For the best experience, open
https://m.samyuktakarnataka.in
on your mobile browser.

ಇನ್ನೊಬ್ಬರ ಹಕ್ಕಿನ ಜೊತೆ ಆಟ ಬೇಡ

03:45 AM Aug 31, 2024 IST | Samyukta Karnataka
ಇನ್ನೊಬ್ಬರ ಹಕ್ಕಿನ ಜೊತೆ ಆಟ ಬೇಡ

ಅವರು ಖಿನ್ನರಾಗಿ ನಮ್ಮ ಮನೆಯ ಕಚೇರಿಯಿಂದ ಹೊರಗೆ ಹೊರಟರು. ಸುಮಾರು ೮೦ ವಯಸ್ಸಿನ, ವಯಸ್ಸಿಗೆ ಮೀರಿ ಜೀವಸೆಲೆಯಿಂದ ಉತ್ಸಾಹಿ ಆಗಿದ್ದವರು. ಎತ್ತರ ನಿಲುವಿನ, ಕಠಿಣ ಬಿಗಿಯಾದ ಖಂಡದ ಕಪ್ಪು ಆರೋಗ್ಯ ಸೂಸುವ ದೇಹ. ತಲೆ ಮೇಲೆ ಗಾಂಧಿ ಟೋಪಿ, ಶುಭ್ರ ಖಾದಿ ಉದ್ದ ನಿಲುವಂಗಿ, ದೋತರ ಧರಿಸುತ್ತಿದ್ದರು. ಸರ್, ನನ್ನ ಹೆಣ್ಣು ಮಕ್ಕಳ ಕೇಸು. ನಾನೆ ಕೊಡಿಸಿರುವೆ, ನನ್ನ ಮಗ ಸರಿಯಾಗಿದ್ದಾನೆ, ಕೇಸು ವಾಪಸ್ ಪಡೆದುಕೊಳ್ಳಿರಿ' ಎಂಬುದಕ್ಕೆ,ಕೇಸು ಹಿಂತೆಗೆದುಕೊಳ್ಳುವ ನಿರ್ಧಾರ ನನ್ನ ಕಕ್ಷಿದಾರರಿಗೆ ಬಿಟ್ಟಿದ್ದು' ಖಡಾಖಂಡಿತವಾಗಿ ತಿಳಿಸಿದೆ. ಗಲಿಬಿಲಿಗೊಂಡು, ನಿರಾಶೆಯಿಂದ ದೀರ್ಘವಾದ ನಮಸ್ಕಾರ ಮಾಡಿ ಹೊರಗೆ ನಡೆದರು. ಒಂದು ಕ್ಷಣ ಅವರ ಮೇಲೆ ಕರುಣೆ ಉಂಟಾದರೂ, ವೃತ್ತಿ ನೈತಿಕತೆ ನಿಭಾಯಿಸಿದ್ದೆ. ಈ ತರಹದ ಸಂದರ್ಭ ಮೊದಲೆ ಗ್ರಹಿಸಿದ್ದೆ.
ಅವರು ಮೊದಲಿನಿಂದ ಪರಿಚಯಸ್ಥರು. ಸುಮಾರು ಒಂದು ವರ್ಷದ ಹಿಂದೆ ಹೋಮ್ ಆಫೀಸಿಗೆ ಬಂದರು. ದುಃಖ ಮಡುಗಟ್ಟಿದ ಮುಖದಲ್ಲಿ ಕಳೆಯಿರಲಿಲ್ಲ. ಹೇಳಿ ಏನಾಯಿತು ಎಂದು ಮಾತಿಗೆ ಎಳೆದೆ." ವಕೀಲ ಸಾಹೇಬ್ರೆ, ನನಗೆ ಒಬ್ಬ ಗಂಡು, ನಾಲ್ಕು ಜನ ಹೆಣ್ಣು ಮಕ್ಕಳು. ಎಲ್ಲರ ಲಗ್ನ ಮಾಡಿದ್ದೇನೆ. ಎಲ್ಲರಿಗೂ ಮಕ್ಕಳಾಗಿವೆ. ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿ ಸುಖವಾಗಿದ್ದಾರೆ. ನಮ್ಮದು ಶ್ರೀಮಂತ ಮನೆತನ. ನಮ್ಮ ಹಿರಿಯರಿಂದ ಬಂದ ನೂರಾರು ಎಕರೆ ನೀರಾವರಿ ಜಮೀನು, ಎತ್ತು, ಎಮ್ಮೆ, ಆಕಳು, ಟ್ರ‍್ಯಾಕ್ಟರ್, ಕಾರ್ ಏನಿಲ್ಲ ಎಲ್ಲವು ಇವೆ. ಹಿರಿಯರ ಆಸ್ತಿಗಳು. ಹೆಂಡತಿ ಐದು ವರ್ಷಗಳ ಹಿಂದೆ ತೀರಿಕೊಂಡಳು. ಅವಳು ಇದ್ದಾಗ ನೆಮ್ಮದಿ ಇತ್ತು. ನನಗೆ ಯಾವ ಕ್ಷಣದಲ್ಲಿ ಏನು ಬೇಕೆಂದು ಗ್ರಹಿಸಿ ಪೂರೈಸುತ್ತಿದ್ದಳು. ಮಗನ ಮಕ್ಕಳು ಬೆಳೆದು ನಿಂತಿದ್ದಾರೆ. ಮೊಮ್ಮಕ್ಕಳ ಲಗ್ನವಾಗಿ, ನಾನು ಮರಿ ಮೊಮ್ಮಕ್ಕಳನ್ನು ಕಂಡಿದ್ದೇನೆ. ಮನೆಯ ಆಗುಹೋಗುಗಳನ್ನು, ವ್ಯವಹಾರ ನಾನೇ ನೋಡಿಕೊಳ್ಳುತ್ತಿದ್ದೆ. ಹೀಗೆ ತುಂಬಿದ ಸುಖಿ ಸಂಸಾರ, ಸ್ವರ್ಗಕ್ಕೆ ಕಿಚ್ಚು ಹಚ್ಚು ಅನ್ನುವ ಹಾಗಿತ್ತು. ಹೆಂಡತಿ ತೀರಿಕೊಂಡ ನಂತರ ಮಗ, ಸೊಸೆ, ಮೊಮ್ಮಕ್ಕಳ ವರ್ತನೆ ಬದಲಾವಣೆಗೊಳ್ಳಲು ಪ್ರಾರಂಭವಾಯಿತು. ಮನೆತನದ ಒಂದೊಂದೇ ವ್ಯವಹಾರ ಮಗ ಕಸಿದುಕೊಂಡ. ಸೊಸೆ, ಅವಳ ಸೊಸೆಯಂದಿರು ದಿನನಿತ್ಯದ ವ್ಯವಸ್ಥೆಯಲ್ಲಿ ತಾರತಮ್ಯ ಮಾಡಲಾರಂಭಿಸಿದರು. ಆಳು ಮಕ್ಕಳು ನನ್ನ ಮಾತು ಕೆಳದಂತೆ ಎತ್ತಿ ಕಟ್ಟಿದ್ದಾರೆ. ಮೂಲೆಯಲ್ಲಿ ಕುಳಿತು ಮೂಕಪ್ರೇಕ್ಷಕನಂತೆ ನೋಡುವ ಕೆಟ್ಟ, ದೀನ ಪರಿಸ್ಥಿತಿಯಲ್ಲಿ ಇದ್ದೇನೆ. ಮಗ, ಇತ್ತೀಚೆಗೆ ಎಲ್ಲ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಿದ್ದಾನೆ. ನಾನು ಜೀವಂತ ಇರುವವರೆಗೆ ನನ್ನ ಹೆಸರಿಗೆ ಇರಲಿ ಎಂದು ಹೇಳಿದೆ. ನಾನು ಸತ್ತ ನಂತರ ಹೆಣ್ಣು ಮಕ್ಕಳು ವಾರಸುದಾರರಾಗಿ ಬಂದು ಕುಳಿತರೆ, ತನಗೆ ಏನು ಉಳಿಯುತ್ತದೆ ಎಂದು ವಾದಿಸಿದ. ಅಕ್ಷರ ಸಹ ನನ್ನ ಬದುಕು ಹೀನಾಯವಾಗಿದೆ. ನಾನು ಮೃತನಾದ ನಂತರ, ಹೆಣ್ಣು ಮಕ್ಕಳು ವಾರಸುದಾರಾಗಿ ಬರುತ್ತಾರೆನ್ನುವ ಭಯ ಅವನಿಗೆ ಕಾಡುತ್ತಿದೆ. ಈಗಲೇ ಹೆಣ್ಣು ಮಕ್ಕಳು ತಮ್ಮ ಹಕ್ಕು ಕೇಳಿದರೆ, ಮಗನು ನನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದೆಂಬ ಆಸೆ ಇದೆ ಹೇಗೆ ಸರ್ ಎಂದು ನನಗೆ ಒಂದು ಸಲಹೆ ಇಟ್ಟು ಮಾತಿಗೆ ವಿರಾಮ ಹೇಳಿದರು.' ಅದೆಲ್ಲ ಸರಿ, ಯಜಮಾನರೆ. ಹೆಣ್ಣು ಮಕ್ಕಳು ಇದಕ್ಕೆಲ್ಲ ಒಪ್ಪಬೇಕು, ಕೋರ್ಟು ಕಚೇರಿ ಅಡ್ಡಾಡಲು ಸಿದ್ಧರಾಗಬೇಕಲ್ಲ?. ನಾಳೆ ನೀವು ನಿಮ್ಮ ಮಗ ಒಂದಾದಾಗ ಅವರು ಒಪ್ಪಬೇಕಲ್ಲ. ಹೆಣ್ಣು ಮಕ್ಕಳನ್ನು ಕರೆದುಕೊಂಡು ಬನ್ನಿರಿ, ವಿಚಾರಿಸೋಣ ಎಂದು ಹೇಳಿ ಎಂದು ಸಾಗು ಹಾಕಿದೆ.
ಆನಂತರ, ಸುಮಾರು ಒಂದು ತಿಂಗಳ ನಂತರ ಯಜಮಾನ, ತನ್ನ ನಾಲ್ಕು ಜನ ಹೆಣ್ಣು ಮಕ್ಕಳು ಅವರ ಗಂಡಂದಿರನ್ನು ಕರೆದುಕೊಂಡು ಬಂದುಬಿಟ್ಟರು. ಅವರನ್ನೆಲ್ಲ ವಿಚಾರಿಸಿದೆ. ಹೆಣ್ಣು ಮಕ್ಕಳಿಗೆ ತವರು ಮನೆ ಆಸ್ತಿಯಲ್ಲಿ ಏನು ಆಸೆ ಇಲ್ಲ. ಈಗಲೇ ಹಕ್ಕು ಬಿಟ್ಟುಕೊಡಿ ಎಂದು ತಂದೆ ಹೇಳಿದರೆ ಬಿಟ್ಟುಕೊಡಲು ಸಿದ್ಧ ಇರುವುದಾಗಿ ತಿಳಿಸಿದರು. ಇದಕ್ಕೆ ಅಳಿಯಂದಿರು ತಲೆ ದೂಗಿಸಿದರು. ಆದರೆ ಯಜಮಾನ ಹೆಣ್ಣು ಮಕ್ಕಳು, ಅಳಿಯಂದಿರಿಗೆ ದುಂಬಾಲು ಬಿದ್ದು ಒಪ್ಪಿಸಿ ಕರೆದುಕೊಂಡು ಬಂದಿದ್ದರು. ವೃತ್ತಿ ಅನಿವಾರ್ಯತೆ ಹೆಣ್ಣು ಮಕ್ಕಳಿಂದ, ತಂದೆ ಸಹೋದರನ ಮೇಲೆ ದಾವೆ ಮಾಡಲು ಒಪ್ಪಿಕೊಂಡೆ. ಯಜಮಾನರಿಗೆ ತಿಳಿ ಹೇಳಿ, ಹೆಣ್ಣು ಮಕ್ಕಳು ಇನ್ನು ಮುಂದೆ ನನ್ನ ಕಕ್ಷಿದಾರರು ಅವರ ಇಚ್ಛೆಯಂತೆ ಪ್ರಕರಣ ನಡೆಸಬೇಕಾಗುತ್ತದೆ ಎಂದು ವಿವರಿಸಿದೆ.
ಹೆಣ್ಣು ಮಕ್ಕಳು ವಾದಿಯರೆಂದು, ತಂದೆ ಸಹೋದರ ಪ್ರತಿವಾದಿಯರೆಂದು ವಾದ ಪತ್ರದ ಶೀರ್ಷಿಕೆಯಲ್ಲಿ ವರ್ಣಿಸಿದೆ. ವಾದಿ ಪ್ರತಿವಾದಿಯರು ಹಿಂದೂ ಜಂಟಿ ಕುಟುಂಬದ ಸದಸ್ಯರು ಮತ್ತು ಸ್ವಾಧೀನದಾರರು ಇರುತ್ತಾರೆ. ದಾವೆ ಸ್ವತ್ತುಗಳು ಪಿತ್ರಾರ್ಜಿತ ಸ್ವತ್ತುಗಳು, ಅವುಗಳು ವಾದಿ ಪ್ರತಿವಾದಿಯರ ನಡುವೆ ಅವುಗಳ ಎಲ್ಲೆ, ಗಡಿ ಗುರುತಿಸಿ ವಿಭಜನೆ ಆಗಿರುವುದಿಲ್ಲ. ಆ ರೀತಿ ವಿಭಜಿಸಿ ತಮ್ಮ ಹಿಸ್ಸೆಯ ಎಲ್ಲೆ ಗಡಿ ಗುರುತಿಸಿ ಹಿಸ್ಸೆ ಕೊಡಲು ಪ್ರತಿವಾದಿಯರಿಗೆ ವಿನಂತಿಸಿದರೆ ಕೇಳಿರುವುದಿಲ್ಲ. ಆದ್ದರಿಂದ ವಾದಿಯರಿಗೆ ತಲಾ ೧/೬ ಹಿಸ್ಸೆ ವಿಭಜಿಸಿಕೊಡುವಂತೆ ಪ್ರಾರ್ಥಿಸಿ ನ್ಯಾಯಾಲಯದ ದಾವೆ ದಾಖಲಿಸಿದೆ.
ನ್ಯಾಯಾಲಯದ ಸಮನ್ಸ್‌ಗಳು ಪ್ರತಿವಾದಿಯರಿಗೆ ತಲುಪಿದವು. ಸಹೋದರ ಸಮನ್ಸ್ ಹಿಡಿದುಕೊಂಡು ಹೋಗಿ, ನಾನೇನು ನಿಮಗೇನು ಅನ್ಯಾಯ ಮಾಡಿದ್ದೆ ಎಂದು ಅತ್ತು ಕರೆದು ರಂಪಾಟ ಮಾಡಿದ್ದ. ಆದರೆ ಸಹೋದಯರಿಗೆ ಉತ್ತರಿಸಲು ಉತ್ತರವಿರಲಿಲ್ಲ. ಅವರು ತಂದೆಯ ಮುಖಧ್ವನಿ ಆಗಿದ್ದರು.
ಪ್ರತಿವಾದಿ ತಂದೆ ನ್ಯಾಯಾಲಯಕ್ಕೆ ಹಾಜರು ಆಗಲಿಲ್ಲ. ಸಹೋದರ ತನ್ನ ಪರವಾಗಿ ವಕೀಲರನ್ನು ನೇಮಿಸಿದ. ತಕರಾರು ಸಲ್ಲಿಸಲು ಮುದ್ದತ್ತಿನ ಮೇಲೆ ಮುದ್ದತ್ತುಗಳನ್ನು ಪಡೆದುಕೊಂಡು ಕಾಲ ನೂಕಿದನು. ವಿಳಂಬ ಮಾಡಲು ಈಗಿನ ವ್ಯವಸ್ಥೆಯಲ್ಲಿ ಹಲವಾರು ನಿಯಮಗಳು ಸಹಾಯಕ್ಕೆ ಬರುತ್ತವೆ. ವಕೀಲರು ಅವುಗಳ ಉಪಯೋಗ ಪಡೆಯುತ್ತೇವೆ. ನನ್ನ ಕಕ್ಷಿದಾರರಿಗೆ ಏನು ಅವಸರ ಇರಲಿಲ್ಲ, ಅವರನ್ನು ಒತ್ತಾಯದಿಂದ ವ್ಯಾಜ್ಯಕ್ಕೆ ನೂಕಿದ್ದರು. ಹೀಗೆ ಎರಡು ವರ್ಷ ಕಳೆಯಿತು. ಮನಸುಗಳು ಬದಲಾದವು. ತಂದೆ ಮಗನು ಒಂದಾದರು. ಹೆಣ್ಣು ಮಕ್ಕಳು ಮನಸು ಬದಲಿಸಿದರು. ಕರೆದಾಗ ಹೋಗಲು, ಬೇಡವಾದಾಗ ನೂಕಲು ನಾವು ಬೊಂಬೆಗಳು ಅಲ್ಲವೆಂದು ನಿರಾಕರಿಸಿದರು. ತಮಗೆ ಪಾಲು ಬೇಕು ಎಂದು ಹಠ ಹಿಡಿದರು. ಯಜಮಾನರು ಒಂದು ದಿನ ನನ್ನ ಕಡೆ ಬಂದರು. ತಾವು ತಮ್ಮ ಮಗನು ಒಂದಾಗಿದ್ದೇವೆ. ಅವನಿಗೆ ಬುದ್ಧಿ ಬಂದಿದೆ.
ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ದಾವೆ ಮುಂದುವರಿಸುವುದು ಬೇಡ, ಹಿಂದಕ್ಕೆ ಪಡೆದುಕೊಳ್ಳಿರಿ ಎಂದು ತಿಳಿಸಿದರು. ನನ್ನ ಕಕ್ಷಿದಾರರು ನ್ಯಾಯಾಲಯಕ್ಕೆ ಬಂದು ದಾವೆ ವಾಪಸ್ ಪಡೆಯಬೇಕು ಅವರನ್ನು ಕರೆದುಕೊಂಡು ಬರಲು ಸೂಚಿಸಿದೆ. ಇಲ್ಲ ಅವರು ನನ್ನ ಮಾತು ಈಗ ಕೇಳುವುದಿಲ್ಲ. ಕೇಸು ನಡೆಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಈ ಮಾತನ್ನು ಮೊದಲೇ ಸೂಚಿಸಿದ್ದನ್ನು ನೆನಪಿಸಿ, ಅಸಹಾಯಕತೆ ಸೂಚಿಸಿದೆ. ನಿರಾಶಾರಾಗಿ ತೆರಳಿದರು.
ಹೆಣ್ಣುಮಕ್ಕಳು ಅವರ ಗಂಡಂದಿರ ಸಮೇತ ಬಂದರು. ಯಜಮಾನರು ಹೇಳಿದ ಮಾತು ಹೇಳಿದೆ. ಇಲ್ಲ ಸರ್, ನಾವು ಕೇಸು ಮುಂದುವರಿಸುವುದಾಗಿ ತಿಳಿಸಿದರು. ಈ ಪ್ರಕರಣ ನಿಮ್ಮ ತಂದೆ ನನಗೆ ವಹಿಸಿದ್ದಾರೆ, ನೀವು ಬೇರೆ ವಕೀಲನನ್ನು ನಿಯಮಿಸಲು ಸೂಚಿಸಿದೆ.
ನಿಮ್ಮ ಮೇಲೆ ವಿಶ್ವಾಸ ಇದೆ, ನೀವೆ ನಡೆಸಿರಿ ಎಂದು ಒತ್ತಾಯಿಸಿದರು, ಒಪ್ಪಿಕೊಂಡೆನು. ಸುಮ್ಮನೆ ಮಗನನ್ನು ಬೆದರಿಸಲು ಮಾಡಿಸಿದ ಹುಸಿ ಪ್ರಕರಣ, ನಿಜ ಪ್ರಕರಣವಾಗಿ ಮುಂದುವರಿಯಿತು. ಸಾಕ್ಷಿ ಹೇಳಿಕೆ ಆದವು ಸುದೀರ್ಘ ವಾದ ಮಂಡನೆ ಆಯಿತು.
ಅಂತಿಮ ತೀರ್ಪು ಹೊರಬಂದಿತು. ವಾದಿ ಹೆಣ್ಣು ಮಕ್ಕಳಿಗೆ ಕುಟುಂಬದ ಆಸ್ತಿಯಲ್ಲಿ ಸಮನಾಗಿ ಹಿಸ್ಸೆ ಕೊಡುವಂತೆ ಪ್ರಾಥಮಿಕ ಡಿಕ್ರಿ ಆದೇಶವಾಯಿತು. ಅಂತಿಮ ಡಿಕ್ರಿ ಆಯಿತು. ತಹಶೀಲ್ದಾರ್ ಕೋರ್ಟ್ ಆದೇಶದಂತೆ ವಾದಿಯರ ಆಸ್ತಿ ವಿಭಜಿಸಿಕೊಟ್ಟರು. ಇಲ್ಲಿಗೆ ಕಾನೂನು ಪ್ರಕ್ರಿಯೆ ಮುಗಿಯಿತು.
ಮನುಷ್ಯನ ನಡವಳಿಕೆ ಯಾವ ಕಾಲದಲ್ಲಿ, ಸಂದರ್ಭದಲ್ಲಿ ಹೀಗೆ ಇರುತ್ತವೆ ಎಂದು ಹೇಳಲಾಗದು. ಇನ್ನೊಬ್ಬರ ಹಕ್ಕನ್ನು ಚಿವುಟಿ ಎಬ್ಬಿಸಿ ಪ್ರಯೋಗ ಮಾಡುವುದು ಸಾಧುವಲ್ಲ. ತಿರುಗುಬಾಣ ಆಗುವುದು ಖಂಡಿತ.