For the best experience, open
https://m.samyuktakarnataka.in
on your mobile browser.

ಆರೋಪ ಮುಕ್ತರಾಗಿ ಸಿಎಂ ಸಮಾವೇಶ ಮಾಡಲಿ: ಜೋಶಿ

07:02 PM Jul 06, 2024 IST | SK Hubli
ಆರೋಪ ಮುಕ್ತರಾಗಿ ಸಿಎಂ ಸಮಾವೇಶ ಮಾಡಲಿ  ಜೋಶಿ

ಹುಬ್ಬಳ್ಳಿ: ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಯಾರು ಬೇಕಾದರೂ ಶಕ್ತಿ ಪ್ರದರ್ಶನ ಮಾಡಬಹುದು. `ಅಹಿಂದ' ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಲು ಯೋಚಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲು ತಮ್ಮ ಮೇಲಿರುವ ಹಲವು ಬ್ರಷ್ಟಾಚಾರ ಆರೋಪದಿಂದ ಮುಕ್ತರಾಗಲಿ. ಆಮೇಲೆ ಸಮಾವೇಶ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸ್ವಾರ್ಥಕ್ಕೆ ಯಾವ ಸಮಾಜವನ್ನೂ ಬಳಸಿಕೊಳ್ಳಬಾರದು. ಸಿಎಂ ವಿರುದ್ಧ ಡಿಸಿಎಂ, ಡಿಸಿಎಂ ವಿರುದ್ಧ ಸಿಎಂ ಪರಸ್ಪರ ಬತ್ತಿ ಇಡುವ ಕಾರ್ಯ ಮೊದಲ ದಿನದಿಂದಲೂ ಜಾರಿಯಲ್ಲಿದೆ. ಅಲ್ಲದೆ, ಮುಖ್ಯಮಂತ್ರಿ ಹಾಗೂ ಅವರ ಪುತ್ರನ ಮಗನ ಅನುಮತಿಯ ಮೇರೆಗೇ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರಗಳು ನಡೆದಿವೆ.
ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ೨೦೧೪ ರಿಂದ ೨೦೧೮ರ ಅವಧಿಯಲ್ಲಿ ಇದು ನಡೆದಿದೆ. ಏನೂ ಮಾಡಿಲ್ಲ ಎಂದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ಏಕೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಗೆಯನ್ನು ಸಿಬಿಐ ಗೆ ವಹಿಸಿಬೇಕು. ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ, ಸಿಎಂ ಸಿದ್ದರಾಮಯ್ಯ ಲೋಹಿಯಾ ವಾದಿ, ಸಮಾಜವಾದಿ ಅಂತ ಹೇಳಿಕೊಳ್ಳಲು ಅರ್ಹರಲ್ಲ ಎಂದು ಕಿಡಿ ಕಾರಿದರು.
ಮುಡಾ ಮತ್ತು ವಾಲ್ಮೀಕಿ ನಗಮದ ಹಗರಣಗಳಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನದು ಬಲವಾದ ಆರೋಪ.
ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಇಷ್ಟು ದಿನ ನಾಗೇಂದ್ರನನ್ನು ತಪ್ಪಿಸಿಕೊಳ್ಳಲು ಅವಕಾಶ ನೀಡಿ ಈಗ ನೋಟಿಸ್ ನೀಡಿದ್ದಾರೆ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಣವೆಗೆ ಬೆಂಕಿ ಹತ್ತಿದಾಗ ಅದರಿಂದ ಬಿಡಿ ಹೇಗೆ ಹಚ್ಚಬೇಕು ಎಂಬುದನ್ನು ಅರಿತಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದ್ದರೂ, ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇದು ತಮ್ಮ ಕೊನೇಯ ಅವಧಿ ಎಂದು ಅರಿತಿರುವ ಅವರು, ಭ್ರಷ್ಟಾಚಾರದ ಪರಮಾವಧಿಗೆ ತಲುಪಿದ್ದಾರೆ ಎಂದು ಆರೋಪಿಸಿದರು.