂದು ಅರಿಯೋಣ.

ಏಕೆ ಆತ್ಮಹತ್ಯೆ? ಕಾರಣಗಳೇನು?
೧ ಮನೋ ರೋಗಗಳಾದ ಖಿನ್ನತೆ, ಮತಿ ಭ್ರಾಂತಿ, ಮದ್ಯವ್ಯಸನ, ಮಾದಕ ವಸ್ತುಗಳ ಮೇಲೆ ಅವಲಂಬನೆ.
೨ ಯಾವುದೇ ತರಹದ ನಿಂದನೆ, ಅಪವಾದ.
೩ ಸಂಬಂಧಿಕರ, ಸ್ನೇಹಿತರ ಸಾವು (ಬಿರೀವ್‌ಮೆಂಟ್), ವಿರಹ, ವಿಯೋಗ.
೪ ಗಾಢವಾದ ಸಂಬಂಧ ಮುರಿಯುವುದು, ಮೊಟಕುಗೊಳ್ಳುವುದು.
೫ ಭೀಕರ ಶಾರೀರಿಕ ಬೇನೆಗಳು-ಏಡ್ಸ್, ಕ್ಯಾನ್ಸರ್, ದೀರ್ಘಾವಧಿಯ ರೋಗಗಳು.
೬ ಬದಲಾವಣೆಗೆ ಸ್ಪಂದಿಸಲಾಗದಿರುವಿಕೆ (ಉದಾ: ನಿವೃತ್ತಿ, ವಿದೇಶಗಳಲ್ಲಿ "ರೀ ಲೊಕೇಶನ್")
೭ ಆರ್ಥಿಕ ದುಃಸ್ಥಿತಿ
೮ ವಾಸ ಸ್ಥಳದ ನಾಶ
೯ ಒಬ್ಬಂಟಿಗತನ
೧೦ ನಿರಂತರದ ಜೈಲು ವಾಸ
೧೧ ಎಲ್ಲದರಲ್ಲಿಯೂ ವೈಫಲ್ಯ
೧೨ ಗರ್ಭಾವಸ್ಥೆ, ಹೆರಿಗೆ, ಹೆರಿಗೆಯ ನಂತರ ಕಾಣಿಸಿಕೊಳ್ಳುವ "ಪೋಸ್ಟ್ ಪಾರ್ಟಮ್ ಡಿಪ್ರೆಶನ್".
೧೩ ಲೈಂಗಿಕ/ಲಿಂಗ ಗುರುತಿಸುವಿಕೆಯ ಬಗ್ಗೆ ತೀವ್ರ ತೆರನಾದ ಸಂಶಯ. (ತೃತೀಯ ಲಿಂಗಿಗಳು)
೧೪ ಸಂಸ್ಕಾರ, ಸಂಸ್ಕೃತಿಯ ಒತ್ತಡ, (ಕಲ್ಚರಲ್ ಪ್ರೆಶರ್)
೧೫ ಅನುತ್ತೀರ್ಣತೆ-ಪ್ರೇಮ ಪ್ರಕರಣಗಳಲ್ಲಿ, ಪರೀಕ್ಷೆಗಳಲ್ಲಿ.

ಲೇಖಕರು: ಡಾ. ಅಲೋಕ ವಿನೋದ ಕುಲಕರ್ಣಿ
ಮನೋರೋಗ ತಜ್ಞರು ಹುಬ್ಬಳ್ಳಿ.