For the best experience, open
https://m.samyuktakarnataka.in
on your mobile browser.

ಇಡಿ ಹಗರಣದ ಹೂರಣ ಬಯಲು ಮಾಡಿದೆ

09:47 AM Jan 18, 2025 IST | Samyukta Karnataka
ಇಡಿ ಹಗರಣದ ಹೂರಣ ಬಯಲು ಮಾಡಿದೆ

ಭ್ರಷ್ಟತೆಯ ಕರ್ಮಕಾಂಡವನ್ನು ಇದೀಗ ಜನತೆಯ ಮುಂದಿಟ್ಟಿದೆ

ಬೆಂಗಳೂರು: ಆರೋಪ‌ ಹೊತ್ತು ಆಡಳಿತ ನಡೆಸುತ್ತಿರುವ ದಾಖಲೆ ಸಿದ್ದರಾಮಯ್ಯನವರ ಹೆಸರಲ್ಲಿ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಪ್ರಾಸಿಕ್ಯೂಷನ್‌ ಅನುಮತಿಯನ್ನು ವಿರೋಧಿಸಿ ಸಾಂವಿಧಾನಿಕ ಹುದ್ದೆಯಲ್ಲಿರುವ ಘನತೆವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಕಾಂಗ್ರೆಸ್ಸಿಗರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು ಮುಖಭಂಗ ಉಂಟುಮಾಡಿತು, ದೇಶದ ಹೆಸರಾಂತ ಕಾನೂನು ಪಂಡಿತ ಹಿರಿಯ ವಕೀಲರುಗಳೇ ದೆಹಲಿಯಿಂದ ಬಂದು ಸಿದ್ದರಾಮಯ್ಯನವರ ಪರವಾಗಿ ಸುದೀರ್ಘವಾದ ಮಂಡಿಸಿದರೂ “ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಪ್ರಭಾವ ಇರುವ ಆರೋಪವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ,ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಕ್ರಮಬದ್ಧವಾಗಿದೆ”ಎಂದು ಹೈಕೋರ್ಟ್ ತೀರ್ಪು ನೀಡಿತು.

ಮುಖ್ಯಮಂತ್ರಿ ಕುಟುಂಬ ಪಡೆದುಕೊಂಡ 14 ನಿವೇಶನಗಳಲ್ಲಿ ರೂ 56 ಕೋಟಿ ಗಳಷ್ಟು ಪ್ರಾಧಿಕಾರಕ್ಕೆ ನಷ್ಟವಾಗಿದೆ ಎಂದು ಉಚ್ಛ ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತು, ಇದರ ಬೆನ್ನು ಹತ್ತಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಮುಡಾದಲ್ಲಿ‌ ನಡೆದಿರುವ‌ ನಿವೇಶನಗಳ‌ ಲೂಟಿ, ಸಾವಿರಾರು ಕೋಟಿ ರೂಪಾಯಿಗಳ ನಷ್ಟ, ಹಾಗೂ ಅಕ್ರಮ ಹಣ ವರ್ಗಾವಣೆ ಹಗರಣದ ಕುರಿತ ತನಿಖೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪವಿರುವ ಆರೋಪದಲ್ಲಿಯೂ ಸತ್ಯಾಂಶವಿದೆಯೆಂಬ ಅಂಶಗಳನ್ನು ವಿವರಿಸಿ ಮಹತ್ವದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಸದ್ಯ ಸುಮಾರು 300 ಕೋಟಿ ರೂ.ಮಾರುಕಟ್ಟೆ ಮೌಲ್ಯದ 142 ಸ್ಥಿರಾಸ್ತಿಗಳನ್ನು ಕಾಯ್ದೆಯನುಸಾರ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ED ಘೋಷಿಸಿದೆ, ಹಗರಣದ ಆಳ ದೊಡ್ಡದಾಗಿರುವ ಹಿನ್ನಲೆಯಲ್ಲಿ ತನಿಖೆಯು ಮುಂದುವರೆದಿರುವುದಾಗಿ ED ಹೇಳಿದೆ.

ತಮ್ಮ ವಿರುದ್ಧ ಹೈಕೋರ್ಟ್ ತೀರ್ಪು ಹೊರಬಂದಾಗಲೇ ಕರ್ನಾಟಕದ ಘನತೆಯನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸ್ಥಾನದ ಗೌರವ ಉಳಿಸಲು ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿತ್ತು, ಆದರೆ ‘ನೈತಿಕತೆ’ಎಂಬುದು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರು ಭಂಡತನದ ಪರಮಾವಧಿ ಮೆರೆದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಲೋಕಾಯುಕ್ತದದಲ್ಲಿ ತಾವೇ ನಿಯುಕ್ತಿಗೊಳಿಸಿಕೊಂಡ ತಮ್ಮ‌ ಕೈಕೆಳಗಿನ ಅಧಿಕಾರಿಗಳ ಮೂಲಕ ತನಿಖೆ ನಡೆಸಿ‌ ಕ್ಲೀನ್ ಚಿಟ್ ಪಡೆವ ಹವಣಿಕೆಯಲ್ಲಿದ್ದ ಸಿದ್ದರಾಮಯ್ಯ ನವರಿಗೆ ಜಾರಿನಿರ್ದೇಶನಾಲಯ ಬಿಡುಗಡೆ ಮಾಡಿರುವ ತನಿಖಾ ವರದಿಯ ಪ್ರಕಟಣೆ ಅವರ ಕಳಂಕಿತ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ, ಅನುಮಾನಿತ ಲೋಕಾಯುಕ್ತ ತನಿಖೆಗೆ ಅಂಕುಶ ಹಾಕುವ ರೀತಿಯಲ್ಲಿ ಇಡಿ ಮುಡಾ ನಿವೇಶನಗಳ ಲೂಟಿಕೋರತನದ ಭ್ರಷ್ಟತೆಯ ಕರ್ಮಕಾಂಡವನ್ನು ಇದೀಗ ಜನತೆಯ ಮುಂದಿಟ್ಟಿದೆ.

