For the best experience, open
https://m.samyuktakarnataka.in
on your mobile browser.

ಇದು ಪಾಪರ್‌ ಸರ್ಕಾರ

08:34 PM Mar 10, 2024 IST | Samyukta Karnataka
ಇದು ಪಾಪರ್‌ ಸರ್ಕಾರ

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಚುನಾವಣೆ ಹೊಂದಾಣಿಕೆಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಈ ಪಾಪರ್‌ ಸರ್ಕಾರದ ಬಳಿ ಬರ ಪರಿಹಾರ ನೀಡಲು ಹಣವಿಲ್ಲ. ಆದರೆ ನೀರನ್ನು ಮಾತ್ರ ನೀಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸಿದೆ. ರೈತರು ಹೋರಾಟ ಮಾಡುತ್ತಿದ್ದಾರೆ, ಜನರು ಖಾಲಿ ಬಿಂದಿಗೆ ಹಿಡಿದುಕೊಂಡು ಬೀದಿಗಿಳಿದಿದ್ದಾರೆ. ಬೆಂಗಳೂರಿನಲ್ಲಿ ನೀರಿಗೆ ಕೊರತೆಯಾಗಿದೆ. ಇಷ್ಟಾದರೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಾರೆ ಎಂದರೆ ಇಂತಹ ನಾಚಿಕೆಗೆಟ್ಟ ಸರ್ಕಾರ ಇತಿಹಾಸದಲ್ಲೇ ಇಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್‌ ನಾಯಕರಿಗೆ ಬರ ಪರಿಹಾರ ತರಲು ಯೋಗ್ಯತೆ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಲಿ. ನಾವು ಸರ್ಕಾರ ನಡೆಸುವಾಗ ಕೇಂದ್ರದ ಕಡೆ ನೋಡದೆ ರೈತರಿಗೆ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಪಾಪರ್‌ ಆಗಿದ್ದು, ಕುಡಿಯುವ ನೀರಿಗೂ ಹಣವಿಲ್ಲ. ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲವಾದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.
ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆಂದು ಹೋರಾಟ ಮಾಡಿ, ಈಗ ಕೇಂದ್ರ ಸರ್ಕಾರ ಮಾಡಬೇಕು ಎನ್ನುತ್ತಿದ್ದಾರೆ. ಆಯ ವ್ಯಯದಲ್ಲಿ ಮೇಕೆದಾಟು ಯೋಜನೆಗೆ ನಯಾ ಪೈಸೆ ನೀಡಿಲ್ಲ. ಇವರಿಗೆ ಮಾನವಿದ್ದರೆ 10 ಸಾವಿರ ಕೋಟಿ ರೂಪಾಯಿಯನ್ನು ಈ ಯೋಜನೆಗೆ ಮೀಸಲಿಡಬೇಕಿತ್ತು ಎಂದರು.
ಬರ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಎಸ್‌ಡಿಆರ್‌ಎಫ್‌ ಹಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತಲುಪಿದೆ. ಎನ್‌ಡಿಆರ್‌ಎಫ್‌ ಹಣವನ್ನು ಕೇಂದ್ರ ಸರ್ಕಾರ ಒಟ್ಟಿಗೆ ತೀರ್ಮಾನ ಮಾಡಿ ಎಲ್ಲ ರಾಜ್ಯಗಳಿಗೆ ನೀಡುತ್ತದೆ. ಬಿಜೆಪಿ ಸರ್ಕಾರ ತಕ್ಷಣ ಪ್ರವಾಹ ಹಾನಿ ಪರಿಹಾರ ನೀಡಿದ್ದು ಬಳಿಕ ಕೇಂದ್ರ ಸರ್ಕಾರ ಹಣ ನೀಡಿತ್ತು. ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ ಇದೇ ರೀತಿ ತಡವಾಗಿ ಪರಿಹಾರ ನೀಡಲಾಗಿತ್ತು. ಆಗ ಬಾಯಿ ಬಡಿದುಕೊಳ್ಳದ ಕಾಂಗ್ರೆಸ್‌, ಈಗ ಮಾತ್ರ ಬಾಯಿ ಬಡಿಯುತ್ತಿದೆ ಎಂದರು.