ಆಧುನಿಕ ಅಮರಶಿಲ್ಪಿ ಜಕಣಾಚಾರಿ
ಭಾರತೀಯರ ಮಟ್ಟಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಆತ್ಮವೂ ಹೌದು-ಪರಮಾತ್ಮನೂ ಹೌದು; ಆತ್ಮದ ಪ್ರಜ್ಞೆ ಹಾಗೂ ಪರಿಸರವನ್ನು ಶುದ್ಧೀಕರಣಗೊಳಿಸಿದಂತೆ ಪಾರಮಾರ್ಥಿಕ ಬದುಕನ್ನು ಪರಮಾತ್ಮನಾಗಿ ಶುದ್ದೀಕರಣಗೊಳಿಸುವ ಶ್ರೀರಾಮಚಂದ್ರ ರೂಪ ಲಾವಣ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಮಹದಾನಂದ. ಆದರೆ, ಕಣ್ತುಂಬಿಕೊಳ್ಳಲು ಪ್ರತಿರೂಪವೊಂದು ಬೇಕು. ಸರ್ವಾಂತರ್ಯಾಮಿಯಾದ ದೇವರು ಜನರ ಕಣ್ಣಿಗೆ ಅಶರೀರ. ಇಂತಹ ಸಂದರ್ಭದಲ್ಲಿ ಕಲೆಗಾರರು ಹಾಗೂ ಬರಹಗಾರರು ರವಿ ಕಾಣದ್ದನ್ನು ಕವಿ ಕಂಡ ಎಂಬ ರೀತಿಯಲ್ಲಿ ಚಿತ್ರಿಸುವುದೇ ಜನರಿಗೆ ಒಂದು ಮಾದರಿ. ಈಗಿನ ಮಟ್ಟಿಗೆ ಹೇಳುವುದಾದರೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ವಿಗ್ರಹ ಮೂರ್ತಿ ಅಂತಹ ಒಂದು ಮಾದರಿ.
ಪವಾಡಸದೃಶ ರೀತಿಯಲ್ಲಿ ಇಂತಹ ಅದ್ಭುತ ಶಿಲ್ಪವನ್ನು ರೂಪಿಸಿರುವ ಕಲಾವಿದ ಅರುಣ್ ಯೋಗಿರಾಜ್ ಕೌಶಲ್ಯದಲ್ಲಿ ರಾಮಾಯಣದ ವಿವಿಧ ಪ್ರಸಂಗಗಳ ಜೊತೆಗೆ ಭಾರತೀಯ ಪರಂಪರೆಯ ದಟ್ಟ ನೆರಳು ನೋಡುವುದೇ ಒಂದು ಸೊಬಗು. ಹೊಯ್ಸಳ ಶಿಲ್ಪಕಲೆಯನ್ನು ಆಧರಿಸಿ ಜಕಣಾಚಾರಿ ಹಾಗೂ ಡಂಕಣಾಚಾರಿ ಅಮರಶಿಲ್ಪಿಗಳು ಎಂದೆನಿಸಿಕೊಂಡದ್ದು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಹೆಮ್ಮೆ. ಇದೇ ರೀತಿಯಲ್ಲಿ ಶತಮಾನಗಳ ನಂತರ ಯೋಗಿರಾಜ್-ಯೋಗಣ್ಣ ಇನ್ನೊಂದು ಕಲಾಕೃತಿಯನ್ನು ಹೊಯ್ಸಳ (ನಾಗರ ಪರಂಪರೆ) ಶೈಲಿಯಲ್ಲಿ ರೂಪಿಸಿ ಜನರ ದೃಷ್ಟಿಯಲ್ಲಿ ಅಮರಶಿಲ್ಪಿ ಪಟ್ಟವನ್ನು ಪಡೆದುಕೊಂಡಿರುವುದು ವರ್ತಮಾನದ ಹೆಮ್ಮೆ. ಅಂದ ಹಾಗೆ ಯೋಗಣ್ಣ ಅವರ ಕುಟುಂಬ ಕಲಾವಿದರ ಕುಟುಂಬ. ಇದೊಂದು ರೀತಿಯಲ್ಲಿ ಪಿತ್ರಾರ್ಜಿತ ಆಸ್ತಿ. ಮೈಸೂರು ಮೂಲದ ಯೋಗಣ್ಣನವರ ತಾತ ಬಸವಣ್ಣ ಕೂಡಾ ಶಿಲ್ಪಿ. ತಂದೆ ಯೋಗಿರಾಜ್ ಕೂಡಾ ಶಿಲ್ಪಿಯಾಗಿದ್ದವರು. ಮಗನಿಗೂ ಅದೇ ಕೌಶಲ್ಯ ರಕ್ತಗತವಾಗಿ ಬಂದಿದೆ.
ಶಿಲ್ಪಕಲೆ ಆನಂದಿಸುವಾಗ ಕಲಾವಿದನ ಕಲಾನೈಪುಣ್ಯತೆಯ ಬೆರಗು ಬಿನ್ನಾಣ ಅರ್ಥ ಮಾಡಿಕೊಂಡರಷ್ಟೆ ಕಲಾಕೃತಿಗೆ ಬೆಲೆ. ಏಕೆಂದರೆ, ಕಲಾವಿದ ಶಿಲ್ಪವೊಂದನ್ನು ಕೆತ್ತುವ ಮೊದಲು ಮನುಷ್ಯನ ದೇಹಶಾಸ್ತ್ರ ರಚನೆ, ಮನಶ್ಶಾಸ್ತ್ರದ ದೃಷ್ಟಿ ಸೃಷ್ಟಿ, ಸೌಂದರ್ಯಾಭಿಗ್ನತೆಯ ಅನನ್ಯತೆ, ಪುರಾಣದ ವಿವಿಧ ಪ್ರಸಂಗಗಳು ಹಾಗೂ ಬಹುಮುಖ್ಯವಾಗಿ ವರ್ತಮಾನದಲ್ಲಿ ಕಲಾಕೃತಿಯನ್ನು ನೋಡುವ ಮನೋಧರ್ಮ ಇವಿಷ್ಟನ್ನೂ ಸಂಶೋಧನೆಯ ಕಣ್ಣಿನಿಂದ ಅಳೆದು ಬಲ್ಲವರಿಂದ ತಿಳಿದು ಕಪ್ಪು ಶಿಲೆಗೆ ಉಳಿಯ ಪೆಟ್ಟುಗಳ ಮೂಲಕ ಆಕೃತಿಯನ್ನು ಮೂಡಿಸುವುದು ನಿಜಕ್ಕೂ ಎಂತಹ ಮೇಧಾವಿಗೂ ಸವಾಲು. ಉಳಿಗೆ ಪೆಟ್ಟು ಕೊಡಲಷ್ಟೇ ಗೊತ್ತು. ಅದಕ್ಕೆ ಕಲೆಯ ಮಹಿಮೆ ತಿಳಿಯದು. ಬಾಲರಾಮನ ಕಣ್ಣುಗಳಲ್ಲಿ ಕಾಣುವ ಮುಗ್ಧತೆ, ಕುತೂಹಲ, ಮಂದಹಾಸಗಳನ್ನು ಕೆತ್ತುವುದು ಮಹಾಕಾಯಕ. ಕಣ್ಣುಗಳಿಗೆ ಪೂರಕವಾಗಿ ತುಟಿಗಳ ಗಾತ್ರವನ್ನು ಗುರುತಿಸಿ ಮೂಗಿನ ಅಳತೆಗೆ ಸರಿಯಾಗಿ ಹೊಂದುವ ರೀತಿಯಲ್ಲಿ ಕಿವಿಗಳನ್ನು ಬಿಡಿಸುವ ವಿಧಾನ ಒಂದು ತಪಸ್ಸು. ಇದಲ್ಲದೆ ಮುಖಭಾವಕ್ಕೆ ತಲೆಗೂದಲು ಭೂಷಣ ಎಂಬುದನ್ನು ಅರಿತು ಅದನ್ನು ಹದವರಿತು ಬಿಡಿಸಿಡುವಾಗ ಏಕಾಗ್ರತೆ ಏನಾದರೂ ಕೊಂಚ ಏರುಪೇರಾದರೂ ಎಲ್ಲವೂ ಎಡವಟ್ಟು. ಹೀಗೆ ಮೈಯೆಲ್ಲ ಕಣ್ಣಾಗಿಸಿಕೊಂಡು ಶಿಲ್ಪವನ್ನು ಕೆತ್ತಿದ ಮೇಲೆ ತೃಪ್ತಿಪಟ್ಟುಕೊಂಡವರು ಕಲಾವಿದರಾಗುವುದಿಲ್ಲ. ಏಕೆಂದರೆ, ಕಲಾವಿದ ಯಾವತ್ತಿಗೂ ಇನ್ನೂ ಸುಧಾರಿಸಬೇಕು ಎಂಬ ಮನೋಧರ್ಮದ ಅತೃಪ್ತಜೀವಿ. ಬೇರೆಯವರ ಮೌಲಿಕ ಭಾವನೆಗಳನ್ನು ಆಲಿಸುವುದೇ ಆತನಿಗೆ ಪರಮಾನಂದ.
