For the best experience, open
https://m.samyuktakarnataka.in
on your mobile browser.

ಇಸ್ರೇಲ್-ಹೆಜ್ಬೊಲ್ಲಾ: ನಿರಂತರ ಯುದ್ಧಕ್ಕೆ ಕೊನೆಯೆಂದು?

06:00 AM Sep 28, 2024 IST | Samyukta Karnataka
ಇಸ್ರೇಲ್ ಹೆಜ್ಬೊಲ್ಲಾ  ನಿರಂತರ ಯುದ್ಧಕ್ಕೆ ಕೊನೆಯೆಂದು

ಇಸ್ರೇಲ್ ಮುಖಂಡರು ಹೆಜ್ಬೊಲ್ಲಾ ಸಂಘಟನೆಯ ವಿರುದ್ಧ ತಮ್ಮ ಕಾರ್ಯಾಚರಣೆಯ ಆರಂಭಿಕ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಹೆಜ್ಬೊಲ್ಲಾ ವಿರುದ್ಧದ ಇಸ್ರೇಲ್ ಕ್ರಮ ಸ್ಫೋಟಕ ಹೊಂದಿದ್ದ ಪೇಜರ್‌ಗಳು ಮತ್ತು ರೇಡಿಯೋಗಳ ಸ್ಫೋಟದೊಂದಿಗೆ ಆರಂಭಗೊಂಡು, ಮಾರಕ ವಾಯುದಾಳಿಗಳ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿತು. ಸೆಪ್ಟೆಂಬರ್ ೨೩ರ ಸೋಮವಾರ ಇಸ್ರೇಲ್ ನಡೆಸಿದ ವಾಯುದಾಳಿಯನ್ನು ರಕ್ಷಣಾ ಸಚಿವ ಯೊಆವ್ ಗ್ಯಾಲಂಟ್ ಶ್ಲಾಘಿಸಿದ್ದಾರೆ.
ಇಸ್ರೇಲ್ ನಡೆಸಿದ ವಾಯುದಾಳಿಯು ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಲು ಸಂಗ್ರಹಿಸಿಟ್ಟಿದ್ದ ಸಾವಿರಾರು ರಾಕೆಟ್‌ಗಳನ್ನು ನಾಶಪಡಿಸಿದೆ ಎಂದು ಗ್ಯಾಲಂಟ್ ಹೇಳಿದ್ದಾರೆ. ಇದೇ ವೇಳೆ, ಇಸ್ರೇಲ್ ದಾಳಿಗಳಲ್ಲಿ ೫೦ ಮಕ್ಕಳೂ ಸೇರಿದಂತೆ ತನ್ನ ೫೫೦ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಲೆಬನಾನ್ ಹೇಳಿದೆ. ೨೦೦೬ರಲ್ಲಿ ಇಸ್ರೇಲ್ - ಹೆಜ್ಬೊಲ್ಲಾ ನಡುವೆ ನಡೆದ ಒಂದು ತಿಂಗಳ ಯುದ್ಧದಲ್ಲಿ ಮಡಿದವರ ಸಂಖ್ಯೆಯ ಅರ್ಧದಷ್ಟು ಜನರು ಈಗಾಗಲೇ ಸಾವಿಗೀಡಾಗಿದ್ದಾರೆ.
