ಇಂಡಿಯಾ ಮೈತ್ರಿಕೂಟ ಒಗ್ಗಟ್ಟಿಗೆ ಶಕ್ತಿಮೀರಿ ಪ್ರಯತ್ನ
ಕಲಬುರಗಿ: ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಒಟ್ಟಾಗಿರಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಇನ್ನು ಒಕ್ಕೂಟದಿಂದಲೇ ಎಲ್ಲರೂ ಸ್ಪರ್ಧೆ ಮಾಡಿದರೆ ಒಳ್ಳೆಯ ಪೈಪೋಟಿ ನೀಡಬಹುದು ಎಂದು ಇಂಡಿಯಾ ಮೈತ್ರಿಒಕ್ಕೂಟದ ಅಧ್ಯಕ್ಷ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಶ್ಚಿಮ ಬಂಗಾಳದ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ. ಈಗ ಏನಾದರೂ ಪ್ರತಿಕ್ರಿಯಿಸಿದರೆ ಗೊಂದಲ ಮೂಡುತ್ತದೆ. ಹೀಗಾಗಿ, ತಾವು ಈ ಬಗ್ಗೆ ಏನೇನು ಹೇಳಲಾರೆ ಎಂದು ಪುನರುಚ್ಚಿಸಿದರು.
ನಿತಿಶ್ ವಿಚಾರದಲ್ಲಿ ಗೊಂದಲ
ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ಮೈತ್ರಿಕೂಟ ತೊರೆಯುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ, ಡೆಹ್ರಾಡೂನ್‌ಗೆ ಹೋಗಿ ಮಾಹಿತಿ ತೆಗೆದುಕೊಂಡು ಪ್ರತಿಕ್ರಿಯಿಸುವೆ. ಆದರೆ ನಿತೀಶ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಬಗ್ಗೆ ಮಾಹಿತಿಯಿಲ್ಲ. ರಾಜ್ಯಪಾಲರನ್ನು ಭೇಟಿ ಆಗಿರುವ ಬಗ್ಗೆಯೂ ನನಗೇನು ಗೊತ್ತಿಲ್ಲ. ಹೀಗಾಗಿ, ನಿತಿಶ್ ಅವರನ್ನು ಕರೆದು ಮಾತನಾಡಿ ಒಕ್ಕೂಟದಲ್ಲೇ ಉಳಿಯುವಂತೆ ಮನವೊಲಿಸುವೆ. ಆದರೆ ಯಾವ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದ ಅವರು, ನಿತಿಶ್ ವಿಚಾರ ಅಸ್ಪಷ್ಟವಾಗಿ ಹೇಳಿದರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಬೇಕು. ಈ ದಿಸೆಯಲ್ಲಿ ಕಾಂಗ್ರೆಸ್‌ನಿಂದ ನಿರಂತರ ಪ್ರಯತ್ನ ಮುಂದುವರಿದಿದೆ. ಅಷ್ಟಕ್ಕೂ ನಮ್ಮಲ್ಲಿ ಒಗ್ಗಟ್ಟಿದೆ. ನಮ್ಮ ಪ್ರಯತ್ನ ಒಗ್ಗಟ್ಟು ಮುರಿಯಬಾರದು ಎಂಬುದಿದೆ ಎಂದರು.