ಇರಾನ್-ಇಸ್ರೇಲ್ ತೀವ್ರಗೊಂಡ ಉದ್ವಿಗ್ನತೆ
ಇಸ್ರೇಲ್ ಹೊಂದಿರುವ ಐರನ್ ಡೋಮ್ ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಅಮೆರಿಕಾ ಅಧ್ಯಕ್ಷರಾದ ಜೋ ಬೈಡನ್‌ರವರ ನಿರಂತರವಾದ ಬೆಂಬಲದಿಂದಾಗಿ ಇಸ್ರೇಲ್‌ನ್ನು ಮಣಿಸಲು ಸಾಧ್ಯವೇ ಇಲ್ಲ ಎಂಬ ಭಾವನೆ ಎಲ್ಲೆಡೆ ಮನೆ ಮಾಡಿತ್ತು. ಆದರೆ, ಅಕ್ಟೋಬರ್ ೭ರಂದು ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ಮೇಲೆ ಮಾರಕ ದಾಳಿ ನಡೆಸಿದಾಗ ಈ ನಂಬಿಕೆ ಪರೀಕ್ಷೆಗೊಳಪಟ್ಟಿತು. ಇದೇ ರೀತಿ, ಇಸ್ರೇಲ್ ಡಮಾಸ್ಕಸ್ ನಗರದಲ್ಲಿನ ತನ್ನ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಇರಾನ್ ಡ್ರೋನ್‌ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆಗೊಳಿಸಿ, ಏಪ್ರಿಲ್ ೧೪ರಂದು ಇಸ್ರೇಲ್ ಮೇಲೆ ದಾಳಿ ನಡೆಸಿತು. ಅಮೆರಿಕಾದ ಬೇಷರತ್ತು ಬೆಂಬಲ ಮತ್ತು ಐರನ್ ಡೋಮ್ ರಕ್ಷಣಾ ವ್ಯವಸ್ಥೆಯ ಉಪಸ್ಥಿತಿಯ ನಡುವೆಯೂ ಇಸ್ರೇಲ್‌ನ ಭದ್ರತೆಯ ಕುರಿತು ಯಾವುದೇ ಖಾತ್ರಿ ಇರಲಿಲ್ಲ. ಆದರೂ ಐರನ್ ಡೋಮ್ ಮತ್ತು ಅಮೆರಿಕಾದ ಬೆಂಬಲದ ಕಾರಣದಿಂದ, ಇಸ್ರೇಲ್ ದೊಡ್ಡ ಪ್ರಮಾಣದ ಹಾನಿಗೆ ಒಳಗಾಗದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಶಸ್ವಿಯಾಯಿತು.
ಏಪ್ರಿಲ್ ೧ರಂದು ಇಸ್ರೇಲ್ ಡಮಾಸ್ಕಸ್ ನಗರದ ಇರಾನ್ ರಾಯಭಾರಿ ಕಚೇರಿಯ ಆವರಣದ ಮೇಲೆ ನಡೆಸಿದ ದಾಳಿಯಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಪಡೆಯ ಇಬ್ಬರು ಉನ್ನತ ಹಂತದ ಜನರಲ್‌ಗಳು ಸೇರಿದಂತೆ, ಆರು ಜನರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್ ಅತ್ಯಂತ ಕನಿಷ್ಠ ಹಾನಿಯನ್ನು ಅನುಭವಿಸಿದೆ. ಐರನ್ ಡೋಮ್ ವ್ಯವಸ್ಥೆ ಮತ್ತು ತನ್ನ ಮಿತ್ರ ರಾಷ್ಟ್ರಗಳಾದ ಅಮೆರಿಕಾ ಮತ್ತು ಫ್ರಾನ್ಸ್‌ಗಳ ಬೆಂಬಲದ ಕಾರಣದಿಂದ, ಬಹುಪಾಲು ಇರಾನ್ ದಾಳಿಯಿಂದ ಇಸ್ರೇಲ್ ತನ್ನನ್ನು ತಾನು ಅಪಾಯದಿಂದ ರಕ್ಷಿಸಿಕೊಂಡಿತು.
