For the best experience, open
https://m.samyuktakarnataka.in
on your mobile browser.

ಆಪ್ತ ಸಲಹೆಯ ಮೂಲ-ಭಗವದ್ಗೀತೆ

04:31 AM Dec 25, 2024 IST | Samyukta Karnataka
ಆಪ್ತ ಸಲಹೆಯ ಮೂಲ ಭಗವದ್ಗೀತೆ

ನಮ್ಮಲ್ಲಿ ಒಂದು ತಪುö್ಪ ಕಲ್ಪನೆಯಿದೆ. ಹತ್ತನೇ ತರಗತಿಯಲ್ಲಿ ಚೆನ್ನಾಗಿ ಅಂಕ ಗಳಿಸಿದವರೆಲ್ಲರೂ ಬುದ್ಧಿವಂತ ವಿದ್ಯಾರ್ಥಿಗಳು, ಅವರು ವಿಜ್ಞಾನ ವಿಷಯವನ್ನು ಓದಬೇಕು, ಪಿ.ಯು.ಸಿ. ಅಥವಾ ೧೨ನೇ ತರಗತಿಯಲ್ಲಿ ಚೆನ್ನಾಗಿ ಓದಿ ನಂತರ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ತೆಗೆದುಕೊಂಡರೆ ಮಾತ್ರ ಅವರು ಯಶಸ್ಸು ಗಳಿಸಲು ಸಾಧ್ಯ, ಅದನ್ನು ಬಿಟ್ಟು ಅವರು ವಾಣಿಜ್ಯ ಅಥವಾ ಮಾನವಿಕ ವಿಷಯಗಳನ್ನು ಓದುತ್ತಾರೆಂದರೆ ಅವರ ಬುದ್ಧಿಮತ್ತೆಯನ್ನೇ ಓರೆಗೆ ಹಚ್ಚಿ, ಅವರನ್ನು ಏನೂ ಮಾಡಲಾಗದವರು, ಸೋಮಾರಿ ಅಂತ ಪಟ್ಟ ಕಟ್ಟುವ ಪೋಷಕರು, ಶಿಕ್ಷಕ ವರ್ಗದವರೇ ಜಾಸ್ತಿ. ಕೆಲವು ವರ್ಷಗಳ ಹಿಂದೆ ನನ್ನನ್ನು ಭೇಟಿ ಮಾಡಿದ ಒಬ್ಬ ಹುಡುಗನ ಕಥೆಯೂ ಹೀಗೆಯೇ ಇದೆ.
ಆತನ ಹೆಸರು ಶ್ರೀದತ್ತ (ಹೆಸರು ಬದಲಾಯಿಸಲಾಗಿದೆ). ತಮಿಳುನಾಡಿನವರು. ಅವನ ಪೋಷಕರಿಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳು. ಇವನೂ ತುಂಬಾ ಬುದ್ಧಿವಂತ ಹುಡುಗ, ೧೦ ತರಗತಿಯಲ್ಲಿ ೯೭ಕ್ಕೂ ಹೆಚ್ಚು ಅಂಕ ಗಳಿಸಿದ್ದ. ಅವನ ಪೋಷಕರಿಗೆ ಮಗನನ್ನು ಐ.ಐ.ಟಿ.ಯಲ್ಲಿ ಓದಿಸಬೇಕೆಂಬ ಹಂಬಲವಿತ್ತು. ಕೊನೆಗೆ ಸ್ವಲ್ಪದರಲ್ಲಿ ಅದು ತಪ್ಪಿ ಹೋಗಿ ಬೆಂಗಳೂರಿನಲ್ಲೇ ಇಂಜಿನಿಯರಿಂಗ್‌ಗೆ ಸೇರಿದ್ದ.