ಇಸ್ರೇಲ್ ಹೆಜ್ಬೊಲ್ಲಾ ಶರಣಾಗುವಂತೆ ಮಾಡುವ ಸಲುವಾಗಿ ಗಂಭೀರ ದಾಳಿ ನಡೆಸಲು ಸಿದ್ಧವಾಗಿದೆ. ತಾನು ಅತ್ಯಂತ ತೀವ್ರ ಸ್ವರೂಪದ ದಾಳಿ ನಡೆಸಿ, ಹೆಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಇರಾನಿನಲ್ಲಿರುವ ಆತನ ಬೆಂಬಲಿಗರು ಇನ್ನು ಇಸ್ರೇಲ್ ವಿರುದ್ಧ ಹೋರಾಡುವುದರಲ್ಲಿ ಅರ್ಥವಿಲ್ಲ ಎಂಬ ಭಾವನೆ ತಾಳುವಂತೆ ಮಾಡಬೇಕು ಎಂಬುದು ಇಸ್ರೇಲ್ ಲೆಕ್ಕಾಚಾರ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೆಜ್ಬೊಲ್ಲಾ ಗಡಿಯಾಚೆಯಿಂದ ಇಸ್ರೇಲ್ ಮೇಲೆ ರಾಕೆಟ್ ಪ್ರಯೋಗ ಮಾಡಲು ಸಾಧ್ಯವಾಗದಂತೆ ಮಾಡಬೇಕು ಎಂಬ ಗುರಿ ಹೊಂದಿದ್ದಾರೆ. ಇನ್ನು ಇಸ್ರೇಲ್ ಸೇನೆ ಹೆಜ್ಬೊಲ್ಲಾವನ್ನು ತನ್ನ ಗಡಿಗಳಿಂದ ದೂರ ತಳ್ಳಿ, ತನಗೆ ಅಪಾಯಕರವಾಗಬಲ್ಲ ಹೆಜ್ಬೊಲ್ಲಾ ಮಿಲಿಟರಿ ನೆಲೆಗಳನ್ನು ನಾಶಪಡಿಸಲು ಉದ್ದೇಶಿಸಿದೆ.
ಇಸ್ರೇಲ್ ಮುಖಂಡರು ಮತ್ತು ಮಿಲಿಟರಿಗೆ ಈಗ ಒಂದು ಗೆಲುವಿನ ಅವಶ್ಯಕತೆಯಿದೆ. ಬಹುತೇಕ ಒಂದು ವರ್ಷ ಯುದ್ಧ ಮಾಡಿದ ಬಳಿಕವೂ, ಗಾಜಾದ ಪರಿಸ್ಥಿತಿ ಇಂದಿಗೂ ಕಷ್ಟಕರವಾಗಿ ಮುಂದುವರಿದಿದೆ. ಹಮಾಸ್ ಯೋಧರು ಆಗಾಗ ಸುರಂಗಗಳಿಂದ, ಹಾನಿಗೊಳಗಾದ ಕಟ್ಟಡಗಳಿಂದ ಹೊರಬಂದು, ಇಸ್ರೇಲಿ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ಇಂದಿಗೂ ಬಹಳಷ್ಟು ಇಸ್ರೇಲಿಗರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಲೆಬನಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಳೆದ ವರ್ಷದ ಗಾಜಾ ಬಿಕ್ಕಟ್ಟನ್ನು ಮರಳಿ ನೆನಪಿಸಿವೆ.