ರಾಯಭಾರಿ ಕಚೇರಿಯ ಮೇಲಿನ ದಾಳಿಯ ಬಳಿಕ, ಇರಾನ್ ತಾನು ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ, ನಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತು. ಇದನ್ನು ಮಹತ್ವದ ಕಾರ್ಯತಂತ್ರದ ವೈಫಲ್ಯ ಎಂದು ಪರಿಗಣಿಸಲಾಗಿದೆ. ಯೆಮೆನ್, ಲೆಬನಾನ್ ಮತ್ತು ಸಿರಿಯಾಗಳಂತಹ ವಿವಿಧ ಪ್ರದೇಶಗಳಿಂದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಉಡಾವಣೆಗೊಂಡು, ಇಸ್ರೇಲಿನ ವಾಯು ಪ್ರದೇಶವನ್ನು ಪ್ರವೇಶಿಸಿದಾಗ ಸುರಕ್ಷತಾ ಸೈರನ್‌ಗಳು ಮೊಳಗಿ, ಎಚ್ಚರಿಕೆ ನೀಡಿದ್ದವು. ಇನ್ನು ಇಸ್ರೇಲಿನ ಮಹತ್ವದ ಐರನ್ ಡೋಮ್ ವ್ಯವಸ್ಥೆ ದಾಳಿಯನ್ನು ಯಶಸ್ವಿಯಾಗಿ ಗುರುತಿಸಿ, ೯೯%ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಿತು.
ಇಸ್ರೇಲ್‌ನ ಮೇಲೆ ದಾಳಿ ನಡೆಸುವ ಸಲುವಾಗಿ ಇರಾನ್ ಪ್ರಯೋಗಿಸಿದ ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಇರಾಕ್, ಜೋರ್ಡಾನ್, ಸಿರಿಯಾಗಳ ವಾಯು ಪ್ರದೇಶಗಳ ಮೂಲಕ ಸಾಗಿ, ತನ್ನ ಉದ್ದೇಶಿತ ಗುರಿಯಾದ ಇಸ್ರೇಲ್‌ನ್ನು ತಲುಪಲು ಹಲವು ಗಂಟೆಗಳು ಬೇಕಾದವು. ಆದ್ದರಿಂದ ಇದನ್ನೊಂದು ಬುದ್ಧಿವಂತಿಕೆಯ ನಡೆ ಎಂದು ಪರಿಗಣಿಸಲು ಸಾಧ್ಯವೇ? ಇದರ ಬದಲಾಗಿ, ಇರಾನ್ ಇಸ್ರೇಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪ್ರವಾದ, ನಿಖರ ದಾಳಿ ನಡೆಸಲು ಸಾಧ್ಯವಿತ್ತಲ್ಲವೇ? ತನ್ನ ಆಕ್ರಮಣದ ಪರಿಣಾಮವನ್ನು ಕಡಿಮೆಯಾಗಿಸಲು ಮತ್ತು ಪೂರ್ಣ ಪ್ರಮಾಣದ ಯುದ್ಧ ಆರಂಭಗೊಳ್ಳದಂತೆ ತಡೆಯಲು ಈ ದಾಳಿಯ ಬಳಿಕ ಇರಾನ್ ಒಂದು ಅಧಿಕೃತ ಹೇಳಿಕೆ ನೀಡಿದ್ದು, ತನ್ನ ದಾಳಿಯ ಉದ್ದೇಶ ಪೂರ್ಣಗೊಂಡಿದೆ ಎಂದಿತ್ತು. ಅದು ಇಸ್ರೇಲ್ ಬಳಿ ಮರಳಿ ದಾಳಿ ನಡೆಸದಂತೆ ಆಗ್ರಹಿಸಿತ್ತು.
ಹಾಗೂ, ಇರಾನ್ ಅಮೆರಿಕಾಗೆ ಎಚ್ಚರಿಕೆ ನೀಡಿ, ಇರಾನ್-ಇಸ್ರೇಲ್ ಚಕಮಕಿಯಿಂದ ಹೊರಗಿರುವಂತೆ ಸೂಚಿಸಿತ್ತು. ಅದರೊಡನೆ, ತಾನು ಪ್ರಯೋಗಿಸಿದ ಕ್ಷಿಪಣಿಗಳು ಹಾದು ಹೋದ ರಾಷ್ಟ್ರಗಳಿಗೆ ತನ್ನ ದಾಳಿಯ ನಡುವೆ ಪ್ರವೇಶಿಸದಂತೆಯೂ ಎಚ್ಚರಿಕೆ ನೀಡಿತ್ತು. ಆದರೆ, ಇರಾನ್ ದಾಳಿಯ ಸಂದರ್ಭದಲ್ಲಿ, ಜೋರ್ಡಾನ್ ಇರಾನಿಯನ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಇಸ್ರೇಲ್‌ಗೆ ನೆರವಾಗಿತ್ತು ಎಂಬ ವರದಿಗಳಿವೆ.
ಜನವರಿ ೩, ೨೦೨೦ರಂದು, ಇರಾನಿನ ಅಲ್-ಕುದ್ಸ್ ಬ್ರಿಗೇಡ್ ಮುಖ್ಯಸ್ಥನಾಗಿದ್ದ ಇರಾನಿನ ಜನರಲ್ ಕಾಸಿಮ್ ಸೊಲೆಮಾನಿಯನ್ನು ಅಮೆರಿಕಾ ಹತ್ಯೆಗೈದಿತ್ತು. ಈ ಹತ್ಯೆಯಿಂದ ಕುಪಿತಗೊಂಡ ಇರಾನ್, ತನ್ನ ಕಮಾಂಡರ್ ಹತ್ಯೆಗೆ ಸೂಕ್ತ ಪ್ರತೀಕಾರ ಕೈಗೊಳ್ಳುವುದಾಗಿ ಘೋಷಿಸಿತ್ತು. ಟೆಹರಾನ್ ಅಮೆರಿಕಾ ವಿರುದ್ಧ ಹೇಳಿಕೆ ನೀಡಿ, ಸೊಲೆಮಾನಿ ಹತ್ಯೆಯನ್ನು ಖಂಡಿಸಿ, ಪ್ರತಿದಾಳಿಯ ಎಚ್ಚರಿಕೆ ನೀಡುತ್ತಾ ಬಂದರೂ, ಗಲ್ಫ್ ಪ್ರದೇಶದಲ್ಲಾಗಲಿ ಅಥವಾ ಬೇರೆ ಪ್ರದೇಶಗಳಲ್ಲಿನ ಅಮೆರಿಕನ್ ಸೇನೆಯ ವಿರುದ್ಧ ಯಾವುದೇ ನೇರ ಕ್ರಮ ಕೈಗೊಳ್ಳಲಿಲ್ಲ. ಆದರೆ, ಈ ಬಾರಿ ಇಸ್ರೇಲ್ ನೇರವಾಗಿ ಡಮಾಸ್ಕಸ್ ನಗರದ ಇರಾನ್ ರಾಯಭಾರಿ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದು, ಇದು ಇರಾನ್ ಪಾಲಿಗೆ ಸಹಿಸಲಸಾಧ್ಯವಾದ ಅವಮಾನವಾಗಿತ್ತು.
ಆದರೆ, ಇರಾನ್ ಈ ದಾಳಿಗೆ ಪ್ರತಿಕ್ರಿಯಿಸಲು ಏಕೆ ಎರಡು ವಾರಗಳನ್ನು ತೆಗೆದುಕೊಂಡಿತು? ಇರಾನ್ ನಡೆಸಿದ ಪ್ರತಿದಾಳಿ ಏಕೆ ಅಷ್ಟೊಂದು ಹಾನಿಕರವಾಗಿರಲಿಲ್ಲ? ಇದಕ್ಕೆ ಇಸ್ರೇಲ್ ಹೇಗೆ ಪ್ರತಿಕ್ರಿಯೆ ನೀಡಬಹುದು ಮತ್ತು ಅದಕ್ಕೆ ಇರಾನ್ ಹೇಗೆ ಪ್ರತ್ಯುತ್ತರ ನೀಡಬಹುದು? ಅದರೊಡನೆ, ಜಿ೭ ಒಕ್ಕೂಟ ಇಸ್ರೇಲ್ ವಿರುದ್ಧ ಇರಾನ್ ನಡೆಸಿದ ಆಕ್ರಮಣವನ್ನು ಖಂಡಿಸಿದರೂ, ಡಮಾಸ್ಕಸ್ ನಗರದ ಇರಾನಿಯನ್ ರಾಯಭಾರಿ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನೇಕೆ ಖಂಡಿಸಲಿಲ್ಲ? ಇವುಗಳು ಇತ್ತೀಚಿನ ಕದನದಲ್ಲಿ ತಲೆದೋರುವ ಪ್ರಮುಖ ಪ್ರಶ್ನೆಗಳಾಗಿವೆ.
