For the best experience, open
https://m.samyuktakarnataka.in
on your mobile browser.

ಆರ್ಥಿಕ ಬೆಳವಣಿಗೆಯಲ್ಲಿ ಆತ್ಮಪ್ರಶಂಸೆ ಒಳಿತಲ್ಲ

01:15 AM Feb 25, 2024 IST | Samyukta Karnataka
ಆರ್ಥಿಕ ಬೆಳವಣಿಗೆಯಲ್ಲಿ ಆತ್ಮಪ್ರಶಂಸೆ ಒಳಿತಲ್ಲ

ದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ನಾವೇ ಬೆನ್ನುತಟ್ಟಿಕೊಳ್ಳುವುದು ಸರಿಯಲ್ಲ. ಬೆಳವಣಿಗೆ ಇದ್ದಲ್ಲಿ ಅಂಕಿಅಂಶಗಳು ತಂತಾನೇ ತಿಳಿಸುತ್ತದೆ. ಅದನ್ನು ನಾವು ಹೇಳಿಕೊಳ್ಳುವ ಅಗತ್ಯವಿಲ್ಲ. ವಿಶ್ವಸಂಸ್ಥೆಯ ಅಭಿವೃದ್ಧಿ ವರದಿಯಲ್ಲಿ ಎನ್‌ಡಿಎ ಸರ್ಕಾರಕ್ಕಿಂತ ಯುಪಿಎ ಸರ್ಕಾರ ಆಡಳಿತದಲ್ಲಿ ಜಿಡಿಪಿ ಬೆಳವಣಿಗೆ ಉತ್ತಮವಾಗಿತ್ತು ಎಂಬುದು ಸ್ಪಷ್ಟ. ಇದನ್ನು ಮರೆಮಾಚಲು ಬರುವುದಿಲ್ಲ. ಜಿಡಿಪಿ ಬೆಳವಣಿಗೆ ಶೇ. ೬ ಎಂಬುದು ದೊಡ್ಡ ಸಾಧನೆ ಏನಲ್ಲ. ಹಿಂದೆ ನಮ್ಮ ಗುರಿ ೫ ಶತಕೋಟಿ ಡಾಲರ್ ಆಗಿತ್ತು. ಆದರೆ ಕಾಲಕ್ರಮೇಣ ನಮ್ಮ ಹೆಜ್ಜೆಗಳನ್ನು ಹಿಂದಕ್ಕೆ ಇಡುತ್ತಾ ಬಂದೆವು. ೨೦೨೩-೨೪ರಲ್ಲಿ ನಮ್ಮದು ಕೋಟಿ ೧೭೨ ಲಕ್ಷ ಕೋಟಿ ರೂ. ಇದು ೩.೫೭ ಶತಕೋಟಿ ಡಾಲರ್‌ಗೆ ಸಮಾನ. ೫ ಶತಕೋಟಿ ಡಾಲರ್ ತಲುಪಲು ಇನ್ನೂ ಹಲವು ವರ್ಷಗಳೇ ಬೇಕು. ೧೦ ವರ್ಷಗಳಲ್ಲಿ ಯುಪಿಎ ಸರ್ಕಾರ ಕಂಡ ಬೆಳವಣಿಗೆ ಶೇ. ೬.೭ ಎನ್‌ಡಿಎ ಬೆಳವಣಿಗೆ ಶೇ. ೫.೯ ಎಂಬುದು ಸ್ಪಷ್ಟ. ಇದಕ್ಕೆ ಬೇರೆ ಯಾವ ಮಾನದಂಡವೂ ಬೇಕಿಲ್ಲ. ಆಂತರಿಕವಾಗಿ ದೇಶದಲ್ಲಿ ನಡೆಯುವ ಆರ್ಥಿಕ ನಿರ್ವಹಣೆ ಪ್ರಮುಖವಾಗುತ್ತದೆ. ಮೋದಿ ಮೂರನೇ ಬಾರಿ ಪ್ರಧಾನಿಯಾದರೂ % ಶತಕೋಟಿ ಡಾಲರ್ ತಲುಪಲು ಇನ್ನೂ ೫ ವರ್ಷ ಬೇಕು. ಈ ಗುರಿಯನ್ನು ೨೦೨೯-೨೯ಕ್ಕೆ ತಲುಪಬೇಕು. ಆಗ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಈಗಲೇ ಅತಿ ವೇಗದಲ್ಲಿ ಬೆಳಯುತ್ತಿರುವ ಆರ್ಥಿಕತೆ ಎಂದು ಬಣ್ಣಿಸುವುದು ಸರಿಯಲ್ಲ. ೫ ಶತಕೋಟಿ ಡಾಲರ್, ೧೫೦ ಕೋಟಿ ಜನಸಂಖ್ಯೆ. ತಲಾವಾರು ಆದಾಯ ೩೩೨೩ ಡಾಲರ್ ಆಗಲಿದೆ. ಆಗ ನಾವು ಕೆಳಮಧ್ಯಮ ಆದಾಯದ ದೇಶಗಳ ಸಾಲಿನಲ್ಲಿರುತ್ತೇವೆ. ಆದಾಯದಲ್ಲಿ ನಮ್ಮದು ೧೪೦ನೇ ರ‍್ಯಾಂಕ್. ೨೦೨೮ಕ್ಕೆ ನಾವು ೫-೧೦ ರ‍್ಯಾಂಕ್ ಮೇಲೆ ಹೋಗಬಹುದು.