ಇಸ್ರೇಲ್ ಗಾಜಾದಲ್ಲಿ ಅನುಕರಿಸಿದ ಕ್ರಮದ ರೀತಿಯಲ್ಲೇ, ಲೆಬನಾನ್ ನಾಗರಿಕರಿಗೂ ದಾಳಿಗೆ ಗುರಿಯಾಗಿರುವ ಪ್ರದೇಶಗಳಿಂದ ತೆರಳುವಂತೆ ಸೂಚಿಸಿದೆ. ಹೆಜ್ಬೊಲ್ಲಾ ಸಹ ಹಮಾಸ್ ರೀತಿಯಲ್ಲಿ ನಾಗರಿಕರನ್ನು ತನ್ನ ಗುರಾಣಿಯಂತೆ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಒಂದಷ್ಟು ಟೀಕಾಕಾರರು ಮತ್ತು ಇಸ್ರೇಲ್ ವಿರೋಧಿಗಳು ಇಸ್ರೇಲ್ ನೀಡುತ್ತಿರುವ ಎಚ್ಚರಿಕೆಗಳು ಸಮರ್ಪಕವಾಗಿಲ್ಲ ಮತ್ತು ಅದು ಲೆಬಾನೀಸ್ ಕುಟುಂಬಗಳಿಗೆ ಹೊರಹೋಗಲು ಬೇಕಾದಷ್ಟು ಸಮಯ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆದರೆ, ಹೆಜ್ಬೊಲ್ಲಾ ಸಂಘಟನೆ ನಾಗರಿಕರನ್ನು ರಕ್ಷಿಸುವ ಕಾನೂನುಗಳನ್ನು ಮುರಿದು, ಇಸ್ರೇಲಿನ ನಾಗರಿಕ ಮತ್ತು ಸೇನಾ ನೆಲೆಗಳೆರಡರ ಮೇಲೂ ದಾಳಿ ನಡೆಸಿದೆ. ಇಸ್ರೇಲ್ ಜೊತೆಗೆ, ಅಮೆರಿಕಾ, ಯುಕೆಯಂತಹ ಪಾಶ್ಚಾತ್ಯ ದೇಶಗಳೂ ಹೆಜ್ಬೊಲ್ಲಾವನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿವೆ. ಇಸ್ರೇಲ್ ತನ್ನ ಸೇನೆ ನೈತಿಕವಾಗಿ ನಡೆದುಕೊಳ್ಳುತ್ತಿದ್ದು, ಯುದ್ಧದ ನಿಯಮಗಳನ್ನು ಪಾಲಿಸುತ್ತಿದೆ ಎಂದಿದೆ. ಆದರೆ, ಹಲವಾರು ದೇಶಗಳು ಗಾಜಾದಲ್ಲಿನ ಇಸ್ರೇಲ್ ಕ್ರಮಗಳನ್ನು ಟೀಕಿಸಿವೆ.
ಇತ್ತೀಚಿನ ಪೇಜರ್ ದಾಳಿಯನ್ನು ಗಮನಿಸಿದರೆ, ಇಸ್ರೇಲ್ ತಾನು ಪೇಜರ್‌ಗಳನ್ನು ಹೊಂದಿದ್ದ ಹೆಜ್ಬೊಲ್ಲಾ ಸದಸ್ಯರನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಹೇಳಿದೆ. ಆದರೆ, ಪೇಜರ್ ಬಾಂಬ್‌ಗಳು ಸ್ಫೋಟಿಸಿದಾಗ ಹೆಜ್ಬೊಲ್ಲಾ ಸದಸ್ಯರು ಎಲ್ಲಿರುತ್ತಾರೆ ಎಂಬ ಕುರಿತು ಇಸ್ರೇಲಿಗೆ ಅರಿವಿರಲಿಲ್ಲ. ಆದ್ದರಿಂದಲೇ ಮನೆಗಳಲ್ಲಿ, ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿದ್ದ ಮಕ್ಕಳು ಮತ್ತು ನಾಗರಿಕರು ಗಾಯಗೊಂಡಿದ್ದಾರೆ, ಅಥವಾ ಸಾವಿಗೀಡಾಗಿದ್ದಾರೆ. ಒಂದಷ್ಟು ವಕೀಲರು ಇಸ್ರೇಲ್ ನಾಗರಿಕರು ಮತ್ತು ಯೋಧರೆಂಬ ವ್ಯತ್ಯಾಸ ಗಮನಿಸದೆ, ಅಪಾರ ಪ್ರಮಾಣದ ಸ್ಫೋಟ ನಡೆಸಿದ್ದು, ಯುದ್ಧ ನಿಯಮಗಳನ್ನು ಮುರಿದಿದೆ ಎಂದು ಆರೋಪಿಸಿದ್ದಾರೆ.
೪೦ ವರ್ಷಗಳ ಹಳೆಯ ಚಕಮಕಿಯ ಇತಿಹಾಸ
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಚಕಮಕಿ ೪೦ಕ್ಕೂ ಹೆಚ್ಚು ವರ್ಷಗಳ ಹಿಂದೆ ಆರಂಭಗೊಂಡಿತು. ಆದರೆ, ಕಳೆದ ವರ್ಷ ಅಕ್ಟೋಬರ್ ೭ರಂದು ಹಮಾಸ್ ಉಗ್ರರು ಇಸ್ರೇಲ್ ಒಳನುಗ್ಗಿ ದಾಳಿ ನಡೆಸಿದ ಬಳಿಕ, ಈ ಬಾರಿಯ ಗಡಿ ಚಕಮಕಿ ಆರಂಭಗೊಂಡಿತು. ಹಮಾಸ್ ದಾಳಿಯ ಬಳಿಕ, ಹಸನ್ ನಸ್ರಲ್ಲಾ ತನ್ನ ಪಡೆಗಳಿಗೆ ಇಸ್ರೇಲ್ ಗಡಿಯಾಚೆ ನಿರಂತರವಾಗಿ ದಾಳಿ ನಡೆಸಿ, ಹಮಾಸ್‌ಗೆ ಬೆಂಬಲ ನೀಡುವಂತೆ ಆದೇಶಿಸಿದ್ದ. ಹೆಜ್ಬೊಲ್ಲಾ ಕ್ರಮದಿಂದಾಗಿ ಇಸ್ರೇಲಿ ಸೇನೆ ಸನ್ನದ್ಧ ಸ್ಥಿತಿಯಲ್ಲಿರುವಂತಾಗಿದ್ದು, ಅಂದಾಜು ೬೦,೦೦೦ ಇಸ್ರೇಲಿಗರು ಗಡಿ ಪಟ್ಟಣಗಳಿಂದ ಸ್ಥಳಾಂತರಗೊಂಡಿದ್ದಾರೆ.
ಹೆಜ್ಬೊಲ್ಲಾ ಒಂದು ಮಿಲಿಟರಿ ಸಂಘಟನೆಯಾಗಿಯೂ, ರಾಜಕೀಯ ಪಕ್ಷವಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಅದು ಲೆಬನಾನ್ ಸಂಸತ್ತಿನಲ್ಲಿ ಸ್ಥಾನಗಳನ್ನು ಹೊಂದಿದ್ದು, ದೇಶದ ಬಡ ಷಿಯಾ ಮುಸ್ಲಿಮರಿಗೆ ನೆರವು ನೀಡುತ್ತಿದೆ. ೧೯೮೨ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣದ ಬಳಿಕ ಹೆಜ್ಬೊಲ್ಲಾ ಸಂಘಟನೆ ಸ್ಥಾಪನೆಗೊಂಡಿತು. ೨೦೦೦ ಮತ್ತು ೨೦೦೬ರ ಕದನಗಳು ಸೇರಿದಂತೆ, ಹೆಜ್ಬೊಲ್ಲಾ ಹಲವು ಬಾರಿ ಇಸ್ರೇಲ್ ವಿರುದ್ಧ ಹೋರಾಡಿದೆ. ೨೦೦೬ರಲ್ಲಿ ನಡೆದ ಯುದ್ಧ ಅತ್ಯಂತ ವಿಧ್ವಂಸಕವಾಗಿದ್ದು, ೧,೦೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿ, ಲೆಬನಾನ್‌ನಾದ್ಯಂತ ೨.೮ ಬಿಲಿಯನ್ ಡಾಲರ್ ಮೌಲ್ಯದ ಹಾನಿ ಸಂಭವಿಸಿತ್ತು.
