ಇಲಿಪಾಷಾಣ ತೆಗೆದುಕೊಳ್ಳಿ
ಜಾಲಿಮರದ ಕೆಳಗೆ ಕುಳಿತು ತನ್ನಷ್ಟಕ್ಕೆ ತಾನು ಸೌ ನಂಬರ್ ಬೀಡಿ ಸೇದುತ್ತ ಗಾಢ ಯೋಚನೆಯಲ್ಲಿ ಮುಳುಗಿದ್ದ ತಿಗಡೇಸಿ, ಯರ‍್ಯಾರೋ ಏನೇನೋ ಆಗುತ್ತಾರೆ. ನಾನು ಯಾಕೆ ಆಗುತ್ತಿಲ್ಲ ಎಂಬ ಯೋಚನೆ ಗುಂಗಿಹುಳುವಿನಂತೆ ಸುತ್ತತೊಡಗಿತು. ನನ್ನ ಮುಂದಿನ ಹುಡುಗ ಅಲೈಕನಕ ಒಂದೇ ಓಟಿನಿಂದ ಆರಿಸಿಬಂದು ಗ್ರಾಮ ಪಂಚಾಯ್ತಿ ಮೆಂಬರ್ ಆದ. ನಿನ್ನ ಸಪೋಲ್ಟ್ ಬೇಕಣ್ಣ ಎಂದು ಅಂಗಲಾಚುತ್ತಿದ್ದ ಕಂಬಾರೀಸ್ಯ ಟಿಪಿ ಸದಸ್ಯನಾಗಲು ಸಜ್ಜಾಗಿದ್ದಾನೆ. ಅಣ್ಣಾ ನಾನು ಅದು ಮಾಡಬೇಕು ಅನ್ಕೊಂಡಿದೀನಿ… ಇದು ಮಾಡಬೇಕು ಅನ್ಕೊಂಡಿದೀನಿ ಅಂತ ಹೇಳುತ್ತಿದ್ದ ಲಾದುಂಚಿರಾಜ ಈಗ ದೊಡ್ಡ ಬ್ಯುಸಿನೆಸ್ ಮೆನ್. ಅಣ್ಣಾ ಸಣ್ಣ ಓಟ್ಲು ಇಡುತ್ತೇನೆ ನಿನ್ನ ಅಭಿಪ್ರಾಯವೇನು ಎಂದು ನನ್ನ ಕಡೆ ಸಲಹೆ ತೆಗೆದುಕೊಂಡಿದ್ದ ಇರಪಾಪುರ ಮಾದೇವ ಈಗ ಡಾಬಾ ಓರ‍್ರು ಇಂಥವೇ ನೂರೆಂಟು ಯೋಚನೆಗಳು ತಿಗಡೇಸಿಗೆ ಗಂಟುಬಿದ್ದಿದ್ದವು. ನಾನು ಸುಮ್ಮನೇ ಕುಳಿತರೆ ಆಗುವುದಿಲ್ಲ. ಇನ್ನು ಮುಂದೆ ಏನಾದರೂ ಮಾಡಬೇಕು ಎಂದು ಅಂದುಕೊಳ್ಳುವಾಗಲೇ ತಿಗಡೇಸಿ ಫೋನು ರಿಂಗಾಯಿತು…ಈ ಸಮಯದಲ್ಲಿ ಇದೊಂದು… ಎಂದು ಬೇಸರ ಮುಖ ಮಾಡಿಕೊಂಡು ಫೋನೆತ್ತಿದ..
ಹಲೋ ಯಾರು?
ನೀವು ತಿಗಡೇಸಿ ಆಗಿದ್ದರೆ ನಂಬರ್ ಒಂದನ್ನು ಒತ್ತಿ…
ತಿಗಡೇಸಿ; ಹಾಂ ಒತ್ತಿದೆ ತೆಗೆದುಕೊಳ್ಳಿ
ಫೋನು; ನೀವು ಏನಾದರೂ ಆಗಬೇಕು ಅಂದುಕೊಂಡಿದ್ದರೆ ಎರಡನ್ನು ಒತ್ತಿ
ತಿಗಡೇಸಿ; ಹೌದು ಆಗಬೇಕು ಅನ್ಕೊಂಡಿದೀನಿ ಎರಡು ಒತ್ತಿದೀನಿ
ಫೋನು; ನೀವು ಬೇಜಾರಾದಾಗ ಗಾಳಿಯಲ್ಲಿ ತೇಲಾಡಬೇಕೇ? ಹಾಗಾದರೆ ಝೀರೋ ಒತ್ತಿ
ತಿಗಡೇಸಿ; ಹೌದು ನಂಗೆ ಬೇಕಾದ್ದೇ ಅದು…ಝೀರೋ ಒತ್ತಿದೆ ನೋಡಿ
ಫೋನು; ನೀವು ಅಂಗಡಿಗೆ ಹೋಗಿ ಇಲಿಪಾಷಾಣ ಖರೀದಿಸಿ ಅದನ್ನು ಹಾಲಿನಲ್ಲಿ ತೆಗೆದುಕೊಳ್ಳಿ…
ಹೀಗಂದದ್ದೇ ತಡ ತಿಗಡೇಸಿ ತನ್ನ ಫೋನನ್ನು ಸ್ವಿಚ್ಡಾಫ್ ಮಾಡಿದ. ಇನ್ನು ಮುಂದೆ ಯಾವತ್ತೂ ಫೋನು ತೆಗೆದುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ.