For the best experience, open
https://m.samyuktakarnataka.in
on your mobile browser.

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು

11:12 PM Jan 22, 2025 IST | Samyukta Karnataka
ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು

ಕೋಲ್ಕತಾ: ೨೦೨೫ರ ಮೊದಲ ಟಿ೨೦ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿಯ ಅಮೋಘ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿದ ಆಂಗ್ಲರ ಪಡೆ, ಕೇವಲ ೧೩೨ ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ ಸುಲಭವಾಗಿ ಇನ್ನೂ ೭.೧ ಓವರ್‌ಗಳು ಬಾಕಿಯಿರುವಂತೆಯೇ ಜಯ ಸಂಪಾದಿಸಿದೆ. ಇದರಿಂದ ೫ ಟಿ೨೦ ಪಂದ್ಯಗಳ ಸರಣಿಯಲ್ಲಿ ೧-೦ಯಿಂದ ಮುನ್ನಡೆ ಸಾಧಿಸಿದೆ.
ಮೊದಲು ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡ ನಾಯಕ ಸೂರ್ಯಕುಮಾರ್ ಯಾದವ್, ಎದುರಾಳಿಗಳಿಗೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ನೀಡಿದರು. ಆದರೆ, ಮೊದಲ ಓವರ್‌ನಲ್ಲೇ ಎಡಗೈ ವೇಗಿ ಅರ್ಶದೀಪ್ ಸಿಂಗ್ ಸ್ವಿಂಗ್ ಬೌಲಿಂಗ್‌ಗೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಶೂನ್ಯ ಸುತ್ತಿ ಕ್ಯಾಚ್ ನೀಡಿ ಹೊರ ನಡೆದರು. ಇಷ್ಟು ಸಾಲದೆಂಬಂತೆ ಮತ್ತೋರ್ವ ಆರಂಭಿಕ ಆಟಗಾರ ಬೆನ್ ಡಕ್ಕೆಟ್ ಕೂಡ ೪ ರನ್‌ಗಳಿಸಿ ಇದೇ ಅರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ಔಟಾಗುತ್ತಿದ್ದಂತೆ, ಇಂಗ್ಲೆಂಡ್‌ಗೆ ಎರಡನೇ ಆಘಾತವಾಯಿತು. ಭಾರತ ಆರಂಭದಲ್ಲೇ ಗಾಯದ ಮೇಲೆ ಬರೆ ಎಳೆದು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಇಲ್ಲಿಂದ ಇಂಗ್ಲೆಂಡ್ ಕೊಂಚ ಹೋರಾಟ ನಡೆಸಿತು. ನಾಯಕ ಜಾಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ರ ಎಚ್ಚರಿಕೆಯ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ತಂಡ ೩೮ ಎಸೆತಗಳಲ್ಲಿ ೫೦ ರನ್‌ಗಳನ್ನು ತಲುಪಿತು. ಇನ್ನೇನು ಈ ಜೋಡಿ ಭಾರತಕ್ಕೆ ಅಪಾಯಕಾರಿ ಆಗಲಿದೆ ಎನ್ನುವಾಗಲೇ, ಭಾರತಕ್ಕೆ ವರುಣ್ ಚಕ್ರವರ್ತಿ ಆಧಾರವಾದರು. ೧೭ ರನ್‌ಗಳಿಸಿದ್ದ ಹ್ಯಾರಿ ಬ್ರೂಕ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ ವರುಣ್, ಅದೇ ಓವರ್‌ನಲ್ಲಿ ಸ್ಫೋಟಕ ಬ್ಯಾಟರ್ ಲಿಯಮ್ ಲೀವಿಂಗ್‌ಸ್ಟನ್‌ರನ್ನು ಡಕೌಟ್ ಮಾಡಿದರು. ಇಲ್ಲಿಂದ ಇಂಗ್ಲೆಂಡ್ ತಂಡವನ್ನು ಕಾಪಾಡುವ ಜವಾಬ್ದಾರಿ ನಾಯಕ ಜಾಸ್ ಬಟ್ಲರ್ ಮೇಲೆ ಬಿತ್ತು.
ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ನಾಯಕ ಜಾಸ್ ಬಟ್ಲರ್, ಸ್ಫೋಟಕ ಬ್ಯಾಟಿಂಗ್ ಅನ್ನೇ ನಡೆಸಿ, ರನ್ ಮೊತ್ತ ಹೆಚ್ಚಿಸಲು ಹರ ಸಾಹಸ ಪಟ್ಟರು. ೩೪ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜಾಸ್ ಬಟ್ಲರ್, ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ೧೫೪.೫೪ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ ಬಟ್ಲರ್ ೮ ಬೌಂಡರಿ ಹಾಗೂ ೨ ಸಿಕ್ಸರ್‌ಗಳನ್ನು ಸಿಡಿಸಿ ಸಮಾಧಾನ ಪಟ್ಟರು. ಆದರೆ, ಬಟ್ಲರ್‌ಗೂ ವರುಣ್ ಚಕ್ರವರ್ತಿ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಬಟ್ಲರ್ ಬಾರಿಸಿದ ಚೆಂಡು ನೇರವಾಗಿ ನಿತೀಶ್ ಕುಮಾರ್ ರೆಡ್ಡಿ ಕೈ ಸೇರಿತು.
ಮಧ್ಯಮ ಕ್ರಮಾಂಕದಲ್ಲಿ ಆಡಿದ ಜಾಕಬ್ ಬೆಥೆಲ್ ೭ ರನ್ ಗಳಿಸಿ ಔಟಾದರೆ,ಜೆಮ್ಮಿ ಓವರ್‌ಟನ್ ೨ ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಗಸ್ ಅಟ್ಕಿನ್‌ಸನ್ ಕೂಡ ೨ ರನ್‌ಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಟ್ಲರ್ ಔಟಾಗುವ ವೇಳೆಗೆ ಇಂಗ್ಲೆಂಡ್ ತಂಡ ಕೇವಲ ೧೦೯ ರನ್‌ಗಳಿಸಿತ್ತು. ಬಾಲಂಗೋಚಿಗಳಾದ ಜೋಫ್ರಾ ಆರ್ಚರ್ ೧೨ ಹಾಗೂ ಆದಿಲ್ ರಶೀದ್ ೮ ರನ್‌ಗಳಿಸಿದ ಕಾರಣ, ಇಂಗ್ಲೆಂಡ್ ೧೩೨ ರನ್‌ಗಳವರೆಗೆ ಸಾಗಲು ಸಾಧ್ಯವಾಯಿತು. ಮಾರ್ಕ್ವುಡ್ ರನೌಟ್ ಆಗುವುದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಅಂತ್ಯವಾಯಿತು.
ಇನ್ನು ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಿಂದ ಸ್ಫೋಟಕ ಆರಂಭ ಒದಗಿ ಬಂತು. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ೪.೨ ಓವರ್‌ಗಳಲ್ಲೇ ೪೧ ರನ್‌ಗಳಿಸಿದ ಪರಿಣಾಮ, ಭಾರತ ಸುಲಭ ಜಯದ ಹಾದಿಯಲ್ಲಿ ಸಾಗಿತು. ಆದರೆ ಈ ವೇಳೆ ಸಂಜು ಸ್ಯಾಮ್ಸನ್ ೨೬ ರನ್‌ಗಳಿಸಿ ಔಟಾದರೆ, ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಬಲಿಯಾದರು. ಆದರೆ, ಮತ್ತೋರ್ವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರೆ, ಅಭಿಷೇಕ್ ಜೊತೆಗೂಡಿದ ತಿಲಕ್ ವರ್ಮಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಾ ರನ್ ಕದಿಯುತ್ತಾ ಸಾಗಿದರು. ಇದರಿಂದ, ಇಂಗ್ಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತಾ ಹೋಯಿತು.
ಅಭಿಷೇಕ್ ಶರ್ಮಾ ೫ ಬೌಂಡರಿ, ೮ ಸಿಕ್ಸರ್‌ಗಳ ಸಮೇತ ೪೪ ಎಸೆತಗಳಲ್ಲಿ ೩೪ ಎಸೆತಗಳಲ್ಲಿ ೭೯ ರನ್‌ಗಳಿಸಿ ಕೊನೆಯವರಾಗಿ ಔಟಾದರು. ಇದಾದ ಬಳಿಕ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಗೆಲುವು ತಂದಿಟ್ಟರು.

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ೨೦ ಓವರ್‌ಗಳಲ್ಲಿ ೧೩೨ ರನ್‌ಗಳಿಗೆ ಆಲೌಟ್
ಭಾರತ ೧೨.೫ ಓವರ್‌ಗಳಲ್ಲಿ ೩ ವಿಕೆಟ್‌ಗೆ ೧೩೩ ರನ್