For the best experience, open
https://m.samyuktakarnataka.in
on your mobile browser.

ಇಂಗ್ಲಿಷ್ ಸಿಟ್ಟೋ ಕನ್ನಡ ಸಿಟ್ಟೋ

03:00 AM Oct 30, 2024 IST | Samyukta Karnataka
ಇಂಗ್ಲಿಷ್ ಸಿಟ್ಟೋ ಕನ್ನಡ ಸಿಟ್ಟೋ

ಎಲ್ಲದಕ್ಕೂ ಪ್ರಶ್ನೆ ಮಾಡುತ್ತಿದ್ದ ತಿಗಡೇಸಿಗೆ ಎಲ್ಲರೂ ಪ್ರಶ್ನೆ ಮಾಡೋ ತಿಗಡೇಸಿ ಎಂದು ಕರೆಯುತ್ತಿದ್ದರು. ಒಂದು ಅವಧಿಗೆ ಗ್ರಾಮ ಪಂಚಾಯ್ತಿಗೆ ಸದಸ್ಯನೂ ಆಗಿದ್ದ. ಆಗಿನ ಸಂದರ್ಭದಲ್ಲಿ ಊರಿನಲ್ಲಿ ಏನಾದರೂ ಆದರೆ ಈತನೇ ಸರಪಂಚನ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳುತ್ತಿದ್ದ. ಪಕ್ಕದ ಮನೆಯ ಹಣಕದ್ದು ಪಟ್ಟಣಕ್ಕೆ ಓಡಿ ಹೋಗಿದ್ದ ಲೊಂಡೆನುಮನನ್ನು ಹಿಡಿದುಕೊಂಡು ಬಂದು ಪಂಚಾಯ್ತಿ ಕಟ್ಟೆಗೆ ಕೇಸು ಹಾಕಿದರು. ತಿಗಡೇಸಿ ಆತನನ್ನು ನಿಲ್ಲಿಸಿಕೊಂಡು ನೀನು ಇಲ್ಲಿಂದ ಎಷ್ಟು ಗಂಟೆಗೆ ಹೋಗಿದ್ದೆ ಎಂದು ಕೇಳಿದ. ಅವನು ಇಷ್ಟು ಗಂಟೆಗೆ ಅಂದ. ನೀನು ಬಸ್ಸಿನಲ್ಲಿ ಹೋಗಿದ್ದೆಯಾ ಎಂದು ಕೇಳಿದ. ಲೊಂಡೆನುಮ ಇಲ್ಲ ಸಾ ಹೆಂಡದ ಲಾರಿಯಲ್ಲಿ ಹೋಗಿದ್ದೆ ಅಂದ. ಹಾಂ ಅಲ್ಲಿ ಎಲ್ಲಿ ಹೋಗಿದ್ದೆ ಎಂದು ಕೇಳಿದ. ಆತ ವಿಧಾನಸೌಧಕ್ಕೆ ಹೋಗಿದ್ದೆ ಅಂದ. ವಿಧಾನಸೌಧಕ್ಕೆ ಈ ಕಡೆಯಿಂದ ಹೋದೆಯಾ ಆ ಕಡೆಯಿಂದ ಹೋದೆಯಾ ಅಂದರೆ ಇಲ್ಲ ಮಧ್ಯದಿಂದ ಹೋದೆ ಅಂದ. ತಲೆಕೆಟ್ಟ ತಿಗಡೇಸಿ ಅಲ್ಲಿ ಮಂತ್ರಿಗಳನ್ನು ಭೇಟಿಯಾಗಿದ್ದೆಯಾ? ಎಂದು ಕೇಳಿದಾಗ ಲೊಂಡೆನುಮ ಇಲ್ಲ ಸಾ ಅವರ ಪಿಎಸ್‌ಗಳನ್ನು ಭೇಟಿಯಾದೆ ಅಂದ. ಓಹೋ ಪಿಎಸ್‌ಗಳು ಏನು ಹೇಳಿದರು ಎಂದು ಕೇಳಿದ. ಗಟಗಟ ನೀರು ಕುಡಿದ ಲೊಂಡೆನುಮ ಸಾ… ಇಲ್ಲಿಂದ ಇಂತಿಷ್ಟು ಕಿಲೋಮೀಟರ್ ದೂರದಲ್ಲಿ ಇಂತಹ ಊರಿದೆ. ಆ ಊರಿನ ಪಂಚಾಯ್ತಿ ಮೆಂಬರ್ ತಿಗಡೇಸಿ ಅಂತ ಇದ್ದಾನೆ. ಆತನ ಮೇಲೆ ತುಂಬಾ ಕಂಪ್ಲೇಂಟ್ಸ್ ಬಂದಿವೆ. ಅದರ ಎನ್‌ಕ್ವಯರಿ ಮಾಡಿ ಎಂದು ಮಿನಿಸ್ಟರ್ ಸಾಹೇಬರು ಹುಕುಂ ಮಾಡಿದ್ದಾರೆ ಎಂದು ಹೇಳಿದ. ಮೈ ಎಲ್ಲ ಬೆವೆತ ತಿಗಡೇಸಿ… ಇವತ್ತು ಬೇಡ ನಾಳೆ ಪಂಚಾಯ್ತಿ ಮಾಡೋಣ ಎಂದು ಹೇಳಿದ. ಎಲ್ಲರೂ ಹೋದರು. ಕೂಡಲೇ ಬಾಡಿಗೆ ಕಾರು ಮಾಡಿಕೊಂಡು ಬೆಂಗಳೂರಿಗೆ ಹೋಗಿ ವಿಧಾನಸೌಧಕ್ಕೆ ದೌಡಾಯಿಸಿದ. ಇಲಾಖೆಯ ಕಚೇರಿ ಹುಡುಕಿ ಒಳಗೆ ಹೋಗಿ ಸಾಹೇಬರು ಇದ್ದಾರಾ? ಎಂದು ಕೇಳಿದ. ಆಗ ಅಲ್ಲಿದ್ದವ ಕೈ ಮುಂದೆ ಮಾಡಿ ಕೊಟ್ಟರೆ ಇದ್ದಾರೆ ಇಲ್ಲದಿದ್ದರೆ ಇಲ್ಲ ಅಂದ. ಕಿಸೆಯಲ್ಲಿದ್ದುದನ್ನು ಕೊಟ್ಟು ಒಳಗೆ ಹೋದ. ಅಲ್ಲಿ ಸಾಹೇಬರು ಕುಳಿತಿದ್ದರು. ತಿಗಡೇಸಿಯು ಸಾಹೇಬರೆ ನಾನು ಇಂಗಿಂಗೆ ಮೆಂಬರ್ ಅಂದ. ಓಹೋ ಪ್ಲೀಸ್ ಸಿಟ್ ಅಂತ ಸಾಹೇಬರು ಅಂದರು. ಮೊದಲೇ ಪ್ರಶ್ನೆಗಳನ್ನು ಮಾಡಿ ರೂಢಿಯಿತ್ತಲ್ಲವೇ ಹಾಗೆಯೇ ಸಾರ್ ಕನ್ನಡ ಸಿಟ್ಟೋ ಇಂಗ್ಲಿಷ್ ಸಿಟ್ಟೋ ಅಂದ. ಸಾಹೇಬರು ಸಿಟ್ಟಿಗೆದ್ದು ಇಂಥವರನ್ನು ಯಾಕೆ ಒಳಗೆ ಬಿಡುತ್ತೀರಿ..? ಈತನ ಮೇಲೆ ಕೇಸು ಹಾಕಿ ಮೆಂಬರ್‌ಶಿಪ್ ಕ್ಯಾನ್ಸಲ್ ಮಾಡಿಸಿ ಎಂದು ಒದರಾಡಿದರು. ಅಲ್ಲಿಂದ ಓಡಿಬಂದ ತಿಗಡೇಸಿ ಬೀಗರ ಊರಿಗೆ ಹೋದ.