ಆರೋಪಿ ಬಾಂಬರ್ ಮನೆ ಪತ್ತೆ?
ಬೆಂಗಳೂರು: ದಿ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಆರೋಪಿ ಪತ್ತೆಗಾಗಿ ಹಗಲಿರುಳೂ ಹುಡುಕಾಟ ನಡೆಸಿದ್ದು ಈಗ ಪ್ರಾಥಮಿಕವಾಗಿ ಓರ್ವ ವ್ಯಕ್ತಿಯನ್ನು ಗುರುತಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಕರಾವಳಿ ಪ್ರದೇಶದ ವ್ಯಕ್ತಿ ಪ್ರಮುಖ ಆರೋಪಿಯಾಗಿದ್ದು ಆತನ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಆ ವ್ಯಕ್ತಿ ಮನೆಬಿಟ್ಟು ಹೋಗಿ ಬಹಳ ದಿನಗಳಾಗಿವೆ ಎಂದು ಅಧಿಕಾರಿಗಳ ಮುಂದೆ ಆತನ ಮನೆಯವರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶಂಕಿತ ಉಗ್ರ ಬಳ್ಳಾರಿಯ ಸುಲೇಮಾನ್ ಹಾಗೂ ಇನ್ನೂ ಇಬ್ಬರ ವಿಚಾರಣೆ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಎನ್‌ಐಎ ಅಧಿಕಾರಿಗಳು ಓರ್ವನ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಸುಲೇಮಾನ್ ಹಾಗೂ ಇನ್ನಿತರ ಶಂಕಿತರು ಹೇಳಿರುವುದು ನಿಜವೇ ಎಂಬುದು ಮುಂದಿನ ತನಿಖೆಯಿಂದ ಗೊತ್ತಾಗಬೇಕಾಗಿದೆ.
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಿರುವುದಾಗಿ ಬೆದರಿಕೆ(ಮಾಡ್ಯೂಲ್) ಒಡ್ಡಿದ್ದ ತಂಡದಲ್ಲಿರುವವರ ಜತೆ ಸಂಪರ್ಕವಿಟ್ಟುಕೊಂಡಿದ್ದ ಹಲವರನ್ನು ರಾಮೇಶ್ವರಂ ಕೆಫೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಚಿತ್ರದ ಹಾಗೆ, ಎಲ್ಲರಿಗೂ ಟೊಪ್ಪಿ, ಮಾಸ್ಕ್ ಹಾಕಿ ಅವರ ಫೋಟೋ ತೆಗೆಯಲಾಗಿದೆ. ಇವರಲ್ಲಿ ಯಾವ ಹೋಲಿಕೆಯೂ ಇಲ್ಲ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ. ಟೆಕ್ನಿಕಲ್ ಅನಾಲಿಸಿಸ್ ಮೂಲಕ ಶಂಕಿತನ ಪತ್ತೆಗೆ ಎನ್‌ಐಎ ಮುಂದಾಗಿದೆ. ಜೈಲಿನಲ್ಲಿ ಮೀನಾಜ್, ಮುನಿರುದ್ದೀನ್, ಸಮಿ, ಮುಜಾಮಿಲ್, ಇಕ್ಬಾಲ್, ರೆಹಮಾನ್‌ನ ಧ್ವನಿ ಪರೀಕ್ಷೆ ಮಾಡಲಾಗಿದೆ.
ಆರೋಪಿ ಮಾರ್ಚ್ ೧ ರಂದು ಕೆಫೆಯಲ್ಲಿ ಸ್ಫೋಟಿಸಿ ನಂತರ ಬಳ್ಳಾರಿಗೆ, ಅಲ್ಲಿಂದ ಕಲಬುರಗಿ, ಹುಮನಾಬಾದ್, ಮಂತ್ರಾಲಯ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಲ್ಲ ಕಡೆ ಶೋಧ ನಡೆಸಿದ್ದಾರೆ.
ಆರೋಪಿ ಬಳ್ಳಾರಿಯಿಂದ ಕಲಬುರಗಿಗೆ ಸಾರಿಗೆ ಬಸ್ಸಿನಲ್ಲಿ ತೆರಳಿದ್ದಾನೆ. ಮುಂಗಡ ಟಿಕೆಟ್ ಪಡೆಯದೇ ಇಬ್ಬರು ಬಸ್ಸನ್ನು ಹತ್ತಿದ್ದರು ಎಂದು ಬಸ್ಸಿನ ನಿರ್ವಾಹಕ ಮಾಹಿತಿ ನೀಡಿದ್ದ. ಅವರು ಪ್ರಯಾಣಿಸಿದ ಸೀಟುಗಳನ್ನೂ ಸಹ ಕಂಡಕ್ಟರ್ ತೋರಿಸಿದ್ದ. ನಂತರ ಅಧಿಕಾರಿಗಳಿಗೆ ಅನೇಕ ಮಹತ್ತರ ಮಾಹಿತಿಗಳು ದೊರೆತಿವೆ ಎಂದು ತಿಳಿದುಬಂದಿದೆ.
ಆರೋಪಿಯ ಮೊಬೈಲ್ ಪತ್ತೆ?
ಬಳ್ಳಾರಿಯಿಂದ ಕಲಬುರಗಿಗೆ ಆರೋಪಿ ಪ್ರಯಾಣಿಸಿರಬಹುದಾದ ಬಸ್ಸಿನಲ್ಲಿ ಒಂದು ಕೀ ಪ್ಯಾಡ್ ಮೊಬೈಲ್ ದೊರೆತಿದೆ. ಆದರೆ ಅದರಲ್ಲಿ ಸಿಮ್ ಇಲ್ಲವೆಂದು ಹೇಳಲಾಗುತ್ತಿದೆ. ಆದಾಗ್ಯೂ ತಂತ್ರಜ್ಞಾನದ ಮೊರೆ ಹೋಗಿರುವ ಅಧಿಕಾರಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಎಂಡ್ರಾಯ್ಡ್ ಫೋನು ಸಿಕ್ಕಿದ್ದಿದ್ದರೆ ಆರೋಪಿಯ ಜಾಡು ಮತ್ತಷ್ಟು ಸುಲಭವಾಗುತ್ತಿತ್ತು. ತನಿಖೆಯ ಜಾಡು ತಪ್ಪಿಸಲು ಆರೋಪಿ ಈ ರೀತಿ ಮಾಡಿರಬಹುದು ಎಂಬ ಅನುಮಾನ ಎನ್‌ಐಎ ಅಧಿಕಾರಿಗಳಿಗೆ ಬಂದಿದೆ.
ಆರು ತಂಡಗಳು ಬೇರೆ ರಾಜ್ಯಕ್ಕೆ
ಆರೋಪಿ ಪತ್ತೆಗಾಗಿ ರಚಿಸಲಾಗಿದ್ದ ಎಂಟು ಪೊಲೀಸರ ತಂಡದ ಪೈಕಿ ಆರು ತಂಡಗಳು, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿ ಅನೇಕ ರಾಜ್ಯಗಳಿಗೆ ತೆರಳಿ ಶೋಧ ನಡೆಸಿದ್ದಾರೆ. ಆ ರಾಜ್ಯಗಳ ಪೊಲೀಸರ ನೆರವಿನಿಂದ ಆರೋಪಿಯ ಭಾವಚಿತ್ರಗಳನ್ನು ಇಟ್ಟುಕೊಂಡು ರೇಲ್ವೆ, ಬಸ್‌ನಿಲ್ದಾಣಗಳಲ್ಲಿ ಶೋಧಕ್ಕೆ ಮುಂದಾಗಿದ್ದಾರೆ. ಆ ಭಾಗದಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿದವರ ಮಾಹಿತಿ ಪಡೆದು ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.
ಬೇರೆ ರಾಜ್ಯಗಳಲ್ಲಿ ಎನ್‌ಐಎ ದಾಳಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಎನ್‌ಐಎ ಅಧಿಕಾರಿಗಳು ಚೆನ್ನೈ, ಕೋಲ್ಕತಾ ಸೇರಿದಂತೆ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡ ಆರೋಪಿಯ ಜತೆ ಇವರ ಲಿಂಕ್ ಏನಾದರೂ ಇದೆಯಾ ಎಂದು ಪತ್ತೆ ಹಚ್ಚುತ್ತಿದ್ದಾರೆ.