ಫೆಬ್ರವರಿ ೧೯೭೯ರಲ್ಲಿ ನಡೆದ ಇರಾನಿಯನ್ ಕ್ರಾಂತಿಯ ಬಳಿಕ, ಇರಾನ್ ಅಮೆರಿಕಾ ಮತ್ತು ಇಸ್ರೇಲ್ ಎರಡೂ ದೇಶಗಳ ಜೊತೆಗಿನ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕತ್ತರಿಸಿತು. ಆ ಮೂಲಕ ಹಿಂದಿನ ಶಾ ಆಡಳಿತದಲ್ಲಿ ಇಸ್ರೇಲ್ ಜೊತೆಗೆ ಉತ್ತಮ ಸಂಬಂಧ ಹೊಂದುವ ನೀತಿಯನ್ನು ರದ್ದುಗೊಳಿಸಿತು. ಟೆಹರಾನಿನಲ್ಲಿ ಆಡಳಿತಕ್ಕೆ ಬಂದ ಹೊಸ ಸರ್ಕಾರ ಪ್ಯಾಲೆಸ್ತೀನಿಯನ್ ಲಿಬರೇಶನ್ ಆರ್ಗನೈಸೇಶನ್‌ಗೆ ಬೆಂಬಲ ವ್ಯಕ್ತಪಡಿಸಿ, ಇದರಿಂದಾಗಿ ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚಿನ ಉದ್ವಿಗ್ನತೆ ಉಂಟಾಗಲು ಕಾರಣವಾಯಿತು. ಅದರೊಡನೆ, ಲೆಬನಾನಿನ ಹೆಜ್ಬೊಲ್ಲಾ ಸಂಘಟನೆಗೆ ಇರಾನಿನ ಬೆಂಬಲ ಮತ್ತು ಸಿರಿಯಾದ ಜೊತೆಗಿನ ಇರಾನ್ ಆತ್ಮೀಯ ಸಂಬಂಧ ಇಸ್ರೇಲ್ ಜೊತೆಗಿನ ಸಂಬಂಧವನ್ನು ಇನ್ನಷ್ಟು ಹಾಳುಗೆಡವಿತು.
ಇರಾನ್ ಮತ್ತು ಇಸ್ರೇಲ್ ನಡುವಿನ ಪ್ರಸ್ತುತ ಉದ್ವಿಗ್ನತೆಯನ್ನು ಮೂರು ಕೋನಗಳಿಂದ ಗಮನಿಸಬಹುದು. ಮೊದಲನೆಯದಾಗಿ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಯುದ್ಧ ಸಚಿವ ಸಂಪುಟ ತಾನು ಪ್ರತಿದಾಳಿ ನಡೆಸುವುದಾಗಿ ಘೋಷಿಸಿರುವುದರಿಂದ, ಇಸ್ರೇಲ್ ಪ್ರತಿಕ್ರಿಯೆ ಈಗ ಬಹಳ ಮುಖ್ಯವಾಗಿದೆ. ಇದೇ ವೇಳೆ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಬಳಿ ಸಂಯಮ ಕಾಪಾಡಿಕೊಳ್ಳುವಂತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡು, ಇರಾನಿನ ಮೇಲೆ ಆಕ್ರಮಣ ನಡೆಸದಂತೆ ಆಗ್ರಹಿಸಿದ್ದಾರೆ. ಇಸ್ರೇಲಿನ ಪ್ರತಿಗಾಮಿ ನಾಯಕರು ಇರಾನ್ ವಿರುದ್ಧದ ತಮ್ಮ ಕ್ರಮಕ್ಕೆ ಅಮೆರಿಕಾ ಮತ್ತು ಪಾಶ್ಚಾತ್ಯ ಬೆಂಬಲವನ್ನು ಎದುರು ನೋಡುವ ಸಾಧ್ಯತೆಗಳಿರುವುದರಿಂದ, ಈಗ ಇಸ್ರೇಲ್ ಇರಾನಿನ ಮೇಲೆ ನೇರ ಮಿಲಿಟರಿ ದಾಳಿ ನಡೆಸುತ್ತದೆಯೋ ಅಥವಾ ಇರಾನಿನ ಪ್ರಾದೇಶಿಕ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆಯೇ ಎಂದು ಕಾದು ನೋಡಬೇಕಿದೆ.
