ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ….

02:33 AM Aug 10, 2024 IST | Samyukta Karnataka

ಸ್ವತಂತ್ರ ಬಾಂಗ್ಲಾದೇಶದ ಪಿತಾಮಹ ಶೇಕ್ ಮಜುಬುಲ್ ರೆಹಮಾನ್ ಅಮರ ಸೊನಾರ ಬಾಂಗ್ಲಾ(ಬಂಗಾರದ ನಾಡು ಬಾಂಗ್ಲಾ ಅಮರ) ಎಂಬ ಘೋಷಣೆ ದೇಶದ ಹೆಗ್ಗುರುತಾಗಿ ಜಗತ್ತಿನಲ್ಲಿ ಮಾರ್ದನಿಗೊಂಡಾಗ ಬಾಂಗ್ಲಾದೇಶದ ಸಾಂಸ್ಕೃತಿಕ ಮಹತ್ವ ಹಾಗೂ ದೇಶ ಮೈದೆಳೆತ ತತ್ವ ಏನೆಂಬುದು ಚರ್ಚೆಗೆ ಒಳಗಾಗಿತ್ತು. ಐವತ್ತು ವರ್ಷಗಳ ಇತಿಹಾಸದ ಈ ದೇಶದಲ್ಲಿ ಪ್ರಧಾನಿಗಳು ಹತ್ಯೆಗೆ ಒಳಗಾದದ್ದು, ರಾಷ್ಟ್ರಾಧ್ಯಕ್ಷರು ಜೈಲು ಕಂಬಿ ಎಣಿಸಿದ್ದು, ಮಾಜಿ ಪ್ರಧಾನಿಗಳು ಕೋರ್ಟಿನ ಕಟಕಟೆ ಏರಿದ್ದು ಒಂದು ಕಡೆಯಾದರೆ, ಲೆಕ್ಕವಿಲ್ಲದಷ್ಟು ಅಮಾಯಕರು ಪ್ರಾಣ ನೀಗಿಕೊಂಡ ರ‍್ಯಾಯ ಚರಿತ್ರೆ ಇರುವ ಈ ಬಾಂಗ್ಲಾದೇಶದಲ್ಲಿ ಎಲ್ಲರಿಗೂ ಆಕರ್ಷಣೆಯಾದ ಸಂಗತಿಯೆಂದರೆ ಸಾಹಿತ್ಯ ಮತ್ತು ಸಂಗೀತದ ವಿಜೃಂಭಣೆ. ಎಷ್ಟಾದರೂ ಭಾರತದ ಒಂದು ಭಾಗವಾಗಿದ್ದ ಕಾಲದಲ್ಲಿ ಈಗಿನ ಪಶ್ಚಿಮಬಂಗಾಳ ಬಾಂಗ್ಲಾಗೆ ಸೋದರಿಯ ಸಂಬಂಧ. ಆದರೆ ಈಗ ದಾಯಾದಿಗಳ ಜಗಳಕ್ಕೆ ತಿರುಗಿರುವ ಈ ಸಂಬಂಧದ ಮೂಲ ಕಾರಣ ಕರ್ಮಟ ಮತಾಂಧತೆ. ಧರ್ಮದ ಅಭಿಮಾನ ಬೇರೆ. ಆದರೆ ಅದು ದುರಭಿಮಾನಕ್ಕೆ ತಿರುಗಿದರೆ ಏನಾಗಬಹುದು ಎಂಬುದಕ್ಕೆ ಈಗಿನ ಬಾಂಗ್ಲಾದೇಶವು ಒಂದು ತಾಜಾ ಉದಾಹರಣೆ. ಅವಾಮಿ ಲೀಗ್ ಪಕ್ಷದ ಹಿರಿಯ ನೇತಾರರೂ ಆದ ದೇಶ ಭ್ರಷ್ಟ ಪ್ರಧಾನಿ ಶೇಕ್ ಹಸಿನಾ ಅವರು ಕ್ಷಿಪ್ರ ಕ್ರಾಂತಿಯ ನಡುವೆ ಪ್ರಾಣ ರಕ್ಷಣೆಗಾಗಿ ಭಾರತಕ್ಕೆ ಆಶ್ರಯ ಪಡೆಯಲು ಓಡೋಡಿ ಬಂದಿರುವ ಸಂದರ್ಭದಲ್ಲಿ ಮುಂದೇನು ಭವಿಷ್ಯ ಎಂಬ ಚಿಂತೆ ಅವರನ್ನು ಕಾಡುತ್ತಿದ್ದರೆ ಅದು ಸಹಜ. ಏಕೆಂದರೆ ರಾಜಕೀಯ ಆಶ್ರಯ ಸಿಗಬಹುದು ಎಂಬ ನಂಬಿಕೆ ಹೊಂದಿದ್ದ ಬ್ರಿಟನ್ ದೇಶ ನಕಾರಾತ್ಮಕ ಪ್ರತಿಕ್ರಿಯೆಯನ್ನು ಸೂಚಿಸಿದೆ. ಅಮೆರಿಕ ಪ್ರತಿಕ್ರಿಯೆ ಕೂಡಾ ಇದಕ್ಕಿಂತ ವಿಭಿನ್ನವಾಗಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ದೃಷ್ಟಿಕೋನವೂ ಕೂಡಾ ಇದೇ. ಅರಬ್ ರಾಷ್ಟ್ರಗಳಲ್ಲಿ ಅರ್ಥವಾಗದ ಮೌನ. ಇನ್ನೂ ಭಾರತದಲ್ಲಿ ಹೆಚ್ಚು ದಿನ ಆಶ್ರಯ ಮುಂದುವರಿಸುವ ಬಗ್ಗೆ ಒಮ್ಮತದ ನಿಲುವಿಲ್ಲ. ಬೇರೆ ದೇಶದಲ್ಲಿ ಆಶ್ರಯ ಸಿಗುವವರೆಗೆ ಭಾರತದಲ್ಲಿ ಉಳಿಯಬಹುದು ಎಂಬ ನಿಲುವಿನ ಅರ್ಥಸ್ವಾಗತವಿಲ್ಲ' ಎಂಬುದು. ಬಾಂಗ್ಲಾ ದೇಶಕ್ಕೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದ ಹಸಿನಾ ಅವರ ಪರವಾಗಿ ಮಗ ಢಾಕಾದಲ್ಲಿ ನಿಲುವನ್ನು ಬದಲಾಯಿಸಿ ಪರಿಸ್ಥಿತಿ ಮಾಮೂಲಿಗೆ ಬಂದ ನಂತರ, ತಾಯಿಯವರು ಹಿಂತಿರುಗುವರು ಎಂಬ ನಿಲುವಿನಲ್ಲಿ ಎದ್ದು ಕಾಣುವುದು ಇಲ್ಲಿರಲಾರೆ-ಎಲ್ಲಿಗೂ ಹೋಗಲಾರೆ' ಎಂಬ ದಾಸವಾಣಿಯ ಸಂದೇಶ. ಶೇಕ್ ಹಸಿನಾ ಅವರ ಸ್ಥಿತಿ ಅರ್ಥ ಮಾಡಿಕೊಳ್ಳುವಂತದ್ದೇ. ಏಕೆಂದರೆ ಹುಟ್ಟಿ ಬೆಳೆದ ದೇಶದಲ್ಲಿ ಉಳಿಗಾಲದ ಸ್ಥಿತಿಯಿಲ್ಲ. ನಂಬಿದವರೆಲ್ಲಾ ಮೀರ್ ಸಾಧಕರಾದರು. ಇನ್ನೂ ನಂಬುವುದು ಯಾರನ್ನು ಎಂದು ಲೆಕ್ಕ ಹಾಕುವ ಹೊತ್ತಿಗೆ ಅವಾಮಿಲೀಗ್ ಪಕ್ಷದ ನೂರಾರು ಮಂದಿ ಹತ್ಯೆಗೆ ಒಳಗಾದ ನಂತರ ಶೇಕ್ ಹಸಿನಾ ಪರವಾಗಿ ಅನುಕಂಪದ ಅಲೆ ಸೃಷ್ಟಿಯಾಗುತ್ತಿರುವ ವಾಸನೆಯನ್ನು ಗುರುತಿಸಿದ ಮೇಲೆನಮ್ಮೂರೇ ಚಂದ-ನಮ್ಮವರೇ ಅಂದ' ಎಂಬ ಭಾವ ಅರಳುವುದು ಸ್ವಾಭಾವಿಕ. ಈಗಿರುವ ಸ್ಥಿತಿಯಲ್ಲಿ ಬಾಂಗ್ಲಾದೇಶದಲ್ಲಿ ಹೇಳುವವರು ಇಲ್ಲ-ಕೇಳುವವರಂತೂ ಮೊದಲೇ ಇಲ್ಲ. ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮದ್ ಯೂನಸ್ ಇನ್ನೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಏನಾಗುತ್ತದೆ ಎಂಬ ಲೆಕ್ಕಾಚಾರ ಸಿಕ್ಕುತ್ತಿಲ್ಲ. ಏಕೆಂದರೆ ಜಮಾತಾ ಇಸ್ಲಾಮಿ ಹಾಗೂ ಪಾಕಿಸ್ತಾನದ ಐಎಸ್‌ಐ ಸಂಘಟನೆಗಳು ಭಲೇ ಜೋಡಿಯಂತೆ ಅರಾಜಕತೆಯ ವಾತಾವರಣಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಿರುವ ಸಂದರ್ಭದಲ್ಲಿ ಅದಕ್ಕೆ ಒಗ್ಗರಣೆ ಹಾಕುತ್ತಿರುವ ಬಿಎನ್‌ಪಿ ಹಾಗೂ ಜಾತೀಯ ಹೆಸರಿನ ಪಕ್ಷಗಳ ಅವಾಂತರ ಆ ದೇವರಿಗೇ ಪ್ರೀತಿ.