ಉಚ್ಚ ನ್ಯಾಯಾಲಯದಲ್ಲಿ ‌ಸಿಬಿಐ ಕೋರಿಕೆಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಿರ್ಣಾಯಕ ಹಂತ ತಲುಪಿರುವ ಈ ಸಮಯದಲ್ಲೇ ಇಡಿ ಹಗರಣದ ಹೂರಣ ಬಯಲು ಮಾಡಿದೆ, ಸದ್ಯ ಈಗಾಗಲೇ 14 ಅಕ್ರಮ ನಿವೇಶನಗಳನ್ನು ಮುಡಾಗೆ ಬೇಷರತ್ ಹಿಂದಿರುಗಿಸಿರುವ ಸಿದ್ದರಾಮಯ್ಯನವರು ಆ ಮೂಲಕ ತಮ್ಮ ಸ್ವಜನಪಕ್ಷಪಾತ ಹಾಗೂ ಭ್ರಷ್ಟತೆಯನ್ನು ಒಪ್ಪಿಕೊಂಡಿದ್ದಾರೆ.

ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬರ ಭ್ರಷ್ಟತೆ ಹಾಗೂ ಅಕ್ರಮದ ಸಾಕ್ಷಾಧಾರಗಳು ಇಷ್ಟರ ಮಟ್ಟಿಗೆ ಸಾಬೀತಾಗಿರುವ ಹಗರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಪ್ರಥಮದ್ದಾಗಿದೆ, ಇಷ್ಟಾದರೂ ಇನ್ನೂ ಆ ಸ್ಥಾನದಲ್ಲಿ ಮುಂದುವರೆಯುತ್ತಿರುವುದು ಕರ್ನಾಟಕದ ಘನತೆ ಮಣ್ಣುಪಾಲಾದರೂ ಸರಿ ತಾನು ಮಾತ್ರ ಮುಖ್ಯಮಂತ್ರಿಯ ಅವಧಿ ಪೂರ್ಣಗೊಳಿಸಬೇಕೆಂಬ ಕರಾಳ ಸಂಕಲ್ಪ ತೊಟ್ಟಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ.

ಸ್ವಾತಂತ್ರ್ಯಾನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ‌ಕುಳಿತ ವ್ಯಕ್ತಿಯೊಬ್ಬರು ಈ ಪರಿಯ ಆರೋಪ‌ ಹೊತ್ತು ಆಡಳಿತ ನಡೆಸುತ್ತಿರುವ ದಾಖಲೆ ಸಿದ್ದರಾಮಯ್ಯನವರ ಹೆಸರಲ್ಲಿ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ.

ಮಾತೆತ್ತಿದರೆ ತಾನೊಬ್ಬ ಪ್ರಾಮಾಣಿಕ ಎಂದು ಸ್ವಬಣ್ಣಿಸಿಕೊಳ್ಳುವ ಭ್ರಷ್ಟ ನಾಲಿಗೆಯ ಸಿದ್ದರಾಮಯ್ಯನವರ ಪರ ಅವರ ಭಟ್ಟಂಗಿ ಹಿಂಬಾಲಕರು ಬಿಟ್ಟರೆ ಅವರನ್ನು ಸಮರ್ಥಿಸುವವರು ರಾಜ್ಯದಲ್ಲಿ ಯಾರೊಬ್ಬರೂ ಇಲ್ಲ. ಅಷ್ಟೇ ಏಕೆ ಅವರ ಸ್ಥಾನ ತೆರೆವಿಗಾಗಿ ಕಾದು ಕುಳಿತಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಲ್ಲ ಎನ್ನುವುದು ಕಟು ವಾಸ್ತವ.

ಮಾನ್ಯ ಸಿದ್ದರಾಮಯ್ಯನವರೇ, ಮುಡಾ ವ್ಯೂಹದಿಂದ ಹೊರಬರಲು ಪ್ರಾರಂಭಿಕ ಹಂತದಲ್ಲಿ ನಿಮಗೆ ಮುಕ್ತ ಅವಕಾಶವಿತ್ತು‌, ಆದರೆ ಅದನ್ನು ಬದಿಗೊತ್ತಿ ವಿತಂಡವಾದ ಮೆರೆದಿರಿ, ಈಗಲೂ ಕನಿಷ್ಠ ನೈತಿಕತೆಯನ್ನು ಉಳಿಸಿಕೊಳ್ಳಲು ಕೊನೆ ಅವಕಾಶ ನಿಮಗಿದೆ, ನೀವು ರಾಜೀನಾಮೆ ನೀಡಿ ಕರ್ನಾಟಕದ ಗೌರವವನ್ನು ಕನಿಷ್ಠವಾದರೂ ಉಳಿಸುವ ಕೊನೆ ಅವಕಾಶ ಕಳೆದುಕೊಳ್ಳಬೇಡಿ, ಇದು ರಾಜಕೀಯ ದ್ವೇಷವಿಲ್ಲದ ನನ್ನ ಕಾಳಜಿಯ ಸಲಹೆ. ಸ್ವೀಕರಿಸುವುದು ಅಥವಾ ಧಿಕ್ಕರಿಸುವುದು ನಿಮಗೇ ಬಿಟ್ಟಿದ್ದು ಎಂದಿದ್ದಾರೆ.

Tags :