ಇಂದಿನಿಂದ ದೆಹಲಿಯಲ್ಲಿ ನಂದಿನಿ ಉತ್ಪನ್ನ ಮಾರಾಟ
ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ, ನಂದಿನಿ ಬ್ರಾಂಡ್ ತನ್ನ ಡೈರಿ ಉತ್ಪನ್ನಗಳ ಮಾರಾಟದ ವ್ಯಾಪ್ತಿಯನ್ನು ನವದೆಹಲಿಗೆ ವಿಸ್ತರಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ಈ ಕುರಿರತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಒಕ್ಕೂಟ ತನ್ನ ಉತ್ಪನ್ನಗಳನ್ನು ಕರ್ನಾಟಕ, ಮಹಾರಾಷ್ಟ್ರದ ಮುಂಬೈ, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಕೇರಳದಲ್ಲಿ ಮಾರಾಟ ಮಾಡುತ್ತಿದೆ. ಇದೀಗ ನಂದಿನಿ ಹಾಲಿನ ಮಾರುಕಟ್ಟೆಯನ್ನು ದೆಹಲಿಗೆ ವಿಸ್ತರಣೆ ಮಾಡಲಾಗುತ್ತಿದೆ ಎಂದರು.
ಇನ್ನು ಮುಂದೆ ನಂದಿನಿ ಬ್ರ್ಯಾಂಡ್ ಹಾಲು ಗುಜರಾತ್‌ನ ಅಮುಲ್ ಹಾಲಿನೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ. ದೆಹಲಿಯಲ್ಲಿ ಪ್ರಸ್ತುತ ಮದರ್ ಡೈರಿ, ಅಮುಲ್, ಮಧುಸೂದನ್ ಮತ್ತು ನಮಸ್ತೆ ಇಂಡಿಯಾ ಸೇರಿ ಕೆಲವು ಬ್ರ್ಯಾಂಡ್‌ನ ಹಾಲುಗಳು ಮಾತ್ರ ಪ್ರಾಬಲ್ಯ ಹೊಂದಿದೆ. ಇದೀಗ ದೆಹಲಿಗೆ ಕೆಎಂಎಫ್ ಸಂಸ್ಥೆಯ ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿಗೆ ಹಾಲನ್ನು ಸರಬರಾಜು ಮಾಡುವ ಟೆಂಡರ್ ಅನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.