ಇಷ್ಟಲಿಂಗದಲ್ಲಿ ಎಲ್ಲವೂ ಇದೆ
ಕಾಣದ ಕಾಮಧೇನು ಮತ್ತೇನು ಕೊಡಬಲ್ಲುದು
ಕಲ್ಪನೆಯ ಕಲ್ಪವೃಕ್ಷ ಮತ್ತೇನನ್ನೀಯಬಲ್ಲುದು
ಚಿಂತನೇಯ ಚಿಂತಾಮಣಿ ಮತ್ತೇನ ಪುಟ್ಟಿಸುವುದು?
ಕಾಣದ ಕಲ್ಪಿತದ-ಚಿಂತಿತ ವಸ್ತುಗಳ ಕೈ ಬಿಟ್ಟು
ಗುರು ಕರುಣಿಸಿದ ಕೈ ಮುಟ್ಟಿ ಪೂಜಿಸಬಲ್ಲ
ಚಿಂತಿತಾರ್ಥವನೀವ ಇಷ್ಟಲಿಂಗಪೂಜೆಸಬಲ್ಲೊಡೆ
ಸಕಲ ಪಡಿ ಪದಾರ್ಥಗಳು ಇದರಲ್ಲಪ್ಪವು
ನೋಡಾ ಮೃಡಗಿರಿ ಅನ್ನದಾನೀಶ
ಭಾರತೀಯ ಸಂಸ್ಕೃತಿಯಲ್ಲಿ ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳ ಕಲ್ಪನೆ ಬೆಳೆದು ಬಂದಿದೆ. ಕಾಮಧೇನು ಎಂದರೆ ದೇವಲೋಕದ ಆಕಳು ಎನ್ನುತ್ತಾರೆ. ದೇವಾಸುರರ ಸಮುದ್ರ ಮಥನದಲ್ಲಿ ಲಭ್ಯವಾದವುಗಳು ಇವು. ದೇವೇಂದ್ರನಾದ ಇಂದ್ರನ ಸ್ವಾಧೀನದಲ್ಲಿರುವದಾಗಿ ಹೇಳುತ್ತ ಬಂದಿದ್ದಾರೆ. ಕಾಮಧೇನು ಹತ್ತಿರವಿದ್ದಾಗ ಬಯಸಿದ್ದು ದೊರೆಯುತ್ತದೆ. ವಿಶ್ವಾಮಿತ್ರನು ಮೂಲತಃ ಕೌಶಿಕ ರಾಜನಾಗಿದ್ದ, ಆ ಸಂದರ್ಭದಲ್ಲಿ ಋಷಿ ವಶಿಷ್ಠರ ಆಶ್ರಮಕ್ಕೆ ಕೌಶಿಕ ರಾಜನು ತನ್ನ ಎಲ್ಲ ತಂಡದೊಂದಿಗೆ ಬಂದಾಗ ಕಾಮಧೇನುವಿದ್ದ ಪ್ರಯುಕ್ತ ರಾಜಕನ ಸಿಬ್ಬಂದಿಗೆ ಮಾಡಬೇಕಾದ ಯಾವುದೇ ಉಪಚಾರಕ್ಕೆ ಕೊರತೆಯಾಗಲಿಲ್ಲ. ಅತ್ಯಂತ ಸುಲಣಭವಾಯಿತು. ಕಾರಣ ಬೇಡಿದ್ದೆಲ್ಲವನ್ನೂ ಕಾಮಧೇನು ನೀಡಿತಂತೆ. ಇದೇ ರೀತಿ ಸ್ವರ್ಗದ ಕಲ್ಪವೃಕ್ಷವೂ ಕೂಡ ಮನದಲ್ಲಿ ಕಲ್ಪಿಸಿಕೊಂಡಿದ್ದನ್ನೆಲ್ಲವನ್ನು ನೀಡುತ್ತದೆಯಂತೆ.
ಅದೆಲ್ಲ ಪೌರಾಣಿಕ ಕಲ್ಪನೆಗಳು. ಏನೇ ಇದ್ದರೂ ಇಂದಿನವರೆಗೆ ಕಾಣದ ವಸ್ತುಗಳು ಕಲ್ಪವೃಕ್ಷವಾಗಿದ್ದರೂ ಕಲ್ಪಿಸಿ ಮಾಡುವದಂತೆ ಅವು ಇಂದಿನ ಮಾನವರಿಗೆ ದೊರೆಯದ ವಸ್ತುಗಳು. ಹೀಗೆ ಕಾಣಿಸಲಾರದ ಕಲ್ಪನೆಗೆ ಒಳಗಾಗದ ಚಿಂತನೆಗೆ ನಿಲುಕದ ವಸ್ತುಗಳ ಕುರಿತು ವಿಚಾರಿಸುವುದು ಅನವಶ್ಯಕ ಎನಿಸುವ ವಿಚಾರಗಳಾಗಿವೆ. ಸದ್ಗುರು ಕರುಣಿಸಿದ ಇಷ್ಟಲಿಂಮಗವೂ ಇಷ್ಠಾರ್ಥಗಳನ್ನು ದಯಪಾಲಿಸುವದರಲ್ಲಿ ಸಂಶಯವಿಲ್ಲ. ಜಗದ್ಗುರು ಆಚಾರ್ಯ ರೇಣುಕರು `ಸಿದ್ಧಾಂತ ಶಿಖಾಮಣಿ'ಯಲ್ಲಿ ಇಷ್ಟಲಿಂಗಮಿದ ಸಾಕ್ಷಾದನಿಷ್ಟ ಪರಿಹಾರಕಂ ಇಷ್ಟಲಿಂಗವೂ ಅನಿಷ್ಟವಾದುದನ್ನು, ಕೆಟ್ಟದ್ದನ್ನು ಪರಿಹರಿಸುವುದು. ನಿವಾರಿಸುವುದು. ಅಲ್ಲದೇ ಲಿಂಗಾನುಸಂಧಾನ ಮಾಡುವವರ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಅನೇಕ ಮಹಾನುಭಾವರು ವಿವರಿಸಿದ್ದಾರೆ. ಸ್ವತಃ ಅನುಭವ ಗಮ್ಯವಾದುದು ಲಿಂಗಾಂಗಯೋಗವನ್ನು ಸಾಧಿಸಿದ ಅನೇಕ ಶಿವಯೋಗಿಗಳ ಚರಿತ್ರೆಯಲ್ಲಿ ಇಂಥ ಪ್ರಸಂಗಗಳನ್ನು ಕಾಣುತ್ತೇವೆ. ಆದುದರಿಂದ ಎಲ್ಲವನ್ನು ಕರುಣಿಸಬಲ್ಲ ಇಷ್ಟಲಿಂಗವನ್ನು ಶ್ರದ್ಧೆಯಿಂದ ಆರಾಧಿಸಬೇಕು. ನಿತ್ಯವೂ ಅನುಸಂಧಾನದ ಶಿವಯೋಗವನ್ನು ಸಾಧಿಸಿದರೆ ಇಷ್ಟಾರ್ಥಗಳು ಲಭಿಸುವವು.