ಈ ಯುದ್ಧದ ಬಳಿಕ ಚೇತರಿಕೆಯ ಹಾದಿಗೆ ಮರಳಲು ಲೆಬನಾನ್ ಬಹಳಷ್ಟು ಸವಾಲುಗಳನ್ನು ಎದುರಿಸಿತ್ತು. ಆದರೆ, ಲೆಬನಾನ್ ಸರ್ಕಾರದ ಪತನ, ಕೋವಿಡ್-೧೯ ಸಾಂಕ್ರಾಮಿಕ, ಮತ್ತು ೨೦೨೦ರಲ್ಲಿ ಬೈರುತ್ ಬಂದರಿನಲ್ಲಿ ನಡೆದ ಸ್ಫೋಟಗಳಿಂದಾಗಿ ಲೆಬನಾನ್ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಬೈರುತ್ ಬಂದರಿನಲ್ಲಿ ಕಾಣಿಸಿಕೊಂಡ ಬೆಂಕಿ ಅಸಮರ್ಪಕವಾಗಿ ಸಂಗ್ರಹಿಸಿದ್ದ ೨,೭೫೦ ಟನ್ ಅಮೋನಿಯಂ ನೈಟ್ರೇಟ್ ಉರಿಯುವಂತೆ ಮಾಡಿತು. ಇದರಿಂದಾಗಿ ಭಾರೀ ಸ್ಫೋಟ ಸಂಭವಿಸಿ, ೨೧೮ ಜನರು ಮೃತಪಟ್ಟು, ೭,೦೦೦ ಜನರು ಗಾಯಗೊಂಡರು. ಬಂದರಿನಲ್ಲಿ ವ್ಯಾಪಕ ಹಾನಿ ಸಂಭವಿಸಿತ್ತು.
ಲೆಬನಾನ್‌ಗೆ ಇನ್ನೊಂದು ಪೂರ್ಣ ಪ್ರಮಾಣದ ಯುದ್ಧ ನಡೆಸುವ ಸಾಮರ್ಥ್ಯ ಇಲ್ಲವಾಗಿದ್ದು, ಹೆಜ್ಬೊಲ್ಲಾವನ್ನು ಬೆಂಬಲಿಸದ ಬಹಳಷ್ಟು ಜನರು ೨೦೦೬ರ ರೀತಿಯ ಯುದ್ಧ ಇನ್ನೊಮ್ಮೆ ನಡೆಯಬಾರದು ಎಂಬ ಭಾವನೆ ಹೊಂದಿದ್ದಾರೆ. ಆದರೆ, ಇನ್ನೊಂದು ಯುದ್ಧವನ್ನು ತಡೆಯಲು ಸಾಧ್ಯವೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇಸ್ರೇಲ್ ಹೆಜ್ಬೊಲ್ಲಾ ನೆಲೆಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದು, ಜುಲೈನಲ್ಲಿ ನಡೆದ ದಾಳಿಯಲ್ಲಿ ಹೆಜ್ಬೊಲ್ಲಾ ಮುಖಂಡ ಫೌದ್ ಶುಕರ್ ಸಾವಿಗೀಡಾಗಿದ್ದ.
ಲೆಬನಾನಿನಾದ್ಯಂತ ಸೆಪ್ಟೆಂಬರ್ ೧೭ ಮತ್ತು ೧೮ರಂದು ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ಸಂವಹನ ಉಪಕರಣಗಳು ಸ್ಫೋಟಗೊಂಡು, ಕನಿಷ್ಠ ೩೦ ಜನರು ಸಾವಿಗೀಡಾಗಿ, ೩,೦೦೦ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇಂತಹ ಯೋಜಿತ ದಾಳಿ ಇಸ್ರೇಲ್‌ನದೇ ಕೃತ್ಯ ಎಂದು ಹೆಜ್ಬೊಲ್ಲಾ ಆರೋಪಿಸಿದ್ದು, ಇಸ್ರೇಲಿ ಅಧಿಕಾರಿಗಳು ಈ ವಿಚಾರದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
ಕಳೆದ ಶುಕ್ರವಾರದಂದು ಇಸ್ರೇಲ್ ಬೈರುತ್‌ನ ಉಪನಗರಗಳು ಸೇರಿದಂತೆ, ದಕ್ಷಿಣ ಲೆಬನಾನ್‌ನಲ್ಲಿನ ಗುರಿಗಳ ಮೇಲೆ ಬಾಂಬ್ ದಾಳಿ ಆರಂಭಿಸಿತು. ಹೆಜ್ಬೊಲ್ಲಾದ ಆರಂಭಿಕ ದಿನಗಳಿಂದಲೂ ಸಂಘಟನೆಯಲ್ಲಿದ್ದ ಓರ್ವ ಕಮಾಂಡರ್ ಇತರ ಯೋಧರನ್ನು ಭೇಟಿಯಾಗುವ ಸಂದರ್ಭದಲ್ಲಿ ಹತ್ಯೆಯಾಗಿದ್ದ. ವರದಿಗಳ ಪ್ರಕಾರ, ೨೦೦೬ರ ಯುದ್ಧದ ಬಳಿಕ, ಸೆಪ್ಟೆಂಬರ್ ೨೩ರ ಸೋಮವಾರದ ದಾಳಿಯೇ ಲೆಬನಾನ್ ಮೇಲೆ ಅತ್ಯಂತ ಮಾರಣಾಂತಿಕ ಇಸ್ರೇಲಿ ದಾಳಿಯಾಗಿತ್ತು. ಮುಂದಿನ ದಿನಗಳಲ್ಲಿ ಈ ದಾಳಿಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಇಸ್ರೇಲ್ ನಡೆಸಿರುವ ದಾಳಿಗೆ ಪ್ರತಿಯಾಗಿ, ತೀವ್ರ ಪರಿಣಾಮ ಮತ್ತು ಶಿಕ್ಷೆಯನ್ನು ಎದುರಿಸಲಿದೆ ಎಂದು ನಸ್ರಲ್ಲಾ ಪ್ರತಿಜ್ಞೆ ಮಾಡಿದ್ದರೂ, ತಾನು ಪ್ರತಿದಾಳಿ ನಡೆಸಬೇಕೇ ಬೇಡವೇ ಎಂಬ ಕಷ್ಟಕರ ನಿರ್ಧಾರ ಹೆಜ್ಬೊಲ್ಲಾ ಮುಂದಿದೆ. ಕಳೆದ ಅಕ್ಟೋಬರ್ ೭ರ ಬಳಿಕ, ಹೆಜ್ಬೊಲ್ಲಾ ಇಸ್ರೇಲ್ ಮೇಲೆ ೮,೦೦೦ ರಾಕೆಟ್‌ಗಳನ್ನು ಪ್ರಯೋಗಿಸಿದೆ. ಕೆಲವು ರಾಕೆಟ್‌ಗಳು ಹೈಫಾ ಬಳಿಯ ರಫೇಲ್ ಆಯುಧ ನಿರ್ಮಾಣ ಘಟಕ ಮತ್ತು ರಮಾತ್ ಡೇವಿಡ್ ವಾಯುನೆಲೆಗಳನ್ನು ಗುರಿಯಾಗಿಸಿದ್ದವು. ರಮಾತ್ ಡೇವಿಡ್ ವಾಯುನೆಲೆ ಇಸ್ರೇಲಿನ ಪ್ರಮುಖ ಮಿಲಿಟರಿ ನೆಲೆಯಾಗಿದ್ದು, ಹೈಫಾದ ಬಳಿಯಲ್ಲಿದೆ.
ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗುವ ತನಕವೂ ತಾನು ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಹೆಜ್ಬೊಲ್ಲಾ ಘೋಷಿಸಿದೆ. ಹೆಜ್ಬೊಲ್ಲಾ ಮತ್ತು ಹಮಾಸ್ ಎರಡಕ್ಕೂ ಇರಾನ್ ಆರ್ಥಿಕ ಮತ್ತು ಕಾರ್ಯತಂತ್ರದ ನೆರವು ಒದಗಿಸುತ್ತದೆ. ಹೆಜ್ಬೊಲ್ಲಾ ಇರಾನಿನ ವಿದೇಶಾಂಗ ನೀತಿಗಳಿಗೆ ಪೂರಕವಾಗಿರುವುದರಿಂದ, ಇರಾನ್‌ಗೆ ಹಮಾಸ್‌ಗಿಂತಲೂ ಹೆಚ್ಚು ಆಪ್ತವಾಗಿದೆ. ಆದ್ದರಿಂದ, ಇಸ್ರೇಲ್ ಮತ್ತು ಹೆಜ್ಬೊಲ್ಲಾ ಯುದ್ಧ ತೀವ್ರಗೊಂಡರೆ ಇರಾನ್ ಸಹ ಯುದ್ಧರಂಗಕ್ಕೆ ಇಳಿಯುವ ಅಪಾಯಗಳಿವೆ.
