ಇನ್ನಾದರೂ ಬಗೆಹರಿಯಲಿ ಕಬ್ಬು ಬೆಳೆಗಾರರ ಸಮಸ್ಯೆ
ಬೆಳೆಗಾರರ ಸಮಸ್ಯೆ ಬಗೆಹರಿಯದೇ ರಾಜ್ಯದಲ್ಲಿ ಕಬ್ಬು ನುರಿಸುವ ಋತು ಮತ್ತೆ ಆರಂಭವಾಗಿದೆ. ಅಮಾಯಕ ರೈತರು ತಮ್ಮ ಕಬ್ಬಿನ ಹಿಂಬಾಕಿಯನ್ನು ಕಾಯುತ್ತಲೇ ಸಕ್ಕರೆ ಕಾರ್ಖಾನೆಗಳ ಶೋಷಣೆಗೆ ಮತ್ತೊಮ್ಮೆ ತಮ್ಮನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗೆ ವ್ಯವಸ್ಥೆ ದೂಡಿರುವುದು ಖಂಡನಾರ್ಹ.
ರಾಜ್ಯದಲ್ಲಿರುವ ೮೦ ಸಕ್ಕರೆ ಕಾರ್ಖಾನೆಗಳ ಪೈಕಿ ಬಹುತೇಕ ಎಲ್ಲವೂ ಬೆಳೆಗಾರರ ಕೋಟ್ಯಂತರ ಹಿಂಬಾಕಿಯನ್ನು ಉಳಿಸಿಕೊಂಡಿವೆ. ಕಬ್ಬು ನುರಿಸುವ ಋತು ಆರಂಭವಾದ ಹೊತ್ತಿನಲ್ಲಿ ಪ್ರತಿ ವರ್ಷವೂ ವಿಷಯವಾಗಿ ಭಾರೀ ಚರ್ಚೆ ನಡೆದು ಯಾವುದೇ ಪರಿಹಾರವಿಲ್ಲದೇ ಕೊನೆಗಾಣುತ್ತಿದೆ. ಬೆಳಗಾವಿಯ ಅಧಿವೇಶನದಲ್ಲಿ ಆರೋಪ-ಪ್ರತ್ಯಾರೋಪಗಳು ಕೇಳಿ ಬರುವುದು ಹಾಗೂ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದನ್ನು ಸರ್ಕಾರ ಪರಿಗಣನೆಗೇ ತೆಗೆದುಕೊಳ್ಳದೇ ಅನ್ಯಾಯವಾಗುತ್ತಿದೆ.
ಮೈಸೂರು, ಬೆಳಗಾವಿ, ಬೆಂಗಳೂರು, ಕಲಬುರಗಿ ಈ ಯಾವ ಕಂದಾಯ ವಿಭಾಗದಲ್ಲೂ ಕಬ್ಬು ಬೆಳೆಗಾರರಿಗೆ ಸಮಾಧಾನ ಇಲ್ಲ. ಅವರ ಹಿಂಬಾಕಿ ಪಾವತಿ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಒಂದಿಷ್ಟು ಕೊಟ್ಟು ಕಂತುಗಟ್ಟಲೇ ರೈತರ ಹಣವನ್ನು ಉಳಿಸಿಕೊಳ್ಳಲಾಗಿರುವುದು ಅಕ್ಷಮ್ಯ.
ನುರಿಸುವಿಕೆ ಆರಂಭವಾದ ಹೊಸ್ತಿಲಿನಲ್ಲಿ ಕಬ್ಬು ಕಟಾವು ಮಾಡಿದ ಬೆಳೆಗಾರರು ಎರಡು ಮೂರು ವಾರ ಪ್ರತಿಭಟನೆಗೆ ಇಳಿಯುವ ದೃಶ್ಯ ಸಾಮಾನ್ಯ. ಹಿಂಬಾಕಿ ಪಾವತಿಸಿ ಮತ್ತು ದರ ಏರಿಕೆ ಮಾಡಿ ಎಂದು ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಾರೆ. ಇದು ಕುತ್ಸಿತ ಲಾಬಿಗೆ ಅನುಕೂಲಕರವಾಗಿ ಪರಿಣಮಿಸುತ್ತಿದೆ.
ಅಮಾಯಕ ರೈತರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಪ್ರತಿಭಟನೆಗೆ ಇಳಿದು, ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದಕ್ಕೆ ಎರಡರಿಂದ ಮೂರು ವಾರದಷ್ಟು ವಿಳಂಬ ಮಾಡಿದರೆ, ಕಬ್ಬು ಬಾಡಿ ಸಕ್ಕರೆ ಅಂಶ ಕುಂಠಿತವಾಗುತ್ತದೆ. ಇದರಿಂದ ತೂಕದಲ್ಲಿ ಇಳಿಕೆಯಾಗಿ ಕಾರ್ಖಾನೆಗಳು ನಗು ಬೀರುವಂತಾಗಿದೆ.
