For the best experience, open
https://m.samyuktakarnataka.in
on your mobile browser.

ಆರ್ಥಿಕತೆ ಬೆಳವಣಿಗೆ ಹಾದಿ ಇನ್ನೂ ಬಲು ದೂರ

09:00 AM Oct 06, 2024 IST | Samyukta Karnataka
ಆರ್ಥಿಕತೆ ಬೆಳವಣಿಗೆ ಹಾದಿ ಇನ್ನೂ ಬಲು ದೂರ

ಸರ್ಕಾರ ದೇಶದ ಆರ್ಥಿಕತೆ ಬಹಳ ವೇಗದಲ್ಲಿ ಬೆಳೆಯುತ್ತಿದೆ ಎಂದು ಹೇಳಿಕೊಂಡರೂ ಸಾಗಬೇಕಾದ ಹಾದಿ ಇನ್ನೂ ಬಲುದೂರ ಇದೆ ಎಂಬುದನ್ನು ಕೆ.ವಿ. ಕಾಮತ್ ಬಹಳ ಮನೋಜ್ಞವಾಗಿ ವಿವರಿಸಿದ್ದಾರೆ. ಅವರ ಸಲಹೆ ಸೂಚನೆಗಳಿಗೆ ಬೆಲೆ ಇದೆ. ಸರ್ಕಾರ ಕೂಡ ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಸೂಕ್ತ. ಜಾಗತಿಕ ಮಾನದಂಡಗಳನ್ನು ಪರಿಗಣಿಸಿದಾಗ ನಾವು ಇನ್ನೂ ಹಲವು ವಿಷಯಗಳಲ್ಲಿ ಹಿಂದೆ ಇದ್ದೇವೆ. ಅರ್ಥಿಕ ಕೊರತೆಯನ್ನು ನೋಡಿದರೆ ಜಿಡಿಪಿಯಲ್ಲಿ ಶೇ.೩ ಇರಬೇಕು. ಈಗ ಶೇ.೫.೬ ತಲುಪಿದೆ. ಅಂದರೆ ಇನ್ನೂ ಸಾಗಬೇಕಾದ ದೂರವಿದೆ. ಹಣದುಬ್ಬರ ಶೇ.೪ ಕ್ಕಿಂತ ಹೆಚ್ಚಿದೆ. ಆರ್‌ಬಿಐ ೨೦೨೨ರಿಂದ ರೆಪೊದರವನ್ನು ಶೇ.೬.೫ ರಲ್ಲೇ ಇಟ್ಟುಕೊಂಡು ಬಂದಿದೆ. ಇದನ್ನು ಇನ್ನೂ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಜಿಡಿಪಿಯಲ್ಲಿ ಸರ್ಕಾರದ ಸಾಲದ ಪ್ರಮಾಣ ಇಳಿಮುಖಗೊಂಡಿಲ್ಲ. ಶೇ.೧೮.೨ ಇದೆ. ಆರ್ಥಿಕ ಅಸಮಾನತೆ ಇನ್ನೂ ನಿವಾರಣೆಯಾಗಿಲ್ಲ. ವಂದೇಭಾರತ್ ರೈಲಿನಲ್ಲಿ ಹೋಗುವವರಿಗೆ ಸಿಗುವ ಮಹತ್ವ ಸಾಧಾರಣ ರೈಲಿನಲ್ಲಿ ಹೋಗುವವರಿಗೆ ಸಿಗುತ್ತಿಲ್ಲ. ಇದರಿಂದ ಆರ್ಥಿಕ ಅಸಮಾನತೆ ಅಧಿಕಗೊಳ್ಳುತ್ತ ಹೋಗುತ್ತದೆ. ಸಮಾಜದ ಮೇಲುಸ್ತರದಲ್ಲಿರುವ ಶೇ.೧ ರಷ್ಟು ಜನರಿಗೆ ಎಲ್ಲ ಸವಲತ್ತು ಲಭ್ಯ. ಕೆಳಸ್ತರದಲ್ಲಿರುವ ಶೇ.೨೦ ರಷ್ಟು ಜನರಿಗೆ ಯಾವ ಸವಲತ್ತು ಸಿಗುತ್ತಿಲ್ಲ. ದ್ವೇಷ ಭಾಷಣ, ಕೋಮು ಸಂಘರ್ಷದಿಂದ ಕೆಲ ಸಮುದಾಯ ಮುಖ್ಯವಾಹಿನಿಯಿಂದ ದೂರ ಸರಿಯುತ್ತಿವೆ.
ಬ್ಯಾಂಕ್‌ಗಳಲ್ಲಿ ವಂಚನೆ, ಕಾರ್ಪೋರೇಟ್ ಬೆಳವಣಿಗೆಯಲ್ಲಿ ಕುಸಿತ ಕಂಡು ಬರುತ್ತಿದೆ. ಬ್ಯಾಂಕ್ ವಸೂಲಾಗದ ಸಾಲವನ್ನು ದಿವಾಳಿ ಬ್ಯಾಂಕ್‌ಗೆ ವರ್ಗಾಯಿಸಿ ಅದನ್ನು ಕ್ರಮಬದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಸಾಲ ಮರುಪಾವತಿ ಶೇ.೩೨ ರಲ್ಲೇ ಇದೆ. ಯುವ ಉದ್ಯಮಿಗಳು ವಿದೇಶಗಳಿಗೆ ಹೋಗಲು ಬಯಸುತ್ತಾರೆಯೇ ಹೊರತು ಇಲ್ಲಿದ್ದು ವ್ಯಾಪಾರ-ವಹಿವಾಟು ನಡೆಸಲು ಬಯಸುವುದಿಲ್ಲ. ೪೩೦೦ ಉದ್ಯಮಿಗಳು ಭಾರತ ತ್ಯಜಿಸಿ ವಿದೇಶಗಳಲ್ಲಿ ನೆಲೆಸಿದ್ದಾರೆ. ಪ್ರಭಾವಿ ಉದ್ಯಮಿಗಳು ಮಾತ್ರ ತಮ್ಮ ಏಕಸ್ವಾಮ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ವಿಮಾನಯಾನ, ವಿಮಾನನಿಲ್ದಾಣ, ಬಂದರು, ಟೆಲಿ ಕಮ್ಯೂನಿಕೇಷನ್, ತೈಲ ಸಂಸ್ಕರಣ, ಸೋಲಾರ್ ವಿದ್ಯುತ್ ರಂಗ ಸೇರಿದಂತೆ ಹಲವು ರಂಗಗಳಲ್ಲಿ ಪೈಪೋಟಿ ಸಾಕಷ್ಟು ಕಂಡು ಬರುತ್ತಿಲ್ಲ. ಸಿಮೆಂಟ್, ಉಕ್ಕು ಸೇರಿದಂತೆ ಹಲವು ರಂಗಗಳಲ್ಲಿ ಪೈಪೋಟಿ ತಲೆ ಎತ್ತದಂತೆ ಮಾಡುವ ವಾತಾವರಣ ಸೃಷ್ಟಿಯಾಗಿದೆ.
ಖಾಸಗಿ ಬಂಡವಾಳ ಹೂಡಿಕೆ ಅಧಿಕಗೊಂಡಿಲ್ಲ. ಸರ್ಕಾರಿ ಬಂಡವಾಳ ಅಧಿಕಗೊಂಡಿದ್ದರೂ ಖಾಸಗಿ ರಂಗಕ್ಕೆ ಇನ್ನೂ ಸರ್ಕಾರದ ವಿಚಾರದಲ್ಲಿ ವಿಶ್ವಾಸ ಮೂಡಿಲ್ಲ. ಸರ್ಕಾರ ಸಹಾಯಧನ, ಸಾಲ, ಪ್ಯಾಕೇಜ್ ನೀಡುವುದರಲ್ಲಿ ನಿರತವಾಗಿದೆಯೇ ಹೊರತು ಕೈಗಾರಿಕಾ ವಾತಾವರಣ ಕಲ್ಪಿಸಿಲ್ಲ. ೮ ಸಾವಿರ ಕಂಪನಿಗಳು ಭಾರತದಿಂದ ಸಿಂಗಪುರಕ್ಕೆ ಸ್ಥಳಾಂತರಗೊಂಡಿವೆ. ಹಣಕಾಸು ಸಚಿವರೇ ಖಾಸಗಿಯವರಿಗೆ ಬಂಡವಾಳ ಹೂಡಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರೇ ಉತ್ತರಕೊಡಬೇಕು. ವಿಕಸಿತ ಭಾರತ ೨೦೪೭ಕ್ಕೆ ಆಗಬೇಕು ಎಂದರೆ ನಮ್ಮ ಒಟ್ಟು ಬಜೆಟ್ ೫೫ಸಾವಿರ ಶತಕೋಟಿ ಡಾಲರ್ ಆಗಬೇಕು. ಅದಕ್ಕಾಗಿ ಸಾಗಬೇಕಾದ ದಾರಿ ಇನ್ನೂ ಬಲುದೂರ ಇದೆ. ಇದಕ್ಕೆ ಹಗಲು ಇರುಳು ದುಡಿಯುವ ಜನ ಬೇಕು. ರಾಜಕೀಯ ದ್ವೇಷ, ಆರೋಪ- ಪ್ರತ್ಯಾರೋಪ ಕೆಲಸಕ್ಕೆ ಬರುವುದಿಲ್ಲ. ಸರ್ಕಾರ ಅನಗತ್ಯ ವೆಚ್ಚ ಇಳಿಮುಖ ಮಾಡಬೇಕು. ಖಾಸಗಿಯವರು ಬಂಡವಾಳ ಹೂಡಬೇಕು ಎಂದರೆ ಪ್ರಮುಖವಾಗಿ ಸರ್ಕಾರದ ಕಿರುಕುಳ ನಿಲ್ಲಬೇಕು. ಕೆಲವು ಕಡೆ ಸರ್ಕಾರ ಬೆದರಿಕೆ ಒಡ್ಡಿವೆ ಎಂಬ ದೂರುಗಳು ಬಂದಿವೆ. ಇದು ಒಳ್ಳೆಯ ಲಕ್ಷಣವಲ್ಲ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ದೇಶದ ಆರ್ಥಿಕತೆ ಅದರ ಮೇಲೆ ನಿಲ್ಲಬಾರದು,. ವ್ಯಾಪಾರ- ಉದ್ಯಮ ನಡೆಸುವವರಿಗೆ ಮುಕ್ತ ವಾತಾವರಣ ಬೇಕು. ಅವರಿಗೆ ಸಹಾಯಧನ ಇಲ್ಲದಿದ್ದರೂ ಅದರ ಬಗ್ಗೆ ಚಿಂತಿಸುವುದಿಲ್ಲ. ೨೪ ಗಂಟೆ ನೀರು ವಿದ್ಯುತ್ ಲಭಿಸಬೇಕು. ಕಾರ್ಮಿಕರು ನೆಮ್ಮದಿಯಿಂದ ದುಡಿಯಲು ಬೇಕಾದ ವಾತಾವರಣ ಕಲ್ಪಿಸಿಕೊಡಬೇಕು. ಈಗ ಐಟಿಬಿಟಿ ಕಂಪನಿಗಳು ಆರ್ಥಿಕ ಬೆಳವಣಿಗೆ ಕಂಡುಕೊಳ್ಳಲು ಸರ್ಕಾರದ ಹಸ್ತಕ್ಷೇಪ ಕಡಿಮೆ ಇರುವುದೇ ಕಾರಣ.ಉದ್ಯಮಿಗಳ ಸಂಘಸಂಸ್ಥೆಗಳು ಸರ್ಕಾರದ ವಿರುದ್ಧ ಹೇಳಿಕೆ ಕೊಡಲೂ ಹಿಂಜರಿಯುವ ಕಾಲ ಬಂದಿದೆ. ಇದನ್ನು ನಿವಾರಿಸಬೇಕು ಎಂದರೆ ಸರ್ಕಾರ ಹಸ್ತಕ್ಷೇಪ ಕಡಿಮೆ ಮಾಡಬೇಕು. ರೈಸನ್ಸ್ ರಾಜ್ ಹೋಗಿದೆ ಎಂದು ಹೇಳುತ್ತೇವೆ. ಕಂಪ್ಯೂಟರೀಕರಣ ಆಗಿದೆ. ಸಾರಿಗೆ ವ್ಯವಸ್ಥೆ ಉತ್ತಮಗೊಂಡಿದೆ. ದೇಶದ ಯಾವ ಮೂಲೆಗೆ ಬೇಕಾದರೂ ಸುಲಭವಾಗಿ ಹೋಗಬಹುದು. ಇದೆಲ್ಲ ಉಪಯೋಗಕ್ಕೆ ಬರಬೇಕು ಎಂದರೆ ಸರ್ಕಾರದ ಕಿರುಕುಳ ನಿಲ್ಲಬೇಕು. ಖಾಸಗಿರಂಗದಲ್ಲಿ ಆರೋಗ್ಯಕರ ಆಸ್ತಿ ಶೇಖರಣೆಗೆ ಅವಕಾಶ ಕೊಡಬೇಕು. ಸಣ್ಣ ಉದ್ಯಮಗಳು ಗ್ರಾಮೀಣ ಪ್ರದೇಶದಲ್ಲಿ ತಲೆಎತ್ತಲು ಅವಕಾಶ ನೀಡಬೇಕು. ಅದರಲ್ಲೂ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಶೋಷಣೆ ತಪ್ಪಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಕಾನೂನು ಪರಿಪಾಲನೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು.