ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಯೋಗದ ಒಣ ಗುಡುಗು

02:00 AM May 24, 2024 IST | Samyukta Karnataka

ಚುನಾವಣಾ ಆಯೋಗದ ಕಾರ್ಯಭಾರ ಸಾರ್ವಜನಿಕರಿಗೆ ಗೊತ್ತಾಗುವುದು ಬಹುತೇಕ ಚುನಾವಣೆಯ ಕಾಲದಲ್ಲಿ ಮಾತ್ರ. ಉಳಿದ ಸಮಯದಲ್ಲಿ ವೈಚಾರಿಕ ನಿಯಮಾವಳಿಯ ಚರ್ಚೆಗಷ್ಟೇ ಆಯೋಗದ ಕರ್ತವ್ಯ ಸೀಮಿತ. ಪ್ರಸ್ತುತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏಳು ಹಂತದ ಸುದೀರ್ಘ ಮತದಾನದ ಅವಧಿಯ ನಡುವೆ ಆಯೋಗ ಗುಡುಗಿನ ರೀತಿಯಲ್ಲಿ ಎಚ್ಚರಿಕೆ ನೀಡಿರುವುದು ಹಲವಾರು ಬಾರಿ. ಆದರೆ, ಒಂದೆರಡು ಬಾರಿ ಬಿಟ್ಟರೆ ಬೇರೆ ಸಂದರ್ಭಗಳಲ್ಲಿ ಕ್ರಮ ಜರುಗಿಸಿರುವ ನಿದರ್ಶನಗಳು ಅಪರೂಪ. ಮಾಧ್ಯಮದ ಕರ್ತವ್ಯ ಪಾಲನೆಯ ರೀತಿಯಲ್ಲಿ ಪತ್ರ ಬರೆದವರಿಗೆ ಇಲ್ಲವೇ ಏರುಪೇರುಗಳನ್ನು ಪಟ್ಟಿ ಮಾಡಿದವರಿಗೆ ಮಾರುತ್ತರ ಬರೆದಿರುವ ಸಂದರ್ಭಗಳನ್ನು ಬಿಟ್ಟರೆ ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದು ಚುನಾವಣೆಯ ಅಖಾಡದಲ್ಲಿ ಕ್ರಿಯಾಶೀಲರಾಗಿರುವ ಮುಖಂಡರ ನಿಲುವುಗಳನ್ನಾಗಲೀ ಇಲ್ಲವೇ ನಿಲುವುಗಳಿಗೆ ಶಿಸ್ತಿನ ಕ್ರಮ ಜರುಗಿಸಿರುವ ನಿದರ್ಶನಗಳಾಗಲೀ ಕಂಡುಬರುತ್ತಿಲ್ಲ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರಾವ್ ಸೇರಿದಂತೆ ಹಲವರನ್ನು ಚುನಾವಣಾ ಪ್ರಚಾರದಿಂದ ಕೆಲ ಸಮಯ ನಿರ್ಬಂಧಿಸಿರುವ ಕ್ರಮವನ್ನು ಬಿಟ್ಟರೆ ಬೇರೆ ರೀತಿಯ ಕ್ರಮಗಳು ಜರುಗಿದ್ದರೆ ಅದು ಸಾರ್ವಜನಿಕರ ಗಮನಕ್ಕೆ ಬಂದಿಲ್ಲ. ಹಾಗೆಂದಾಕ್ಷಣ ಅಂತಹ ಅಕ್ರಮಗಳು ಜರುಗಿಲ್ಲ ಎಂದಲ್ಲ. ಎಲ್ಲಾ ಪಕ್ಷಗಳ ಬಹುತೇಕ ಎಲ್ಲ ಮುಖಂಡರು ನೀತಿ ಸಂಹಿತೆ ಉಲ್ಲಂಘಿಸಿ ದ್ವೇಷ ಭಾಷಣವನ್ನು ಮಾಡಿರುವ ನಿದರ್ಶನಗಳಿದ್ದರೂ ಕ್ರಮ ಜರುಗಿಸದೇ ಸುಮ್ಮನಿರುವುದು ಅರ್ಥವಾಗದ ಸಂಗತಿ.
ಚುನಾವಣಾ ಆಯೋಗದ ಹಲವಾರು ನಿಲುವುಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಬರೆದ ಪತ್ರಕ್ಕೆ ಮಾರುತ್ತರ ಬರೆದು ಆರೋಪಗಳನ್ನು ನಿರಾಕರಿಸುವ ವಿಧಾನವನ್ನು ಈ ಬಾರಿ ಆಯೋಗ ಅನುಸರಿಸಿರುವುದು ಹೊಸ ದಾರಿಯೇ. ಬಿಜೆಪಿ ಮುಖಂಡರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ದ್ವೇಷ ಭಾಷಣ ಮಾಡಿರುವ ನಿದರ್ಶನಗಳನ್ನು ಕಾಂಗ್ರೆಸ್ ಪಕ್ಷದವರು ಆಯೋಗಕ್ಕೆ ನೀಡಿದ್ದರು. ಹಾಗೆಯೇ ಬಿಜೆಪಿಯವರು ಕೂಡಾ ಕಾಂಗ್ರೆಸ್ ಪಕ್ಷದ ವಿರುದ್ಧ ಮತದಾರರ ಓಲೈಸುವ ಮಾರ್ಗಗಳನ್ನು ಅನುಸರಿಸುತ್ತಿರುವ ಬಗ್ಗೆ ದೂರು ನೀಡಿದ್ದರು. ಈ ಎರಡೂ ಪತ್ರಗಳ ಅಧ್ಯಯನ ಹಾಗೂ ಪರಿಶೀಲನೆಗೆ ಸುದೀರ್ಘ ಸಮಯ ತೆಗೆದುಕೊಂಡ ಆಯೋಗ ಅಂತಿಮವಾಗಿ ಹೇಳಿರುವುದೇನೆಂದರೆ ಕಾಂಗ್ರೆಸ್ ಪಕ್ಷದ ನಿಲುವು ತಿರಸ್ಕೃತ' ಎಂದು ಹೇಳುವ ಉಸಿರಿನಲ್ಲೇಬಿಜೆಪಿಯ ಆರೋಪವನ್ನೂ ಕೂಡಾ ಒಪ್ಪಲು ಅಸಾಧ್ಯ' ಎಂದು ರೂಲಿಂಗ್ ರೀತಿಯ ನಿಲುವನ್ನು ಪ್ರಕಟಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಯವರ ಭಾಷಣದ ಪೂರ್ವಾಪರವನ್ನು ಪ್ರಸ್ತಾಪಿಸಿ ಸುಮ್ಮನಾದದ್ದು ಸೋಜಿಗದ ಸಂಗತಿ.
ನಿಜ. ಚುನಾವಣಾ ಆಯೋಗ ಗುಡುಗಿದರೆ ಚುನಾವಣಾ ಕಣ ನಡುಗಬೇಕು. ಆದರೆ, ಹಾಗೆ ನಡುಗಲು ಬಿಗಿ ಕ್ರಮ ಜರುಗಿಸಿರುವ ನಿದರ್ಶನಗಳು ಕಣ್ಣಮುಂದೆ ಇರಬೇಕು. ಇಲ್ಲವಾದರೆ ಗುಡುಗು ತನ್ನಷ್ಟಕ್ಕೆ ತಾನೇ ಗುಡುಗಿಕೊಂಡು ಸುಮ್ಮನಾಗಬೇಕು ಅಷ್ಟೆ. ಇದೊಂದು ರೀತಿಯ ಗೊಣಗು ಎಂಬ ಅಣಕಕ್ಕೆ ಗ್ರಾಸವಾಗಬಹುದು ಅಷ್ಟೆ. ಗುಡುಗಿದ ಮೇಲೆ ಗುಡುಗಿನ ಜೊತೆ ಬೆಳಕು ಬೆಂಕಿ ಕಾಣಿಸಿಕೊಂಡ ನಂತರ ಮಳೆ ಸುರಿಯತೊಡಗಿದರೆ ಆಗ ನಡುಕ ಹುಟ್ಟುವುದು ಸ್ವಾಭಾವಿಕ. ಚುನಾವಣಾ ಆಯೋಗಕ್ಕೆ ಅಕ್ರಮ ಎಸಗಿದವರ ವಿರುದ್ಧ ಗುಡುಗಿನ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳುವ ಪರಮಾಧಿಕಾರವಷ್ಟೆ ಅಲ್ಲ ಆಯೋಗಕ್ಕೆ ಅಂತಹ ಪರಮಾಧಿಕಾರವೂ ಇದೆ ಎಂಬುದಕ್ಕೆ ಟಿ.ಎನ್. ಶೇಷನ್ ಕಾಲದಲ್ಲಿ ಜರುಗಿರುವ ಅನೇಕ ಪ್ರಕರಣಗಳೇ ಆಧಾರ. ಶೇಷನ್ ಯುಗ ಮುಗಿದು ೩೦ ವರ್ಷಗಳು ಉರುಳಿದ ನಂತರವೂ ಒಂದಾದರೂ ಬಿಗಿ ಕ್ರಮ ಜರುಗದೇ ಹೋಗಿರುವುದು ಚುನಾವಣೆಯಲ್ಲಿ ಶಾಸನದ ಪಾಲನೆಯ ದಿಕ್ಸೂಚಿಯನ್ನು ತೋರಿಸುತ್ತದೆ. ಶಾಸನ ಪಾಲನೆಯಾಗಿರುವುದು ಬೇರೆ. ಆದರೆ, ಪಾಲನೆಯಾಗದೇ ಇರುವ ಶಾಸನದ ಬಗ್ಗೆ ತಕರಾರು. ಬಾಕಿ ಉಳಿದಿರುವ ಎರಡು ಹಂತದ ಮತದಾನದ ಹೊತ್ತಿಗೆ ಚುನಾವಣಾ ಆಯೋಗದ ಕಡೆಯಿಂದ ಬಿಗಿ ಕ್ರಮಗಳು ಜರುಗಿರುವ ವರ್ತಮಾನವೇನಾದರೂ ಬಂದರೆ ನಿಜಕ್ಕೂ ಚುನಾವಣಾ ಕಣದ ಸ್ವರೂಪವೇ ರಾತ್ರೋರಾತ್ರಿ ಸುಧಾರಣೆಯಾಗುವುದಂತೂ ಖಂಡಿತ.
ಚುನಾವಣೆಯ ಸ್ವರೂಪವನ್ನು ಸುಧಾರಿಸುವ ನಿಟ್ಟಿನಲ್ಲಿ ಚುನಾವಣೆಯ ಮೇಲೆ ಕಣ್ಗಾವಲಿಗಾಗಿ ಸಾರ್ವಜನಿಕರ ಪ್ರಾತಿನಿಧ್ಯದ ಸಮಿತಿಯೊಂದನ್ನು ರಚಿಸಿದರೆ ಬಹುಶಃ ಪಾರದರ್ಶಕ ರೀತಿಯಲ್ಲಿ ಕ್ರಮ ಹಾಗೂ ಅಕ್ರಮಗಳು ಜನರಿಗೆ ತಿಳಿಯಬಹುದು. ಅಕ್ರಮಗಳು ನಡೆದಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಪರಾಮಿರ್ಶಿಸಿ ಈ ಸಮಿತಿ ಪ್ರಕಟಿಸುವ ನಿರ್ಧಾರಕ್ಕೆ ಆಯೋಗ ಕಾನೂನಿನ ವ್ಯಾಪ್ತಿಯೊಳಗೆ ಕ್ರಮ ಜರುಗಿಸುವಂತಾದರೆ ಆಗ ಪ್ರಜಾಪ್ರಭುತ್ವದ ಮಾರ್ಗವಾಗಿಯೇ ಅಕ್ರಮಗಳನ್ನು ತಡಗಟ್ಟಿ ಕ್ರಮಬದ್ಧವಾದ ಚುನಾವಣೆ ನಡೆಸಲು ಮುಕ್ತ ಅವಕಾಶ ಆಗಬಹುದು.

Next Article