For the best experience, open
https://m.samyuktakarnataka.in
on your mobile browser.

ಆಪ್ ನಾಯಕ ಸಂಜಯ್‌ಸಿಂಗ್‌ಗೆ ಕೊನೆಗೂ ಸಿಕ್ಕಿತು ಜಾಮೀನು

11:06 PM Apr 02, 2024 IST | Samyukta Karnataka
ಆಪ್ ನಾಯಕ ಸಂಜಯ್‌ಸಿಂಗ್‌ಗೆ ಕೊನೆಗೂ ಸಿಕ್ಕಿತು ಜಾಮೀನು

ನವದೆಹಲಿ: ಅಬಕಾರಿ ನೀತಿ ಹಗರಣದ ಆರೋಪಿ ಸಂಜಯ್ ಸಿಂಗ್‌ಗೆ ಆರು ತಿಂಗಳ ನಂತರ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯವು ಈ ಆಮ್ ಆದ್ಮಿ ಪಾರ್ಟಿ ನಾಯಕನ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸದಿರುವುದರಿಂದ ನ್ಯಾಯಾಲಯ ಈಗ ಜಾಮೀನು ಮಂಜೂರು ಮಾಡಿದೆ. ಕಳೆದ ಆರು ತಿಂಗಳಿನಿಂದ ಅವರು ದೆಹಲಿಯ ತಿಹಾರ ಜೈಲಿನ ಕೈದಿಯಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದೊಂದಿಗೆ ಬೆಸದಿರುವ ಈ ಕಪ್ಪು ಹಣ ಪ್ರಕರಣ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬಾರದೆಂದು ನ್ಯಾಯಾಲಯ ತಾಕೀತು ಮಾಡಿದೆ. ಮಂಗಳವಾರ ಮುಂಜಾನೆ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬುಧವಾರ ಮುಂಜಾನೆ ಜೈಲಿನಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ಈ ಮೊದಲು ಅವರ ಜಾಮೀನು ಅರ್ಜಿಯನ್ನು ಇ.ಡಿ. ವಿರೋಧಿಸಿತ್ತು. ಅಬಕಾರಿ ನೀತಿ ಹಗರಣದಲ್ಲಿ ಅವರನ್ನು ಕಳೆದ ಅಕ್ಟೋಬರ್ ತಿಂಗಳ ೪ರಂದು ಬಂಧಿಸಲಾಗಿತ್ತು. ಅಬಕಾರಿ ನೀತಿಯಿಂದ ಬಂದ ಆದಾಯವನ್ನು ಕಪ್ಪು ಹಣದ ವ್ಯವಹಾರಕ್ಕೆ ಬಳಸಿಕೊಳ್ಳಲು ಸಿಂಗ್ ವಿಶೇಷ ವಾಹನವನ್ನೇ ರಚಿಸಿದ್ದರೆಂದು ಅದು ಆರೋಪಿಸಿದೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಮೂರು ವಾರಗಳಿರುವಾಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸುವುದಕ್ಕೂ ಅವಕಾಶ ನೀಡಿದೆ.