ಇರಾನ್ ಈ ಪರಿಸ್ಥಿತಿಯನ್ನು ಇಲ್ಲಿಗೇ ತಿಳಿಯಾಗಿಸಲು ರಾಜತಾಂತ್ರಿಕ ಹೆಜ್ಜೆ ಇಟ್ಟಿದ್ದು, ಇಸ್ರೇಲ್ ಡಮಾಸ್ಕಸ್‌ನ ತನ್ನ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸಿದ್ದಕ್ಕಾಗಿ ತಾನು ಪ್ರತಿದಾಳಿ ನಡೆಸಿದ್ದೇನೆ. ಈಗ ಈ ವಿಚಾರ ಅಂತ್ಯ ಕಂಡಿದೆ ಎಂದು ಹೇಳಿಕೆ ನೀಡಿತ್ತು. ಆದರೆ, ಈ ದಾಳಿ ನಡೆಸಲು ಇರಾನ್ ಎರಡು ವಾರ ಕಾದಿದ್ದರೆ, ಅದರ ರೀತಿಯಲ್ಲದ ಇಸ್ರೇಲ್ ಶೀಘ್ರವಾಗಿ ಪ್ರತಿಕ್ರಿಯಿಸುವ ಸಾಧ್ಯತೆಗಳಿವೆ.
ಎರಡನೆಯದಾಗಿ, ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ಪರಿಣಾಮಗಳನ್ನು ಉಂಟುಮಾಡಿ, ಪರ್ಷಿಯನ್ ಕೊಲ್ಲಿಯ ಹೊರ್ಮುಸ್ ಜಲಸಂಧಿ ಮತ್ತು ಕೆಂಪು ಸಮುದ್ರದ ಬಾಬ್ ಅಲ್ ಮಂದೇಬ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರ ಸಾಗಾಣಿಕೆಗಳಿಗೆ ಅಡಚಣೆ ಉಂಟುಮಾಡಬಹುದು. ಇರಾನ್ ಮತ್ತು ಯೆಮೆನ್ ಈ ಬಹುಮುಖ್ಯ ವ್ಯಾಪಾರ ಮಾರ್ಗಗಳನ್ನು ತಡೆಗಟ್ಟಿ, ಜಗತ್ತಿನ ೬೦% ತೈಲ ಮತ್ತು ಅನಿಲ ಪೂರೈಕೆಗಳನ್ನು ಅಸ್ತವ್ಯಸ್ತಗೊಳಿಸಬಲ್ಲವು. ಇಂತಹ ಅಡಚಣೆಗಳು ಮತ್ತು ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಭಾವ್ಯ ಯುದ್ಧ ಸಂಪೂರ್ಣ ಮಧ್ಯ ಪೂರ್ವವನ್ನು ಅಸ್ಥಿರಗೊಳಿಸಿ, ಜಗತ್ತಿನ ಇತರ ಭಾಗಗಳ ಮೇಲೂ ಪರಿಣಾಮ ಬೀರಬಹುದು.
ಜಾಗತಿಕ ನಾಯಕರೂ ಇರಾನ್ ಮತ್ತು ಇಸ್ರೇಲ್‌ಗಳ ನಡುವಿನ ಯುದ್ಧದ ತೀವ್ರ ಪರಿಣಾಮಗಳನ್ನು ಅರ್ಥೈಸಿಕೊಂಡಿದ್ದಾರೆ. ಚೀನಾದಂತಹ ದೇಶಗಳು ಪ್ರಸ್ತುತ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗದಂತೆ ತಡೆಯಲು ಕಾರ್ಯಾಚರಣೆಗೊಳಿಸುವ ಸಾಧ್ಯತೆಗಳಿವೆ. ಆದರೆ, ಸಿರಿಯಾ, ಲೆಬನಾನ್, ಇರಾಕ್ ಮತ್ತು ಯೆಮೆನ್‌ಗಳ ಜೊತೆಗೆ ರಷ್ಯಾ ಸಹ ಇರಾನ್‌ಗೆ ಬೆಂಬಲ ನೀಡುವ ಸಾಧ್ಯತೆಗಳು ಹೆಚ್ಚಿವೆ.