For the best experience, open
https://m.samyuktakarnataka.in
on your mobile browser.

ಇಂದು ದೆಹಲಿ ಸಿಎಂ ರಾಜೀನಾಮೆ

12:50 AM Sep 17, 2024 IST | Samyukta Karnataka
ಇಂದು ದೆಹಲಿ ಸಿಎಂ ರಾಜೀನಾಮೆ

ನವದೆಹಲಿ: ದೆಹಲಿ ಅಬಕಾರಿ ಅಕ್ರಮ ನೀತಿ ಹಗರಣದಲ್ಲಿ ಶುಕ್ರವಾರ ಜಾಮೀನಿನ ಮೇಲೆ ಹೊರಬಂದ ಅರವಿಂದ್ ಕೇಜ್ರಿವಾಲ್ ಮರುದಿನವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಇದೀಗ ಉತ್ತರಾಧಿಕಾರಿ ಆಯ್ಕೆಗಾಗಿ ಪ್ರಯತ್ನಗಳು ನಡೆದಿವೆ. ಸೋಮವಾರ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುವಂತೆ ಕೂಗು ಕೇಳಿಬಂದರೂ, ತಮ್ಮ ನಿರ್ಧಾರಕ್ಕೆ ಅವರು ಬದ್ಧರಾಗಿರಾಗಿದ್ದಾರೆ.
ಮಂಗಳವಾರ ಆಮ್ ಅದ್ಮಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು ಮುಂದಿನ ಮುಖ್ಯಮಂತ್ರಿಯ ಯಾರು ಎಂಬ ನಿರ್ಧಾರ ಆಗುವ ಸಾಧ್ಯತೆ ಇದೆ. ಸಂಜೆ ೪.೩೦ಕ್ಕೆ ಲೆಫ್ಟಿನೆಂಟ್ ಗವರ್ನರ್ ಭೇಟಿಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ನಡುವೆ ಪಕ್ಷದ ಮುಖಂಡರೊಬ್ಬರು ಚುನಾವಣೆವರೆಗೂ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪಕ್ಷದ ಸಭೆಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ಬಗ್ಗೆ ನಿಗೂಢತೆ ಮುಂದುವರಿದಿದೆ.
ಭ್ರಷ್ಟಾಚಾರದ ಆರೋಪದ ಮೇಲೆ ಸುಮಾರು ಆರು ತಿಂಗಳ ಕಾಲ ಜೈಲಿನಲ್ಲಿದ್ದ ಕೇಜ್ರೀವಾಲ್‌ಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ಎದುರಿಸಬೇಕಾದ ಸವಾಲಿದೆ. ಕುಗ್ಗಿರುವ ಪಕ್ಷದ ವರ್ಚಸ್ಸನ್ನು ಮತ್ತೆ ಮೇಲೆತ್ತಬೇಕಾದ ಅನಿವಾರ್ಯತೆ ಇದೆ. ಜೈಲಿಗೆ ಹೋದರೂ ಕುರ್ಚಿ ಬಿಟ್ಟು ಇಳಿಯಲಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ಗುರಾಣಿಯಾಗಿ ಈ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಜಾಮೀನು ಪಡೆದರೂ ಕಡತಗಳಿಗೆ ಸಹಿ ಹಾಕದಂತೆ ಷರತ್ತು ಇರುವುದೂ ಇನ್ನೊಂದು ಕಾರಣ. ಆದರೆ ನವೆಂಬರ್ ನಲ್ಲೇ ಚುನಾವಣೆ ನಡೆಸುವಂತೆ ಆಪ್ ನಾಯಕರಿಂದ ಕೂಗೆದ್ದಿದೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಿ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಕೇಜ್ರಿವಾಲ್ ಪದತ್ಯಾಗದ ಹಿಂದೆ ಇರಬಹುದು. ಅಧಿಕಾರಕ್ಕೆ ಅಂಟಿ ಕೂರುವ ವ್ಯಕ್ತಿ ಅಲ್ಲ ಎಂಬ ಸಂದೇಶ ಸಾರುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.