ಆರೋಗ್ಯವೇ ಭಾಗ್ಯ' ಸಂಕಲ್ಪದೊಂದಿಗೆಸಂಯುಕ್ತ ಕರ್ನಾಟಕ' ಆರೋಗ್ಯ ಹಬ್ಬಕ್ಕೆ ಸಂಭ್ರಮದ ತೆರೆ
ಹುಬ್ಬಳ್ಳಿ: ಆರೋಗ್ಯವೇ ಭಾಗ್ಯ ಎಂಬ ಸಂಕಲ್ಪದೊಂದಿಗೆ ಸಂಯುಕ್ತ ಕರ್ನಾಟಕ' ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಭವ್ಯ
ಆರೋಗ್ಯ ಹಬ್ಬ' ಅರ್ಥಪೂರ್ಣವಾಗಿ ನಡೆದು ವೈದ್ಯಕೀಯ ವಲಯ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಮಾಧ್ಯಮ ಸಂಸ್ಥೆಯೊಂದು ಸ್ವಸ್ಥ ನಾಡಿಗಾಗಿ ಆಯೋಜಿಸಿದ್ದ ಮೊಟ್ಟ ಮೊದಲ ಆರೋಗ್ಯ ಹಬ್ಬ', ಹುಬ್ಬಳ್ಳಿ ವಿದ್ಯಾನಗರ ಜೆ.ಜಿ.ಕಾಮರ್ಸ್ ಕಾಲೇಜು ಹತ್ತಿರ ಇರುವ ಸ್ಟೆಲ್ಲರ್ ಮಾಲ್‌ನಲ್ಲಿ ಆಗಸ್ಟ್ ೨೩ರಂದು ಉದ್ಘಾಟನೆಯಾಗಿತ್ತು. ಭಾನುವಾರ ಮುಕ್ತಾಯದವರೆಗೂ ಮೇಳಕ್ಕೆ ಸಾರ್ವಜನಿಕರ ಅಭೂಪತಪೂರ್ವ ಸ್ಪಂದನೆ ವ್ಯಕ್ತವಾಯಿತು. ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳು, ಆರೋಗ್ಯ ಕ್ಷೇತ್ರದ ಹೊಸ ಬೆಳವಣಿಗೆಗಳು, ಸಾರ್ವಜನಿಕರಿಗೆ ಇವುಗಳ ಉಪಯೋಗ ಹಾಗೂ ಜನಸಮುದಾಯದ ಒಟ್ಟಾರೆ ಆರೋಗ್ಯಕ್ಕಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಚಿಂತನ ಮಂಥನ ಮೂರು ದಿನಗಳ ಹಬ್ಬದ ವಿಶೇಷತೆಯಾಗಿತ್ತು. ಜನಸಮುದಾಯದ ಆರೋಗ್ಯಕ್ಕಾಗಿ ಜವಾಬ್ದಾರಿಯುತ ಸಮಾಜ ಮಾಡಬೇಕಾಗಿರುವ ಕೆಲಸಗಳ ಬದ್ಧತೆಗೆ ಮುನ್ನುಡಿ ಬರೆಯಿತು. ಆರೋಗ್ಯ ಕ್ಷೇತ್ರದ ಮುಂದಿನ ಹಾದಿಯ ಮೇಲೆ ಬೆಳಕು ಚೆಲ್ಲಿತು. ಈ ಮೇಳದ ಅಂಗವಾಗಿ ಇತ್ತೀಚಿನ ವರ್ಷಗಳಲ್ಲೇ ಮೊದಲ ಬಾರಿಗೆ ಹುಬ್ಬಳ್ಳಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಗೆ ಸಾಕ್ಷಿಯಾಯಿತು. ಏಕಕಾಲಕ್ಕೆ ಹಲವಾರು ವೈದ್ಯಕೀಯ ಸಂಸ್ಥೆಗಳು ನಡೆಸಿದ ಈ ಶಿಬಿರದಲ್ಲಿ ಕೇವಲ ಸಾಮಾನ್ಯ ರೋಗಗಳಲ್ಲದೇ, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳ ಪತ್ತೆ ಕಾರ್ಯವೂ ನಡೆಯಿತು. ಸಹಸ್ರಾರು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರಗಳ ಪ್ರಯೋಜನ ಪಡೆದರು. ಎಸ್‌ಡಿಎಂ, ಕಿಮ್ಸ್, ನಾರಾಯಣ ಹೆಲ್ತ್ ಸೆಂಟರ್, ಶಿರಸಿಯ
ನಿಸರ್ಗ ಮನೆ' ಡಾ.ವೆಂಕಟರಮಣ ಹೆಗಡೆ ಅವರ ಪ್ರಕೃತಿ ಚಿಕಿತ್ಸಾ ಘಟಕ, ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಇವೇ ಮೊದಲಾದ ಹೆಸರಾಂತ ಸಂಸ್ಥೆಗಳ ತಜ್ಞರು ಆರೋಗ್ಯ ತಪಾಸಣೆ ನಡೆಸಿ ಸಲಹೆ ನೀಡಿದರು.