ಮೈಸೂರು ಜಿಲ್ಲೆ ಗುಜ್ಜೇಗೌಡನಪುರ ಗ್ರಾಮದ ಜಮೀನಿನಲ್ಲಿದ್ದ ಕರಿಕಲ್ಲನ್ನು ಗುರುತಿಸಿ ಅದನ್ನು ಅಯೋಧ್ಯೆಗೆ ಒಯ್ದು ಬಾಲರಾಮನ ವಿಗ್ರಹವನ್ನು ಕೆತ್ತಿರುವ ಯೋಗಣ್ಣ ನಿಜವಾಗಲೂ ಒಬ್ಬ ಯೋಗಪುರುಷ. ಏಕೆಂದರೆ, ಇಂತಹ ವಿಗ್ರಹಗಳನ್ನು ರೂಪಿಸಿಕೊಂಡು ಬಂದವರು ಕರ್ನಾಟಕದಲ್ಲೇ ಇಬ್ಬರಿದ್ದರು. ರಾಮಜನ್ಮಭೂಮಿ ಟ್ರಸ್ಟ್ ಆಯ್ಕೆಗೆ ಬಂದಿದ್ದ ಕೆತ್ತನೆಗಳ ಪೈಕಿ ಒಂದನ್ನು ಆಯ್ಕೆ ಮಾಡಬೇಕಾಗಿತ್ತು. ಹಾಗೆ ನೋಡಿದರೆ, ಆಯ್ಕೆಗೆ ಬಂದಿದ್ದ ಮೂರೂ ವಿಗ್ರಹಗಳು ಸುಂದರವಾಗಿಯೂ ಇದ್ದವು. ಆದರೆ, ಪರಿಪೂರ್ಣವಾಗಿ, ರೇಖಾಗಣಿತದಷ್ಟು ನಿಖರವಾಗಿ, ಪುರಾಣ ವರ್ತಮಾನವನ್ನು ಸಾಂಕೇತಿಕವಾಗಿ ಚೌಕಟ್ಟಿನಲ್ಲಿ ಬಿಂಬಿಸಿ ಒಳಗೆ ಬಾಲರಾಮ ವಿಜೃಂಭಿಸುವಂತೆ ರೂಪಿಸಿದ ಯೋಗಣ್ಣನ ಕೃತಿ ಆಯ್ಕೆಯಾದ ಮೇಲೆ ಆನಂದಬಾಷ್ಪ ಹರಿದದ್ದು ಯೋಗಣ್ಣನಿಗಿಂತ ಹೆಚ್ಚಾಗಿ ಟ್ರಸ್ಟ್ನ ಧರ್ಮದರ್ಶಿಗಳು ಹಾಗೂ ಇನ್ನಿತರ ಪದಾಧಿಕಾರಿಗಳದ್ದು. ಏಕೆಂದರೆ, ವಿಗ್ರಹ ಅಷ್ಟೊಂದು ನಯನಮನೋಹರ ಕಲೆಗಾರಿಕೆಯಿಂದ ಕೂಡಿತ್ತು.
ಯೋಗಣ್ಣ ಈಗ ರಾಷ್ಟ್ರಮಟ್ಟದಲ್ಲಿ ಮನೆಮಾತಾಗಿರುವ ಕಲಾವಿದ. ಸರಸ್ವತಿ ಪುತ್ರ. ಆದರೆ, ಲಕ್ಷ್ಮೀ ಒಲಿದಿರುವ ನಿದರ್ಶನಗಳು ಕಾಣುತ್ತಿಲ್ಲ. ೨೦೧೫ರಲ್ಲಿ ಬಿಜೆಪಿ-ಕೆಜೆಪಿ-ಜೆಡಿಎಸ್ ನೇತೃತ್ವದ ಮೈಸೂರು ಮಹಾನಗರ ಪಾಲಿಕೆ ಜಯಚಾಮರಾಜೇಂದ್ರ ಒಡೆಯರ್ ವಿಗ್ರಹದ ಕೆತ್ತನೆಗೆ ಕೊಡಬೇಕಾಗಿದ್ದ ೧೦ ಲಕ್ಷ ರೂಪಾಯಿ ಹಣವನ್ನು ಇನ್ನೂ ಕೊಡದೆ ನಾಳೆ ಬಾ ಧಾಟಿಯಲ್ಲಿ ಸತಾಯಿಸುತ್ತಿದ್ದು ಮರುಕ ಹುಟ್ಟಿಸುವಂತಿದೆ. ಸಾರ್ವಜನಿಕರೂ ಕೂಡಾ ವಿಗ್ರಹ ನೋಡಿ ಆರಾಧಿಸುತ್ತಿದ್ದಾರೆಯೇ ವಿನಃ ಯೋಗಣ್ಣನ ನೆರವಿಗೆ ಬರುತ್ತಿರುವ ನಿದರ್ಶನಗಳು ಕಡಿಮೆಯೆ. ರಾಜ್ಯ ಸರ್ಕಾರ ಈ ಸಂಬಂಧದಲ್ಲಿ ಕಲೆಗಾರಿಕೆಯಲ್ಲಿ ಕರ್ನಾಟಕಕ್ಕೆ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿರುವ ಯೋಗಣ್ಣನಿಗೆ ಅಮರಶಿಲ್ಪಿ ಅಥವಾ ಅದಕ್ಕೆ ಸರಿಸಮನಾದ ಪ್ರಶಸ್ತಿ ಕೊಡುವ ಜೊತೆಗೆ ಹಣಕಾಸಿನ ನೆರವನ್ನು ಒದಗಿಸಿ ಕಲೆ ಹಾಗೂ ಕಲೆಗಾರಿಕೆಗೆ ಪ್ರೋತ್ಸಾಹಿಸುವುದು ಸಾಧುವಾದ ಒಂದು ಕ್ರಮ. ಏನೇ ಆದರೂ ಯೋಗಣ್ಣ ಅಮರಶಿಲ್ಪಿಯಾದದ್ದು ನಮಗೆಲ್ಲ ಹೆಮ್ಮೆ.