ಆದರೆ ಇಂಜಿನಿಯರಿಂಗ್‌ನಲ್ಲಿ ಮೊದಲಿನ ಹಾಗೆ ಅಂಕ ಗಳಿಸಲಿಲ್ಲ, ಮೊದಲ ಸೆಮಿಸ್ಟರ್‌ನಲ್ಲಿ ಒಂದೆರಡು ವಿಷಯದಲ್ಲಿ ಅನುತ್ತೀರ್ಣನಾದ, ನಂತರದ ಸೆಮಿಸ್ಟರ್‌ನಲ್ಲಿ ಸ್ವಲ್ಪ ಚೆನ್ನಾಗಿ ಮಾಡಿದರೂ ಐವತ್ತರ ಪ್ರತಿಶತದಲ್ಲೇ ಇರುತ್ತಿದ್ದ. ಅವನು ಮೂರನೇ ಸೆಮಿಸ್ಟರ್‌ನಲ್ಲಿ ಇರುವಾಗ ಪೋಷಕರು ಭೇಟಿ ಮಾಡಿದರು. ಅವನ ತಾಯಿಯಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸುಮಾರು ಒಂದು ಗಂಟೆಯ ಕಾಲ ಮಾತನಾಡಿದ ಅವರು ಏನಾದರೂ ಮಾಡಿ ಮಗನನ್ನು ದಾರಿಗೆ ತರಲು ಹೇಳಿದರು. ನಂತರ ಶ್ರೀದತ್ತನನ್ನು ಒಬ್ಬನೇ ಮಾತನಾಡಿಸಿದೆ. ತುಂಬಾ ವಿಧೇಯ ವಿದ್ಯಾರ್ಥಿಯಂತೆ ಮಾತನಾಡುತ್ತಿದ್ದ. ಒಂದು ಅರ್ಧ ಗಂಟೆ ಮಾತನಾಡಿಸಿದರೂ ಯಾವ ಸಮಸ್ಯೆಯ ಅಂಶಗಳೂ ಗೋಚರಿಸಲಿಲ್ಲ. ಬಿಡುವಿದ್ದಾಗ ಏನು ಮಾಡುತ್ತೀಯ ಅಂತ ಕೇಳಿದಾಗ ಕಥೆ-ಕಾದಂಬರಿಗಳನ್ನು ಓದುತ್ತೇನೆ ಎಂದು ಹೇಳಿದ. ಮುಂದೆ ಏನು ಮಾಡಬೇಕೆಂದುಕೊಂಡಿದ್ದೀಯ ಅಂದಾಗ ಸಿವಿಲ್ ಸರ್ವಿಸ್ ಮಾಡಬೇಕೆಂದುಕೊಂಡಿದ್ದೀನಿ, ಆದರೆ ಇಂಜಿನಿಯರಿಂಗ್ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ, ಯಾವುದಾದರೂ ಮಾನವಿಕ ವಿಷಯದಲ್ಲಿ ಎಂದ. ಅವರ ತಾಯಿಯು ಮಧ್ಯೆ ಬಾಯಿ ಹಾಕಿ, ಮನೆಯಲ್ಲಿ ಓದುತ್ತೇನೆಂದು ಕೊಠಡಿಯ ಒಳಗೆ ಸೇರಿದರೆ ಮತ್ತೆ ಬರುತ್ತಿದ್ದುದು ಊಟಕ್ಕೆ ಮಾತ್ರ. ಮೊದಲಿನ ಹಾಗೆ ಮಾತುಕತೆ ಏನೂ ಇಲ್ಲ, ಆದರೆ ಬೇರೆ ಯಾವ ಕೆಟ್ಟ ಹವ್ಯಾಸಗಳೂ ಇಲ್ಲ. ಒಂದು ಹೆಮ್ಮೆಯ ವಿಚಾರವೆಂದರೆ ಇವನು ತನ್ನ ಅಜ್ಜನ ಹಾಗೆ ಪ್ರತಿದಿನವೂ ಸಂಧ್ಯಾವಂದನೆ ಮಾಡುತ್ತಾನೆ. ಅದನ್ನು ಮಾತ್ರ ತಪ್ಪಿಸುವುದಿಲ್ಲ''.ನೋಡು, ಶ್ರೀ ದತ್ತ, ನಿನ್ನ ಸಿವಿಲ್ ಸರ್ವಿಸ್ ಕನಸು ನನಸಾಗಬೇಕಾದರೆ ನಿನ್ನ ಪರಿಶ್ರಮವೂ ತುಂಬಾ ಇರಬೇಕಾಗುತ್ತದೆ. ಆದರೆ ನಿನ್ನ ಪರಿಶ್ರಮ, ಕಾರ್ಯಕ್ಷಮತೆ ಎಷ್ಟೆಂದು ನನಗೆ ತಿಳಿಯುತ್ತಿಲ್ಲ''.
ಸರ್, ನನಗೆ ಇಂಜಿನಿಯರಿಂಗ್ ಇಷ್ಟ ಇಲ್ಲ, ಇದರಲ್ಲಿ ಮುಂದುವರೆಯುವುದು ನನಗೆ ಇಷ್ಟ ಇಲ್ಲ. ನನ್ನ ಅಪ್ಪ-ಅಮ್ಮನಿಗೆ ಹೇಳಿದರೆ ಅವರು ಅರ್ಥ ಮಾಡಿಕೊಳ್ಳುವುದಿಲ್ಲ, ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ...''ಯಾವಾಗಲಾದರೂ ಭಗವದ್ಗೀತೆಯನ್ನು ಓದಿದ್ದೀಯಾ?''
೧೧ನೇ ತರಗತಿಯ ರಜೆಯಲ್ಲಿ ಓದಿದ್ದೇನೆ, ಅಷ್ಟೊಂದು ಅರ್ಥವಾಗಿರಲಿಲ್ಲ, ಆಮೇಲೆ ಓದಲು ಹೋಗಿಲ್ಲ'' ಎಂದ. ಅದಕ್ಕೆ ನಾನು, ನೋಡು, ಭಗವದ್ಗೀತೆಯ ಒಂದು ಶ್ಲೋಕವನ್ನು ತೆಗೆದುಕೊಳ್ಳುವಾ. ಸಾಂಖ್ಯಯೋಗದಲ್ಲಿ ಬರುವ, ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ ಇದು ಬಹಳ ಅರ್ಥವತ್ತಾದ ಶ್ಲೋಕ ಮತ್ತು ತುಂಬಾ ಜನರು ಅರ್ಥ ಮಾಡಿಕೊಳ್ಳದ, ಅಪಾರ್ಥ ಮಾಡಿಕೊಳ್ಳುವ ಶ್ಲೋಕ. ಇದು, ನೀನು ಈ ಸಮಯದಲ್ಲಿ ಮಾಡಬೇಕಾದ ನಿನ್ನ ಕರ್ತವ್ಯವನ್ನು ಹೇಳುತ್ತದೆ. ನಿನ್ನ ಕರ್ತವ್ಯವೆಂದರೆ ಅದು ನಿನ್ನ ಒಬ್ಬನ ನಿರ್ಣಯದ ಮೇಲೆ ನಿಂತಿರುವ, ನಿನ್ನ ಇಷ್ಟದ ಪ್ರಕಾರವಾಗಿ ಮಾಡುವ ಕೆಲಸವಲ್ಲ. ಕೇವಲ ನಮ್ಮ ಬಗ್ಗೆಯೇ ಯೋಚಿಸುವುದು ಭಾರತೀಯ ದೃಷ್ಟಿಕೋನವಲ್ಲ, ಹಾಗೆ ಯೋಚಿಸುವುದು ನಮ್ಮ ಪರಂಪರೆಯಲ್ಲಿ ಇಲ್ಲ. ನಮ್ಮದು ವ್ಯಕ್ತಿ ನಿಷ್ಠೆಯಲ್ಲ, ಅದು ಸಮೂಹದ, ಸಮುದಾಯದ, ಸಮಾಜದ ಮೇಲೆ ಇರುವ ನಿಷ್ಠೆ. ಅಲ್ಲಿ ಧರ್ಮವಿರುತ್ತದೆ, ಧರ್ಮವೆಂದರೆ ದೈವದ ಮೇಲೆ ಇರುವ ಭಕ್ತಿ, ಶ್ರದ್ಧೆಯಲ್ಲ, ಅದು ನೈತಿಕತೆ, ಸಾಮಾಜಿಕ ಚಿಂತನೆಯದ್ದು, ಸಮಷ್ಟಿಯದ್ದು. ಸಮಷ್ಟಿಯ ಹಿತವೇ ಧರ್ಮ. ಆ ಪ್ರಕಾರವಾಗಿ, ಈ ಸಮಯದಲ್ಲಿ ನೀನು ಸಾಂಸ್ಥಿಕವಾಗಿ ಮಾಡುವ ಕರ್ತವ್ಯವೆಂದರೆ ಅದು ಪರಿಶ್ರಮವಿಟ್ಟು ನಿನ್ನ ಕರ್ತವ್ಯವನ್ನು ಮಾಡುವುದು. ನಿನ್ನ ಈಗಿನ ಕರ್ತವ್ಯ ಕೇವಲ ಶ್ರದ್ಧೆಯಿಂದ ಓದುವುದು.ಆದರೆ, ನನಗೆ ಶ್ರದ್ಧೆಯಲ್ಲಿಯೇ ಸಮಸ್ಯೆ ಇದೆ. ಶ್ರದ್ಧೆಯೇ ಸಮಸ್ಯೆ ಅಂದುಕೊಳ್ತೀನಿ, ಅದಕ್ಕೆ ಏನು ಮಾಡುವುದು….'' ಅಂತ ರಾಗ ಎಳೆದ.
ಸಂಘರ್ಷವು ಕೋಪವನ್ನು ಹುಟ್ಟು ಹಾಕುತ್ತದೆ. ನಮ್ಮ ಅರಿವಿಗೆ ಬಾರದ ಕೋಪ ನಮ್ಮೊಳಗೇ ಜ್ವಾಲಾಮುಖಿಯನ್ನು ಸೃಷ್ಟಿಸುತ್ತದೆ. ಜ್ವಾಲಾಮುಖಿಯ ಬೆಂಕಿಯು ಸೃಷ್ಟಿಗೆ ಪ್ರಯೋಜನಕಾರಿಯಲ್ಲ, ಅದು ತಣ್ಣಗಾಗಬೇಕು. ನಿನ್ನೊಳಗಿನ ಕೋಪವನ್ನು, ಅದು ನಿನ್ನರಿವಿಗೇ ಬಾರದ ಕೋಪ ತಣ್ಣಗಾಗಬೇಕು, ಅಂದರೆ ಶಾಂತವಾಗಬೇಕು. ದೇಹ, ಮನಸ್ಸುಗಳೆರಡೂ ಶಾಂತತೆಯಲ್ಲಿದ್ದಾಗ ಸ್ವಾಸ್ಥ್ಯವು ಸಂಭವ, ಸ್ವಾಸ್ಥ್ಯವೇ ಯಶಸ್ಸಿಗೆ ಮೂಲ. ಇನ್ನೊಂದು ವಿಚಾರ, ನಿನ್ನೊಳಗಿನ ಕೋಪವು ನಿನ್ನನ್ನು ಇನ್ನೂ ಕೆಳಮಟ್ಟಕ್ಕೆ ತಳ್ಳುತ್ತಿತ್ತು, ಅದನ್ನು ಸ್ವಲ್ಪಮಟ್ಟಿಗಾದರೂ ಮಟ್ಟ ಹಾಕಿದ್ದು ನಿನ್ನ ದಿನಚರಿ, ನೀನು ಪ್ರತಿನಿತ್ಯವೂ ಮಾಡುವ ಸಂಧ್ಯಾವಂದನೆ ಎಂಬ ಶಿಸ್ತಿನ ದಿನಚರಿ, ಅದು ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ತವ್ಯ. ಅದನ್ನು ಹಾಗೇ ಮುಂದುವರೆಸು. ಬಹುಶಃ ಎಲ್ಲವೂ ಚೆನ್ನಾಗಿ ಆಗುತ್ತೆ. ಶ್ರೀದತ್ತ ಅರ್ಥವಾಯಿತೆಂದು ಗೋಣು ಅಲ್ಲಾಡಿಸಿದ, ಏನೂ ಮಾತನಾಡಲಿಲ್ಲ. ಧನ್ಯವಾದಗಳು ಅಂತ ಹೇಳಿ ಹೊರಟು ಹೋದ. ಮುಂದೆ ಒಂದು ವಾರವಾದ ಮೇಲೆ ಅವನ ತಾಯಿ ಕರೆ ಮಾಡಿದ್ದರು. ಸರ್, ಈಗ ಶ್ರೀದತ್ತ ಬದಲಾಗಿದ್ದಾನೆ. ಪ್ರತಿದಿನವೂ ಓದುತ್ತಿದ್ದಾನೆ, ಮೊದಲಿನ ಸಿಡುಕು, ಸಿಟ್ಟು ಈಗ ಕಾಣುತ್ತಿಲ್ಲ ಎಂದರು. ಅದು ಭಗವದ್ಗೀತೆಯ ಪರಿಣಾಮ, ಆಪ್ತ-ಸಮಾಲೋಚನೆಯಡಿಯಲ್ಲಿ ಅವನೊಳಗಿನ ಬೆಂಕಿಯನ್ನು ದೀಪವಾಗಿಸಿದ್ದಿದು. ಆಪ್ತ-ಸಮಾಲೋಚನೆಯಲ್ಲಿ ನಾವು ಮಾಡುವುದೂ ಅದನ್ನೇ. ಅಂದು ಕೃಷ್ಣ ಹೇಳಿದ್ದನ್ನು ಇವತ್ತೂ ನಾವು ಚಿಂತನ ಮಂಥನ ಮಾಡುತ್ತೇವೆಂದರೆ ಅದರ ಪ್ರಭಾವ, ಪರಿಣಾಮ ಸಾರ್ವಕಾಲಿಕ, ವೈಶ್ವಿಕ.