ರಾಜಕಾರಣಿಗಳು, ಪ್ರಭಾವಿಗಳ ಹಿಡಿತದಲ್ಲಿಯೇ ಬಹುತೇಕ ಸಕ್ಕರೆ ಕಾರ್ಖಾನೆಗಳಿದ್ದು, ಪ್ರಸ್ತುತ ೪೫-೫೦ ಶಾಸಕರೇ ಈ ಕಾರ್ಖಾನೆಗಳ ಮಾಲೀಕರು. ಇದಲ್ಲದೇ ಸಕ್ಕರೆ ಸಹಕಾರ ಕಾರ್ಖಾನೆಗಳು ಕೂಡ ಪ್ರಭಾವಿಗಳ ಹಿಡಿತದಲ್ಲಿಯೇ ಇವೆ. ಹೀಗಾಗಿ ಈ ಸಮಸ್ಯೆಯ ಬಗ್ಗೆ ಸದನದಲ್ಲಿ ನಡೆಯುವ ಯಾವುದೇ ಚರ್ಚೆಗಳೂ ತಾರ್ಕಿಕ ಅಂತ್ಯವನ್ನು ಕಂಡಿಲ್ಲ. ಪರಿಹಾರ ಕಂಡುಕೊಳ್ಳುವ ಬಗ್ಗೆ ಯಾವ ಸರ್ಕಾರವೂ ಗಂಭೀರ ಹೆಜ್ಜೆಗಳನ್ನು ಇರಿಸಿಲ್ಲ. ಇದರಿಂದಾಗಿ ಬೆಳೆಗಾರರ ಗೋಳು ಅರಣ್ಯ ರೋದನವಾಗಿರುವುದು ದುರಂತವೇ ಸರಿ.
ಕಾರ್ಖಾನೆಗಳಿಂದ ಆಗುತ್ತಿರುವ ಅನ್ಯಾಯದ ಜೊತೆಗೆ ಕೇಂದ್ರ ಸರ್ಕಾರ ನಿಗದಿ ಮಾಡುವ ನ್ಯಾಯೋಚಿತ ಮತ್ತು ಲಾಭದಾಯಕ (ಎಫ್‌ಆರ್‌ಪಿ) ಬಗ್ಗೆಯೂ ಬೆಳೆಗಾರರ ಅಪಸ್ವರವನ್ನು ರಾಜ್ಯ ಸರ್ಕಾರ ಗಮನಿಸಬೇಕಾಗಿದೆ.
ಪ್ರಸಕ್ತ ವರ್ಷ ಟನ್‌ಗೆ ೩೧೫೦ ರೂಪಾಯಿಗಳನ್ನು ಎಫ್‌ಆರ್‌ಪಿಯಾಗಿ ನಿಗದಿ ಮಾಡಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ರೈತರು ಈ ದರವನ್ನು ವಿರೋಧಿಸುತ್ತಿದ್ದಾರೆ. ಕನಿಷ್ಠ ನಾಲ್ಕರಿಂದ ನಾಲ್ಕೂವರೆ ಸಾವಿರ ರೂಪಾಯಿ ನಿಗದಿ ಮಾಡಬೇಕೆಂಬ ಬೇಡಿಕೆ ಇದೆ. ಈ ವಿಷಯವನ್ನೂ ಕೂಡ ರಾಜ್ಯ ಸರ್ಕಾರ ಗಮನಿಸಿ, ಕರ್ನಾಟಕದ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ' ಕಾಯ್ದೆಯ ಇತಿ ಮಿತಿಯಲ್ಲಿ, ಇಲ್ಲವೇ ಸ್ವಯಂ ಪ್ರೇರಿತವಾಗಿ ತಾನೂ ಒಂದಿಷ್ಟು ಪಾಲು ಕೊಡಬೇಕು. ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೇವಲ ಕಬ್ಬು ಬೆಳೆಗಾರರನ್ನು ಮಾತ್ರವಲ್ಲ, ಹೊಟ್ಟೆಪಾಡಿಗಾಗಿ ತಮ್ಮಲ್ಲಿ ದುಡಿಯುತ್ತಿರುವ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಬಿಹಾರ ಮೊದಲಾದ ರಾಜ್ಯಗಳ ಕಾರ್ಮಿಕರನ್ನೂ ಶೋಷಿಸುತ್ತಿದ್ದಾರೆ. ಇದು ಋತುಮಾನ ಆಧರಿತ ದುಡಿಮೆಯಾಗಿರುವುದರಿಂದ ಕಾರ್ಮಿಕ ಕಾಯ್ದೆಗಳು ಸಾಮಾನ್ಯವಾಗಿ ಅನ್ವಯಿಸುವುದಿಲ್ಲ. ಇದನ್ನೇ ಕಾರ್ಖಾನೆಗಳು ದುರಪಯೋಗ ಮಾಡಿಕೊಳ್ಳುತ್ತಿವೆ. ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರ ಈ ಸಮಸ್ಯೆಗಳನ್ನು ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ನಾಡಿನ ಆರ್ಥಿಕತೆಗೆ ಬಹುಮುಖ್ಯ ಕೊಡುಗೆ ನೀಡುತ್ತಿರುವ ಈ ವಾಣಿಜ್ಯ ಬೆಳೆಯ ರೈತರ ನೆರವಿಗೆ ಬರಬೇಕು. ಬೆಳೆಗಾರರ ಹಿತಾಸಕ್ತಿ ಕಾಯಬೇಕಾದ ಸಕ್ಕರೆ ಆಯುಕ್ತರು, ಪ್ರತ್ಯೇಕ ಸಚಿವಾಲಯಗಳಿದ್ದೂ ಕಬ್ಬು ಬೆಳೆಗಾರರ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದನ್ನು
ಸಂಯುಕ್ತ ಕರ್ನಾಟಕ' ಕಳೆದ ಮೂರು ದಿನಗಳಿಂದ ಸರ್ಕಾರದ ಗಮನಕ್ಕೆ ತರುತ್ತಿದ್ದು ಸಂಬಂಧಿಸಿದವರು ಜಡತ್ವ ಬಿಟ್ಟು ಸ್ಪಂದಿಸಬೇಕಾಗಿದೆ. ಅನೇಕ ವರ್ಷಗಳಿಂದ ರೈತರು ಹಿಂಬಾಕಿ, ತೂಕದಲ್ಲಿ ಮೋಸ ಮತ್ತು ಎಫ್‌ಆರ್‌ಪಿ ಮೊದಲಾದವುಗಳ ಬಗ್ಗೆ ಎತ್ತುತ್ತಿರುವ ಧ್ವನಿಗೆ ನ್ಯಾಯ ಒದಗಿಸಬೇಕು. ಕಂತುಗಳನ್ನು ಕೊಟ್ಟಂತೆ ಬಾಕಿ ಬೆಟ್ಟದಷ್ಟು ಬಾಕಿ ಇಟ್ಟುಕೊಳ್ಳುವ ವ್ಯವಸ್ಥೆಗೆ ಸರ್ಕಾರ ಬಿಸಿ ಮುಟ್ಟಿಸಬೇಕು.
ಹಿಂದೆಲ್ಲ ಮದ್ಯದ ಲಾಬಿ, ವೈದ್ಯಕೀಯ ಲಾಬಿ, ಶಿಕ್ಷಣ ಲಾಬಿ ಮೊದಲಾದವುಗಳು ಮೇಲುಗೈ ಸಾಧಿಸಿದ್ದವು. ಈಗ ಈ ಜಾಗವನ್ನು ಸಕ್ಕರೆ ಲಾಬಿ ಆಕ್ರಮಿಸಿದ್ದು, ಇದು ಎಷ್ಟು ಪ್ರಬಲವಾಗಿದೆ ಎಂದರೆ ಇಡೀ ಸರ್ಕಾರವನ್ನೇ ನಿಯಂತ್ರಿಸುವಂತಿದೆ. ಜನಪರ ಆಡಳಿತ ವ್ಯವಸ್ಥೆಗೆ ಇದು ಶೋಭೆ ತರುವುದಲ್ಲ.
ಇವೆಲ್ಲವನ್ನೂ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುವ ಎದೆಗಾರಿಕೆಯನ್ನು ಸರ್ಕಾರ ಇನ್ನಾದರೂ ಪ್ರದರ್ಶಿಸಲಿ. ಅಲ್ಲದೇ ಎಥೆನಾಲ್ ಉತ್ಪಾದನೆಗಾಗಿಯೇ ಅನುಮತಿ ಪಡೆದಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ದರವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರದ ಸೂಚನೆ ಇದ್ದರೂ ಪಾಲನೆಯಾಗುತ್ತಿಲ್ಲ ಎಂಬುದನ್ನು ಗಮನಿಸಿ ಪರಿಹರಿಸಲಿ.