ಒಂದು ವೇಳೆ ಇರಾನ್ ಇದರಿಂದ ಹೊರಗುಳಿದರೂ, ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಯುದ್ಧ ಅತ್ಯಂತ ಹಿಂಸಾತ್ಮಕವಾಗಬಹುದು. ಹಮಾಸ್‌ಗೆ ಹೋಲಿಸಿದರೆ ಹೆಜ್ಬೊಲ್ಲಾ ದೊಡ್ಡದೂ, ಉತ್ತಮ ಆಯುಧಗಳನ್ನು ಹೊಂದಿದ ಸಂಘಟನೆಯೂ ಆಗಿದೆ. ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ಆಕ್ರಮಣ ನಡೆಸಿದರೆ, ಗಾಜಾದಲ್ಲಿ ಎದುರಾದುದಕ್ಕಿಂತ ಹೆಚ್ಚಿನ ಪ್ರತಿರೋಧ ಉಂಟಾಗಬಹುದು. ಆದರೆ, ಹೆಜ್ಬೊಲ್ಲಾ ಪ್ರಸ್ತುತ ಉದ್ವಿಗ್ನತೆಗಳನ್ನು ಕಡಿಮೆಗೊಳಿಸಲು ನಿರ್ಧರಿಸುವ ಸಾಧ್ಯತೆಗಳೂ ಇವೆ. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ಸಮಸ್ಯೆಗೆ ಸಿಲುಕಿರುವ ಲೆಬನಾನನ್ನು ಇನ್ನೊಂದು ಯುದ್ಧ ವಿನಾಶದ ಅಂಚಿಗೆ ತಳ್ಳಬಹುದು.
ಹೆಜ್ಬೊಲ್ಲಾಗೆ ಇರಾನಿನ ಬೆಂಬಲ ಅಗತ್ಯವಾಗಿದ್ದು, ಇರಾನಿನ ಪ್ರಾದೇಶಿಕ ಯೋಜನೆಗಳಿಗೆ ಅನುಗುಣವಾಗಿ ಅದು ನಡೆದುಕೊಳ್ಳಬೇಕಿದೆ. ಲೆಬನಾನ್ ಆರ್ಥಿಕತೆ ಕುಸಿದಿದ್ದು, ೮೫% ಜನತೆ ಬಡತನ ರೇಖೆಗಿಂತ ಕೆಳಗಿದ್ದಾರೆ. ಹೆಜ್ಬೊಲ್ಲಾ ಇಸ್ರೇಲನ್ನು ಕೆಣಕಿ, ತೀವ್ರ ದಾಳಿಗೆ ಹಾದಿ ಮಾಡಿದರೆ, ಲೆಬಾನೀಸ್ ಜನತೆ ಅದನ್ನು ಹಾನಿಕಾರಕ ಎಂದು ಪರಿಗಣಿಸಬಹುದು. ಒಂದು ಶಾಂತಿಯುತ ಪರಿಹಾರವಾಗಿ, ಹೆಜ್ಬೊಲ್ಲಾ ಲೆಬನಾನಿನ ದಕ್ಷಿಣ ಗಡಿಯಿಂದ ಹಿಂದೆ ಸರಿದರೆ, ಉತ್ತರ ಇಸ್ರೇಲ್ ಸಹಜತೆಗೆ ಮರಳಬಹುದು. ಇಸ್ರೇಲ್‌ಗೆ ಹಮಾಸ್ ಅನ್ನು ಪೂರ್ಣವಾಗಿ ಮೂಲೋತ್ಪಾಟನೆ ನಡೆಸಲಾಗದಂತೆ, ಹೆಜ್ಬೊಲ್ಲಾವನ್ನೂ ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವ ದಾಳಿಗಳು ಭವಿಷ್ಯದಲ್ಲಿ ಇನ್ನಷ್ಟು ಕೆಟ್ಟ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾದೀತು.