For the best experience, open
https://m.samyuktakarnataka.in
on your mobile browser.

ಆದಾಯ ತೆರಿಗೆ ಆಡಿಟ್ ವರದಿ ಸಲ್ಲಿಕೆ ಅವಧಿ ವಿಸ್ತರಣೆ

10:38 PM Sep 30, 2024 IST | Samyukta Karnataka
ಆದಾಯ ತೆರಿಗೆ ಆಡಿಟ್ ವರದಿ ಸಲ್ಲಿಕೆ ಅವಧಿ ವಿಸ್ತರಣೆ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಐಟಿಆರ್ ಪೋರ್ಟಲ್‌ದಲ್ಲಿ ತಾಂತ್ರಿಕ ಅಡಚಣೆ ಕಂಡುಬಂದ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನ(ಎವೈ ೨೦೨೪-೨೫) ಆದಾಯ ತೆರಿಗೆ ಆಡಿಟ್ ವರದಿ ಸಲ್ಲಿಕೆಯ ಅಂತಿಮ ದಿನವನ್ನು ಅ. ೭ಕ್ಕೆ ವಿಸ್ತರಿಸಲಾಗಿದೆ.
ಹೆಚ್ಚಿನ ಆದಾಯ ಹೊಂದಿರುವ ಬ್ಯುಸಿನೆಸ್‌ಮನ್‌ಗಳು ಹಾಗೂ ವಿವಿಧ ವೃತ್ತಿಪರರು ಆದಾಯ ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸುವದು ಕಡ್ಡಾಯವಾಗಿದೆ. ಆದಾಯ ತೆರಿಗೆ ಆಡಿಟ್ ವರದಿ ಸಲ್ಲಿಕೆಗೆ ಸೆ. ೩೦ ಕೊನೆಯ ದಿನವಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೂರು ಬಾರಿ ಅವಧಿ ವಿಸ್ತರಣೆ ಮಾಡಿದೆ ಎಂದು ಸಿಬಿಡಿಟಿಯ ಸಹಾಯಕ ನಿರ್ದೇಶಕ ಮಿಹಿರ್ ತನ್ನಾ ತಿಳಿಸಿದ್ದಾರೆ. ಈ ಹಿಂದೆ ಕೋವಿಡ್, ತೆರಿಗೆ ಆಡಿಟ್ ಫಾರ್ಮ್ದಲ್ಲಿನ ಬದಲಾವಣೆ ಮುಂತಾದ ಕಾರಣಗಳಿಂದಾಗಿ ಅವಧಿ ವಿಸ್ತರಣೆಯಾಗಿತ್ತು. ಆದರೆ ಕೋವಿಡ್ ಹೊರತುಪಡಿಸಿ ಮತ್ತೆ ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿಲ್ಲ ಎಂದು ಮಾಧ್ಯಮವೊಂದರ ವರದಿಯು ತಿಳಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇ-ಫೈಲಿಂಗ್ ಐಟಿಆರ್ ಪೋರ್ಟಲ್ ಮೇಲಿನ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜೊತೆಗೆ ತೆರಿಗೆ ಸಂಬಂಧಿತ ಬಹಳಷ್ಟು ಮಾಹಿತಿ ಹಾಗೂ ಸಂವಹನ ಅಪ್ ಲೋಡ್ ಮಾಡುವ ಕಾರ್ಯದಿಂದಾಗಿ ಪೋರ್ಟಲ್ ಮೇಲೆ ಭಾರೀ ಒತ್ತಡ ಉಂಟಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಹಾಗೂ ತೆರಿಗೆ ಆಡಿಟ್ ವರದಿ ಸಲ್ಲಿಕೆಗೆ ಸೆ.೩೦ ಕೊನೆಯ ದಿನವಾಗಿದ್ದರಿಂದ ಅಧಿಕ ರಷಸ್ ಉಂಟಾದ ಪರಿಣಾಮ ಪೋರ್ಟಲ್‌ನಲ್ಲಿ ತಾಂತ್ರಿಕ ಅಡಚಣೆ ಕಂಡುಬಂದಿದೆ. ಇದರಿಂದಾಗಿ ಅ.೭ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತನ್ನಾ ಅವರು ತಿಳಿಸಿದ್ದಾರೆ.
ಆದಾಯ ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸುವವರಿಗೆ ಐಟಿಆರ್ ಫೈಲ್ ಮಾಡಲು ಅ.೩೧ ಕೊನೆಯ ದಿನಾಂಕವಾಗಿದೆ. ಸೆ.೪೪ಎಬಿದಡಿಯಲ್ಲಿ ಸೆ.೩೦ರೊಳಗೆ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಿಕೊಳ್ಳುವ ಕರದಾತರಿಗೆ ಅ.೩೧ರ ಡೆಡ್‌ಲೈನ್ ಅನ್ವಯಿಸುತ್ತದೆ. ಆದರೆ ೨೦೨೩-೨೪(ಎವೈ೨೦೨೪-೨೫)ರ ವರದಿಯನ್ನು ಅ.೭ರ ಹೊತ್ತಿಗೆ ಸಲ್ಲಿಸಬೇಕಿದೆ.

Tags :