ಈಗಲೂ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ದೇಶದ ವಿವಿಧ ವರ್ಗಗಳಲ್ಲಿ ೨೨ ಕೋಟಿ ಜನ ಇನ್ನೂ ಬಡತನದಲ್ಲಿದ್ದಾರೆ. ೨೦೦೫-೧೫ ಅವಧಿಯಲ್ಲಿ ೨೭ ಕೋಟಿ ಜನ ಬಡತನದಿಂದ ಮೇಲೆ ಬಂದರು ಎಂದು ವಿಶ್ವಸಂಸ್ಥೆ ಅಭಿವೃದ್ಧಿ ವರದಿ ತಿಳಿಸಿದೆ. ೨೨ ಕೋಟಿ ಜನ ಬಡತನದಿಂದ ಹೊರ ಬಂದ ಬಗ್ಗೆ ಯಾವ ವರದಿಯೂ ಹೇಳಿಲ್ಲ. ನಿರುದ್ಯೋಗದ ಪ್ರಮಾಣ ಶೇ. ೮.೭ ರಲ್ಲಿದೆ. ಇದರಲ್ಲಿ ಎಲ್ಲ ವರ್ಗಗಳ ಜನ ಇದ್ದಾರೆ. ವಿದ್ಯಾವಂತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವೀಧರರು ರೈಲ್ವೆಯಲ್ಲಿ ಸಾಮಾನ್ಯ ಕೆಲಸಗಳಿಗೂ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದ ಮೇಲೆ ನಿರುದ್ಯೋಗದ ಭೀಕರತೆ ತಿಳಿಯುತ್ತದೆ. ಕಾರ್ಮಿಕರು ಪಾಲ್ಗೊಳ್ಳುವುದು ಶೇ. ೫೦ ರಿಂದ ೬೦ಕ್ಕೆ ಏರಬೇಕು. ಮಹಿಳೆಯರ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇ. ೨೫ ದಾಟಬೇಕು. ಬಡ ಕುಟುಂಬದವರು ತಮಗೆ ಬೇಕಾದ ಅಗತ್ಯವಸ್ತುಗಳನ್ನು ಸುಲಭವಾಗಿ ಖರೀದಿಸುವಂತಾಗಬೇಕು. ಕಾರ್ಮಿಕರ ಕೂಲಿ ದರ ಕೂಡ ಬೆಳವಣಿಗೆ ಕಂಡಿಲ್ಲ. ಹಣದುಬ್ಬರ, ನಿರುದ್ಯೋಗ ದೊಡ್ಡ ಆತಂಕ ಸೃಷ್ಟಿಸಿದೆ. ಪ್ರಧಾನಿ ಮೋದಿ ಚೀನಾ ಮತ್ತು ಮಣಿಪುರದ ಬಗ್ಗೆ ಚಕಾರ ಎತ್ತಿಲ್ಲ. ಪ್ರಧಾನಿ ಈ ವಿಷಯದಲ್ಲಿ ಬಾಯಿ ಬಿಡುವಂತೆ ಮಾಡಬೇಕು. ಕೆಲವು ವಿಷಯಗಳಲ್ಲಿ ಮೌನವಹಿಸುವುದಕ್ಕೆ ಕಾರಣವೇನು ಎಂಬುದು ಜನರಿಗೆ ತಿಳಿಯಬೇಕು.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಎಂದರೆ ಪ್ರಧಾನಿ, ಸಚಿವ ಸಂಪುಟ ಇರುತ್ತದೆ. ಪ್ರಧಾನಿ ಹೊರತುಪಡಿಸಿದರೆ ಉಳಿದವರ ಧ್ವನಿ ಕೇಳಿಸುವುದೇ ಇಲ್ಲ. ಅವರು ಇದ್ದೂ ಇಲ್ಲದಂತೆ ಕಂಡು ಬರುತ್ತಿದೆ. ಅಮಿತ್ ಶಾ ಮಾತುಗಳು ಮಾತ್ರ ಆಗಾಗ್ಗೆ ಕೇಳಿ ಬರುತ್ತದೆ. ಉಳಿದವರ ಬಗ್ಗೆ ಏನೂ ಹೇಳುವಂತಿಲ್ಲ. ಏಕಚಕ್ರಾಧಿಪತ್ಯ ಇದ್ದಂತೆ ಕಂಡು ಬರುತ್ತದೆ. ಇದಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಾಮೂಹಿಕ ಹೊಣೆಗಾರಿಕೆ ಇರುತ್ತದೆ ಎಂದು ಹೇಳುತ್ತೇವೆ.
ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಅದಕ್ಕೆ ಅವಕಾಶ ಇಲ್ಲ ಎಂಬುದು ಸ್ಪಷ್ಟ. ಒಬ್ಬ ವ್ಯಕ್ತಿ ಹೇಳಿದ್ದೇ ನಡೆಯುವುದು ಎಂಬ ವ್ಯವಸ್ಥೆ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ತಳಹದಿಯನ್ನು ಕಲ್ಪಿಸಿಕೊಡುವುದಿಲ್ಲ. ಆರ್ಥಿಕ ಬೆಳವಣಿಗೆ ಒಬ್ಬ ವ್ಯಕ್ತಿಯನ್ನು ಅವಲಂಬಿಸಿರುವುದಿಲ್ಲ. ಅದೊಂದು ವ್ಯವಸ್ಥೆ. ಇಡೀ ವ್ಯವಸ್ಥೆ ಉತ್ತಮಗೊಂಡಲ್ಲಿ ಮಾತ್ರ ನಿಗದಿತ ಗುರಿ ತಲುಪಬಹುದು.