ಚುನಾವಣೆಯನ್ನು ಆದಷ್ಟು ಬೇಗ ನಡೆಸಿ ಜನಪ್ರಿಯ ಸರ್ಕಾರವನ್ನು ಸ್ಥಾಪಿಸುವ ನಿರ್ಧಾರವನ್ನು ಅಧ್ಯಕ್ಷರು ಘೋಷಿಸಿದ್ದರೂ, ಅದಕ್ಕೆ ಯಾವುದೇ ಕಾಲಮಿತಿ ಇಲ್ಲ. ಚುನಾವಣೆವರೆಗೆ ಏನೆಲ್ಲಾ ಆಗಬಹುದು ಎಂಬುದಂತೂ ಯಾರಿಗೂ ತಿಳಿಯುತ್ತಿಲ್ಲ. ಇದರ ಮಧ್ಯೆ ಮಾಜಿ ಪ್ರಧಾನಿ ಖಲಿದಾ ಜಿಯಾ ಜೈಲಿನಿಂದ ಬಿಡುಗಡೆಗೊಂಡ ನಂತರ ಹೆಚ್ಚು ಸಕ್ರಿಯವಾಗಿರುವುದು ರಾಜಕಾರಣದ ಸಾರಥ್ಯ ನನ್ನದೇ ಎಂಬುದನ್ನು ಸಾರುವುದರ ಸಂಕೇತ. ಶೇಕ್ ಹಸಿನಾ ಸರ್ಕಾರದ ಕೃಪೆಯಿಂದ ಪದ್ಮಾನದಿಗೆ ಅಡ್ಡಲಾಗಿ ಸುಮಾರು ೬ ಕಿಮೀ ಉದ್ದದ ಸೇತುವೆಯನ್ನು ನಿರ್ಮಾಣ ಮಾಡಿದ ಪರಿಣಾಮವೆಂದರೆ ಸುಮಾರು ಏಳೆಂಟು ಜಿಲ್ಲೆಗಳಿಗೆ ಸಂಪರ್ಕ ಒದಗಿ ಆರ್ಥಿಕ ಚಟುವಟಿಕೆ ಹೆಚ್ಚಾಗಲು ಕಾರಣವಾಗಿದೆ. ಸಿದ್ಧ ಉಡುಪುಗಳಿಗೆ ಬಾಂಗ್ಲಾ ಹೆಸರುವಾಸಿ. ಪದ್ಮಾ ನದಿಯ ಸೇತುವೆ ರಫ್ತಿನ ಜವಳಿ ಸಾಗಣೆಗೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ಜನರಿಗೆ ಬದುಕಿನ ಮಾರ್ಗವೇನೋ ದೊರಕಿದಂತಾಗಿದೆ. ಆದರೆ ಜನರಿಗೆ ದೊರಕಿರುವ ಬದುಕಿನ ಮಾರ್ಗ ರಾಜಕೀಯ ದುರ್ಮಾರ್ಗಕ್ಕೆ ಇಳಿಯದೇ ಒಂದರ್ಥದಲ್ಲಿ ಪ್ರೇರಣೆಯಾಗಲು ಕುರುಡು ಕಾಂಚಾಣದ ಪರಿಣಾಮವೇ ಕಾರಣ.
ಬಾಂಗ್ಲಾದೇಶದ ಈಗಿನ ಸ್ಥಿತಿಯನ್ನು ನೋಡಿ ಭವಿತವ್ಯವನ್ನು ಅಂದಾಜು ಮಾಡುವುದು ಕಷ್ಟ. ಪರಂಪರೆಯನ್ನು ನೆನೆದು ಶೋಕಿಸಬಹುದು ಅಷ್ಟೇ. ಈ ಬೆಳವಣಿಗೆಯ ಬಗ್ಗೆ ಕಣ್ಣೀರಿಟ್ಟಿರುವ ಭಾರತ ಬಾಂಗ್ಲಾ ಗಡಿಯುದ್ದಕ್ಕೂ ಪಹರೆಯನ್ನು ಹೆಚ್ಚಿಸಿ ನುಸುಳುಕೋರರಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಂಡಿದೆ. ಬಾಂಗ್ಲಾದಲ್ಲಿ ಆಗುವ ಪರಿಣಾಮ ಭಾರತದ ಮೇಲೆ ಬೀಳುವುದು ಖಂಡಿತಾ, ಇದನ್ನು ತಪ್ಪಿಸುವುದು ಅಸಾಧ್ಯ. ಭಾರತಕ್ಕೆ ಅದೇ ದೊಡ್ಡ ಪೀಕಲಾಟ. ಇದರ ಮಧ್ಯೆ ಆಶ್ರಯ ಕೋರಿ ಬಂದಿರುವ ಶೇಕ್ ಹಸಿನಾ ಅವರನ್ನು ಎಷ್ಟು ದಿನ ಉಳಿಸಿಕೊಳ್ಳುವುದು ಎಂಬ ಚಿಂತೆಯೂ ಕೂಡಾ ಭಾರತಕ್ಕೆ ಕಾಡಲು ಮುಖ್ಯ ಕಾರಣ ಜಾಗತಿಕ ಮಟ್ಟದ ಒಡೆದು ಆಳುವ ರಾಜಕಾರಣ.

Next Article