ರಾಜ್ಯದೆಲ್ಲೆಡೆಯ ತಜ್ಞ ವೈದ್ಯರು ಹಬ್ಬದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಆರೋಗ್ಯ ಸಲಹೆಗಳನ್ನು ನೀಡಿದ್ದಲ್ಲದೇ, ಅಲೋಪತಿ ಸೇರಿದಂತೆ ಪಾರಂಪರಿಕ ಪದ್ಧತಿಗಳ ವೈದ್ಯಕೀಯ ಸಂಸ್ಥೆಗಳು ವೈದ್ಯಕೀಯ ವಸ್ತು ಪ್ರದರ್ಶನ ಮಳಿಗೆಗಳನ್ನು ಹಬ್ಬದಲ್ಲಿ ಅಳವಡಿಸಿದ್ದು ಗಮನ ಸೆಳೆದ ಅಂಶವಾಗಿತ್ತು.
ಪ್ರದರ್ಶನ ಮಳಿಗೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳ ಮಾರಾಟದ ಸ್ಟಾಲ್‌ಗಳು, ಆಹಾರ ಪದ್ಧತಿಯಲ್ಲಿ ಇತ್ತೀಚೆಗೆ ಮುಂಚೂಣಿಗೆ ಬಂದಿರುವ ಸಿರಿ ಧಾನ್ಯ ಮಾರಾಟ ಸ್ಟಾಲ್‌ಗಳು, ಊನ ದೇಹಕ್ಕೆ ಅಗತ್ಯವಾದ ಸಾಧನಗಳ ಸ್ಟಾಲ್‌ಗಳು ಭಾಗವಹಿಸಿದ್ದವು.
ಇವುಗಳೊಂದಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಮೊದಲಾದ ಸರ್ಕಾರಿ ಇಲಾಖೆ-ವಿಭಾಗಗಳ ಪತ್ರಿಕೆಯ ಯತ್ನಕ್ಕೆ ಕೈಜೋಡಿಸಿ ಜನರಲ್ಲಿ ಆರೋಗ್ಯ, ಆರೋಗ್ಯ ಪ್ರವಾಸ ಮತ್ತು ನೈರ್ಮಲ್ಯದ ಅರಿವು ಮೂಡಿಸಿದವು.
ಮೆಗಾ ಆರೋಗ್ಯ ತಪಾಸಣೆ ಜೊತೆಗೆ, ರಕ್ತದಾನ ಮಾಡಲು ಕೂಡ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರಿಂದ ಈ ಹಬ್ಬದಲ್ಲಿ ಸಹಸ್ರಾರು ದಾನಿಗಳು ರಕ್ತದಾನವನ್ನೂ ಮಾಡಿದ್ದು ಎದ್ದು ಕಂಡ ಅಂಶ. ರಾಷ್ಟ್ರೋತ್ಥಾನ ಸಂಸ್ಥೆಯ ರಕ್ತನಿಧಿಯಲ್ಲಿ ರಕ್ತದಾನಕ್ಕೆ ಜನ ಉತ್ಸುಕತೆ ತೋರಿದರು.
ನಾಡಿನ ಹೆಸರಾಂತ ತಜ್ಞ ವೈದ್ಯರಿಂದ ಆಗಸ್ಟ್ ೨೪ ಮತ್ತು ೨೫ರಂದು ನಡೆದ `ಆರೋಗ್ಯ ಮಾತು' ಸಾರ್ವಜನಿಕರನ್ನು ಆಪ್ತವಾಗಿ ತಟ್ಟಿದ ಅಂಶ. ನಿತ್ಯ ಬದುಕಿಗೆ ಸಂಬಂಧಿಸಿದ ಆರೋಗ್ಯ ವಿಷಯಗಳ ಬಗ್ಗೆ ವೈದ್ಯರು ನೀಡಿದ ಉಪನ್ಯಾಸ ಈ ಹಬ್ಬದ ವಿದ್ವತ್‌ಪೂರ್ಣ ಅಂಶವಾಗಿತ್ತು. ಸಾರ್ವಜನಿಕರು ವೈದ್ಯರೊಂದಿಗೆ ನಡೆಸಿದ ಸಂವಾದ ಆಪ್ತವಾಗಿತ್ತು. ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಜನತೆ ತಿಳಿದುಕೊಳ್ಳಲು ನೆರವಾಯಿತು. ಅನೇಕ ತಜ್ಞ ವೈದ್ಯರು, ಗಣ್ಯರು ಪಾಲ್ಗೊಂಡು ಪತ್ರಿಕೆಯ ಈ ಪ್ರಯತ್ನ ಪ್ರಶಂಸಿಸಿದರು.