ಆಧುನಿಕ ಯುಗದ ಕೃಷ್ಣಾವತಾರ
‘ಲಾಯಲ್’ ಕಥೆಗೆ ‘ರಾಯಲ್’ ಟಚ್
ಚಿತ್ರ: ರಾಯಲ್
ನಿರ್ದೇಶನ: ದಿನಕರ್ ತೂಗುದೀಪ
ನಿರ್ಮಾಣ: ಜಯಣ್ಣ ಕಂಬೈನ್ಸ್
ತಾರಾಗಣ: ವಿರಾಟ್, ಸಂಜನಾ, ಅಚ್ಯುತ್ ಕುಮಾರ್, ಛಾಯಾ ಸಿಂಗ್, ರಘು ಮುಖರ್ಜಿ ಇತರರು.
ರೇಟಿಂಗ್ಸ್: 3.5
- ಗಣೇಶ್ ರಾಣೆಬೆನ್ನೂರು
ಸೂಟು-ಬೂಟು ಹಾಕಿಕೊಂಡು ತಿರುಗಬೇಕು… ಕೈಗೊಂದು, ಕಾಲಿಗೊಂದು ಆಳಿರಬೇಕು. ಚಿಟಿಕೆ ಹೊಡೆದರೆ ಟೀ-ಕಾಫಿ ಬರಬೇಕು. ಹೊರಗೆ ಸುತ್ತಾಡಲು ಥರಹೇವಾರಿ ಕಾರುಗಳಿರಬೇಕು…
ಹೀಗೆಲ್ಲ ಹಗಲು ಹೊತ್ತಿನಲ್ಲೇ ‘ಐಷಾರಾಮಿ ಕನಸು’ ಕಾಣುವ ನಾಯಕ… ಮುಂದೊಂದು ದಿನ ಅದೇ ನನಸಾಗಬಹುದು ಎಂದು ಯಾವುದೇ ಕನಸಿನಲ್ಲೂ ಅಂದು -ಕೊಂಡಿರಲಿಲ್ಲ..! ಆದರೂ ಆತನ ‘ಐಷಾರಾಮಿ ಕನಸು’ ನನಸಾಗುತ್ತದೆ. ಮುಂದೇನು..?
ಮೊದಲಾರ್ಧ ‘ಕೃಷ್ಣಲೀಲೆ’ ನೋಡಿದವರಿಗೆ ದ್ವಿತೀಯಾರ್ಧ ‘ಕೃಷ್ಣಾವತಾರ’ ದರ್ಶನವಾಗುತ್ತದೆ. ತಾಯಿ ಹೇಳಿಕೊಟ್ಟ ಪಾಠ, ತಂದೆಯ ಗುಣ, ಜೀವನದ ಗಾಢ ಅನುಭವ ಎಲ್ಲವೂ ಮಿಳಿತಗೊಂಡು ಆತ ತನ್ನದೇ ದಾರಿ ಮಾಡಿಕೊಂಡಿರುವ ಆಧುನಿಕ ಕೃಷ್ಣ. ಎದುರಾಳಿಗಳು ಯಾರೇ ಆದರೂ ಅವರನ್ನು ತನ್ನ ಚಾಣಾಕ್ಷತನದಿಂದಲೇ ಮಣಿಸುವ ಚಾತುರ್ಯತೆ ನಾಯಕನಿಗೆ ಒಲಿದಿರುತ್ತದೆ. ಅದಕ್ಕೂ ಬಗ್ಗದಿದ್ದರೆ; ದಂಡಂ ದಶಗುಣಂ..!
ಕೌಟುಂಬಿಕ ಹಿನ್ನೆಲೆ, ಪ್ರೀತಿ, ಕಾಮಿಡಿ, ಸಾಂಗು, ಆಕ್ಷನ್… ಹೀಗೆ ಎಲ್ಲವನ್ನೂ ಅಡಕವಾಗಿಸಿ ಒಂದು ಕಮರ್ಷಿಯಲ್ ಚೌಕಟ್ಟಿನಲ್ಲಿ ಯುವ ನಾಯಕನಿಗೆ ಎಷ್ಟೆಲ್ಲಾ ಲಿಫ್ಟ್ ಮಾಡಬಹುದೋ ಅಷ್ಟನ್ನೂ ಚಾಚೂ ತಪ್ಪದೇ ಮಾಡಿದ್ದಾರೆ ನಿರ್ದೇಶಕ ದಿನಕರ್. ಮಾಸ್-ಕ್ಲಾಸ್ ಅಂಶಗಳನ್ನು ಒಳಗೊಂಡಿರುವ ‘ಲಾಯಲ್’ ಕಥೆಗೆ ‘ರಾಯಲ್’ ಟಚ್ ಕೊಟ್ಟು ಆದಷ್ಟೂ ‘ರಿಯಲ್’ಗೆ ಹತ್ತಿರವಾಗುವಂತೆ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆ ಹುಸಿಗೊಳ್ಳುವುದಿಲ್ಲ.
‘ಕಿಸ್’ ಮೂಲಕ ಭರವಸೆ ಮೂಡಿಸಿದ್ದ ವಿರಾಟ್, ಇಲ್ಲಿ ಅಬ್ಬರಿಸುತ್ತಾರೆ, ಥೇಟ್ ಕೃಷ್ಣನಂತೆ ಹಲವು ಲೀಲೆಗಳನ್ನು ಪ್ರದರ್ಶಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟೂ ಲವಲವಿಕೆಯಿಂದಲೇ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸಂಜನಾ, ಅಚ್ಯುತ್ ಕುಮಾರ್, ಛಾಯಾ ಸಿಂಗ್, ರಘು ಮುಖರ್ಜಿ ಪಾತ್ರಕ್ಕೆ ತಕ್ಕ ಅಭಿನಯ. ಚರಣ್ ರಾಜ್ ಸಂಗೀತ ಸಿನಿಮಾಕ್ಕೆ ಪೂರಕವಾಗಿದೆ.