ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಒತ್ತು
ತೀರ್ಥಕ್ಷೇತ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಈ ಬಾರಿ ಒತ್ತು ದೊರಕಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟದ ಪ್ರಗತಿಗೆ ೧೦೦ ಕೋಟಿ ರೂಪಾಯಿ ಅನುದಾನ, ಸುಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಲಾಗಿದೆ.
ಈಗಿರುವ ಪ್ರವಾಸೋದ್ಯಮ ನೀತಿಯಲ್ಲಿ ಇನ್ನಷ್ಟೂ ಅಂಶಗಳನ್ನು ಸೇರ್ಪಡೆ ಮಾಡಿ ಮುಂಬರುವ ಐದು ವರ್ಷಗಳಲ್ಲಿ ಕೈಗೊಳ್ಳುವ ಯೋಜನೆ ದೃಷ್ಟಿಯಾಗಿರಿಸಿಕೊಂಡು ಪರಿಷ್ಕೃತ ಪ್ರವಾಸೋದ್ಯಮ ನೀತಿ ೨೦೨೪-೨೯ ಜಾರಿಗೆ ತರುವ ನಿರ್ಧಾರ ಪ್ರಕಟಿಸಲಾಗಿದ್ದು, ಎಲ್ಲ ಪ್ರಕಾರಗಳ ಪ್ರವಾಸೋದ್ಯಮಕ್ಕೆ ಆದ್ಯತೆ ದೊರಕಿದೆ.
ದೇಶದಲ್ಲಿಯೇ ಮೊದಲಾಗಿ ರಾಜ್ಯದ ೫೩೦ ಸಂರಕ್ಷಿತ ಸ್ಮಾರಕಗಳನ್ನು ೩-ಡಿ ಲೇಸರ್ ಸ್ಕ್ಯಾನಿಂಗ್ ಡಿಜಿಟಲ್ ದಾಖಲೀಕರಣಕ್ಕೆ ಇನ್ನಷ್ಟೂ ಉನ್ನತ ಸ್ಪರ್ಶ, ಪ್ರಮುಖ ಜಲಾಶಯಗಳ
ಹಿನ್ನಿರಿನಲ್ಲಿ, ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆ, ಜಲಸಾಹಸ ಪ್ರವಾಸೋದ್ಯಮ ಪ್ರಗತಿ, ಗೋಕಾಕ್ ಜಲಪಾತವನ್ನು ಪ್ರವಾಸಿ ತಾಣವಾಗಿ ಪ್ರಗತಿ, ಆಯ್ದ ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಅಳವಡಿಕೆ, ಬೀದರ ಹಾಗೂ ವಿಜಯಪುರದಲ್ಲಿ ಪುರಾತನ ಜಲಸರಬರಾಜು ವ್ಯವಸ್ಥೆಯ ಪುನರುಜ್ಜೀವನಕ್ಕೆ ೧೫ ಕೋಟಿ ರೂ. ಮೀಸಲು, ಬಂಡಿಪೂರ, ದಾಂಡೇಲಿ, ಕಬನಿಯಲ್ಲಿ ೨೫ ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಕೇಂದ್ರಗಳನ್ನು ಜೆಎಲ್‌ಆರ್ ಸಂಸ್ಥೆಯ ಮೂಲಕ ಸ್ಥಾಪನೆ, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿರ್ಧಾರ ಪ್ರಕಟವಾಗಿದೆ. ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯ ರಾಷ್ಟ್ರಕೂಟರ ಕಾಲದ ಕಲಬುರ್ಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ನಾಗಾವಿಯಲ್ಲಿ ಸಂಶೋಧನೆ ನಡೆಸಲು ಕೇಂದ್ರ ಪುರಾತತ್ವ ಇಲಾಖೆಗೆ ಶಿಫಾರಸ್ಸು ಮಾಡು ನಿರ್ಧಾರವನ್ನು ಸಹ ಪ್ರಕಟಿಸಲಾಗಿದೆ.
ಐಹೊಳೆಯಲ್ಲಿ ಹೈಟೆಕ್ ಹೋಟೆಲ್
ಬಾಗಲಕೋಟೆ ಜಿಲ್ಲೆಯ ಐಹೊಳೆಯಲ್ಲಿ ಅತ್ಯಾಧುನಿಕ ಸೌಕರ್ಯವುಳ್ಳ ಹೋಟೆಲ್ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ಐಹೊಳೆ ಮೊದಲಾದ ಭಾಗಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಈ ಯೋಜನೆ ಪ್ರಕಟಿಸಲಾಗಿದೆ. ರೋರಿಚ್ ಹಾಗೂ ದೇವಿಕಾರಾಣಿ ಎಸ್ಟೇಟ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವ ನಿರ್ಧಾರ ಸಹ ಪ್ರಕಟವಾಗಿದೆ.
ಆಧ್ಯಾತ್ಮಿಕ, ಪರಿಸರ, ಜಲಸಾಹಸ, ಹಾಗೂ ಸಾಂಪ್ರದಾಯಿಕ ಹೀಗೆ ಎಲ್ಲ ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಧಾರ ಪ್ರಕಟವಾಗಿದ್ದು, ಎಲ್ಲ ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದ್ದು, ಎಲ್ಲ ಸ್ಮಾರಕಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ಒದಗಿಸುವ ಇಂಗಿತ ವ್ಯಕ್ತವಾಗಿರುವುದು ಪ್ರವಾಸೋದ್ಯಮ ವಲಯಕ್ಕೆ ಆಶಾದಾಯಕವಾಗಿದೆ. ಜಲಸಾಹಸ ಹಾಗೂ ಕ್ರೀಡೆಗಳಿಗೆ ಉತ್ತೇಜನ ಹಾಗೂ ಕೇಬಲ್ ಕಾರುಗಳ ಅಳವಡಿಕೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.