ಈರುಳ್ಳಿ ದರ ಕುಸಿತ: ರೈತರ ಕಣ್ಣಲ್ಲಿ ನೀರು
ಬೆಂಗಳೂರು: ಗ್ರಾಹಕರಿಗೆ ಕಣ್ಣೀರು ತರಿಸುತ್ತಿದ್ದ ಈರಳ್ಳಿ ಈ ಬಾರಿ ರೈತರ ಕಣ್ಣಲ್ಲಿ ನೀರು ಬರಿಸಿದೆ. ರಾಜ್ಯದ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಕನಿಷ್ಠ ಮಟಕ್ಕೆ ಕುಸಿದ ಪರಿಣಾಮ ರೈತರು ಕಂಗಲಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಕೆಜಿಗೆ ೧೦ ರೂ.ಗೆ ನಿಗದಿಯಾಗಿದೆ. ಉತ್ತಮ ಈರುಳ್ಳಿ ಕೆಜಿಗೆ ೨೦ ರೂ. ದರ ಇದೆ. ಕೆಲವು ಮಾರುಕಟ್ಟೆಗಳಲ್ಲಿ ಈ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರುಪೇರು ಇದೆ. ದರ ಕುಸಿತ ಈರುಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ.
ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಈರುಳ್ಳಿಯನ್ನು ