ಆಪರೇಷನ್ ಕಮಲ: ದಾಖಲೆ ಆಡಿಯೋ ಇದ್ದರೆ ಬಿಡುಗಡೆ ಮಾಡಲಿ
ಬೆಳಗಾವಿ: ಆಪರೇಶನ್ ಕಮಲ ಸುದ್ದಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸೇರಿದಂತೆ ಹಲವರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಬಾಂಬ್ ಸಿಡಿಸಿದ್ದಾರೆ.
ಆದರೆ, ಈ ಹೇಳಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವುದು ನಿಜವಲ್ಲ ಎಂದು ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಪಕ್ಷದ ಶಾಸಕರಿಗೆ ಬಿಜೆಪಿ ಹಣದ ಆಮಿಷ ಒಡ್ಡುತ್ತಿದೆ ಎಂಬ ಆರೋಪ ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಭಾರಿ ಸದ್ದು ಮಾಡಲು ಆರಂಭಿಸಿದೆ. ೫೦ ಕೋಟಿ ರೂಪಾಯಿ ಆಫರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದು ಈಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ೧೦೦ ಕೋಟಿ ರೂ. ಆಫರ್ ಹೇಳಿಕೆ ನೀಡಿದ್ದರು. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು ಎಂದು ಪ್ರಶ್ನಿಸಿದ್ದರು.
ರವಿ ಕುಮಾರ್ ಗಣಿಗ ಹೇಳಿಕೆಗೆ ಪ್ರತಿಕ್ರಿಯಿಸಿದ ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್, ಬಿಜೆಪಿಯ ಯಾವ ನಾಯಕರು ಕೂಡ ನನ್ನನ್ನು ಈಗ ಸಂಪರ್ಕ ಮಾಡಿಲ್ಲ. ಸರ್ಕಾರದ ಆರಂಭದಲ್ಲಿ ಬಿಜೆಪಿಯಿಂದ ಆಫರ್ ಬಂದಿತ್ತು. ಆಗ ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿನ ಸ್ನೇಹಿತರು ಆಹ್ವಾನ ನೀಡಿದ್ದರು ಅಷ್ಟೆ. ಆದರೆ ಈಗ ಯಾರೂ ಸಂಪರ್ಕಿಸಿಲ್ಲ. ರವಿ ಗಣಿಗ ಯಾಕೆ ಹಾಗೇ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ಯಾವುದೇ ದುಡ್ಡಿನ ಆಫರ್ ಬಂದಿಲ್ಲ. ರವಿಕುಮಾರ್ ಗಣಿಗ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂದು ಅವರನ್ನೇ ಕೇಳಿ ಎಂದು ಸಿಡಿದಿದ್ದಾರೆ. ಜತೆಗೆ ಅವರ ಬಳಿ ಆಡಿಯೋ, ವಿಡಿಯೋ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬಾಬಾಸಾಹೇಬ್ ಪಾಟೀಲ್ ಸವಾಲು ಹಾಕಿದ್ದಾರೆ.