For the best experience, open
https://m.samyuktakarnataka.in
on your mobile browser.

ಇನ್ನೂ ನಾಲ್ವರ ಬಂಧನಕ್ಕೆ ಸಂಚು

11:18 PM Apr 02, 2024 IST | Samyukta Karnataka
ಇನ್ನೂ ನಾಲ್ವರ ಬಂಧನಕ್ಕೆ ಸಂಚು

ನವದೆಹಲಿ: ಅಬಕಾರಿ ನೀತಿ ಪ್ರಕರಣದ ನೆಪದಲ್ಲಿ ಆಮ್ ಆದ್ಮಿ ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ದೆಹಲಿ ಸಚಿವೆ ಆತಿಶಿ ಆರೋಪಿಸಿದ್ದಾರೆ. ಇದರಿಂದಾಗಿ ಇ.ಡಿ ವಿಚಾರಣೆ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಂತಾಗಿದೆ.
ಆಪ್ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಆತಿಶಿ, ತನಿಖಾ ಸಂಸ್ಥೆಯನ್ನು ಬಳಸಿಕೊಂಡು ಪಕ್ಷವನ್ನು ತುಳಿಯಲು ಬಿಜೆಪಿ ಸಂಚು ನಡೆಸಿದೆ ಎಂದು ದೂರಿದರು.
ನನ್ನ ಆಪ್ತರ ಮೂಲಕ ಬಿಜೆಪಿ ಸಂಪರ್ಕಿಸಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಪ್‌ನಿಂದ ಪಕ್ಷಾಂತರ ಮಾಡುವಂತೆ ಒತ್ತಡ ಹಾಕಿದೆ. ಇದಕ್ಕೆ ತಪ್ಪಿದಲ್ಲಿ ತಿಂಗಳಲ್ಲಿ ಇ.ಡಿ ಬಂಧನಕ್ಕೊಳಗಾಗಬೇಕಾದೀತೆಂದೂ ಎಚ್ಚರಿಕೆ ನೀಡಲಾಗಿದೆ ಎಂದು ಆತಿಶಿ ಆರೋಪಿಸಿದರು.
ಯಾವಾಗ ಏನು ಆಗುತ್ತದೋ ಹೇಳಲಾಗದು. ಮೊದಲು ಆಪ್‌ನ ಅಗ್ರ ನಾಯಕರನ್ನು ಜೈಲಿಗೆ ತಳ್ಳಲಾಯಿತು. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಈಗ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಲಾಯಿತು. ಅಲ್ಲದೆ, ಇನ್ನು ಎರಡು ತಿಂಗಳಲ್ಲಿ ರಾಘವ್ ಛಡ್ಡಾ, ಸೌರಭ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ನನ್ನನ್ನೂ ಬಂಧಿಸಬಹುದು ಎಂದು ಆತಿಶಿ ಆತಂಕ ವ್ಯಕ್ತಪಡಿಸಿದರು.
ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಿದಲ್ಲಿ ರಾಜಕೀಯ ಲಾಭ ಪಡೆಯಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಆದರೆ ನಾವು ಕೇಜ್ರಿವಾಲ್ ಸೈನಿಕರು. ಈ ಬೆದರಿಕೆಗೆ ಮಣಿಯುವುದಿಲ್ಲ ಎಂದು ಅವರು ಎಚ್ಚರಿಕೆ ಕೊಟ್ಟರು.
ಕೇಜ್ರಿವಾಲ್ ನಿವಾಸದಲ್ಲಿ ಶಾಸಕರು: ಈ ಮಧ್ಯೆ, ದೆಹಲಿ ಆಪ್‌ನ ಶಾಸಕರು ಮಂಗಳವಾರ ಸಿಎಂ ಅರವಿಂದ ಕೇಜ್ರಿವಾಲ್ ಮನೆಯಲ್ಲಿ ಸಮಾವೇಶಗೊಂಡರು. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಜ್ರಿವಾಲ್ ಪತ್ನಿ ಸುನೀತಾ ಅವರೊಂದಿಗೆ ತುರ್ತು ಚರ್ಚೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕೇಜ್ರಿವಾಲ್ ತಮ್ಮ ಪತ್ನಿಗೆ ದೆಹಲಿ ಸರ್ಕಾರದ ಜವಾಬ್ದಾರಿ ವಹಿಸಲು ಯತ್ನಿಸಿದ್ದಾರೆಂಬ ವದಂತಿಯನ್ನು ಪುಷ್ಟೀಕರಿಸಿದಂತಾಗಿದೆ.
ಸಂಜಯ್ ಸಿಂಗ್‌ಗೆ ಜಾಮೀನು: ಮತ್ತೊಂದೆಡೆ, ಅಬಕಾರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆಪ್ ಸಂಸದ ಸಂಜಯ್ ಸಿಂಗ್‌ಗೆ ಆರು ತಿಂಗಳ ನಂತರ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಸಂಜಯ್ ಮನೆ ಮೇಲೆ ನಡೆಸಿದ ದಾಳಿ ಕಾಲಕ್ಕೆ ಆರೋಪ ರುಜುವಾತುಪಡಿಸುವ ದಾಖಲೆ ಹಾಗೂ ಹಣ ಪತ್ತೆಯಾಗಿಲ್ಲವೆಂಬ ಅಂಶವನ್ನು ಪರಿಗಣಿಸಿದ ಕೋರ್ಟ್, ಸಿಂಗ್‌ರನ್ನು ಬಿಡುಗಡೆ ಮಾಡಿದೆ.