ಆಪ್‌ನಿಂದ ಪ್ರಜಾಪ್ರಭುತ್ವ ಉಳಿಸಿ-ಡಿಪಿ ಅಭಿಯಾನ
ನವದೆಹಲಿ: ಆಮ್ ಆದ್ಮಿ ಪಾರ್ಟಿ(ಆಪ್) ಸಾಮಾಜಿಕ ಜಾಲತಾಣದ ಮೂಲಕ ಪ್ರಜಾಪ್ರಭುತ್ವ ಉಳಿಸಿ ಅಭಿಯಾನವನ್ನು ಆರಂಭಿಸಿದೆ. ಈ ಕುರಿತು ವಿವರ ನೀಡಿದ ಸಚಿವೆ ಆತಿಶಿ, ಈ ಡಿ.ಪಿ.(ಡಿಸ್‌ಪ್ಲೇ ಪಿಚ್ಚರ್) ಅಭಿಯಾನಕ್ಕೆ ಸಾರ್ವಜನಿಕರಿಂದ ಬೆಂಬಲ ಕೋರಿದರು.
ಆಪ್ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಎಕ್ಸ್, ಫೇಸ್‌ಬುಕ್, ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಪಿಯನ್ನು ಹಾಕಿಕೊಳ್ಳಲಿದ್ದಾರೆ. ಇದರಲ್ಲಿ ಮೋದಿ ಕಾ ಸಬ್ಸೆ ಬಡಾ ಡರ್ ಕೇಜ್ರೀವಾಲ್ (ಮೋದಿಗೆ ಅತ್ಯಂತ ಹೆದರಿಕೆ ಎಂದರೆ ಕೇಜ್ರೀವಾಲ್) ಎಂದು ಬರೆದಿರಲಾಗುತ್ತದೆ.
ಮೋದಿಗೆ ಸರಿಯಾಗಿ ಸವಾಲು ಹಾಕುವ ವ್ಯಕ್ತಿಯಾಗಿದ್ದಾರೆ ಕೇಜ್ರೀವಾಲ್. ಆದ್ದರಿಂದ ಯಾವುದೇ ಸಾಕ್ಷಾö್ಯಧಾರ ಇಲ್ಲದಿದ್ದರೂ, ಚುನಾವಣೆ ಪ್ರಕಟವಾದ ಕೂಡಲೇ ಕೇಜ್ರೀವಾಲ್ ಅವರನ್ನು ಬಂಧಿಸಲಾಗಿದೆ. ಅಬಕಾರಿ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ ಎರಡು ವರ್ಷಗಳಿಂದ ತನಿಖೆ ನಡೆಸುತ್ತಿದ್ದರೂ, ಇದುವರೆಗೆ ಒಂದು ನಯಾಪೈಸೆಯಷ್ಟೂ ಸಾಕ್ಷ್ಯಾಧಾರ ಸಂಗ್ರಹಿಸಲು ಅದರ ಕೈಯಲ್ಲಿ ಸಾಧ್ಯವಾಗಿಲ್ಲ ಎಂದರು.
ಆಪ್ ಮೋದಿ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ಕೇಜ್ರೀವಾಲ್ ಸಮರ ಸಾರಿರುವುದರಿಂದ, ಅವರನ್ನು ತುಳಿಯಲು ಯತ್ನಿಸಲಾಗುತ್ತಿದೆ. ಆದ್ದರಿಂದ ಎಲ್ಲರೂ ಡಿ.ಪಿ. ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.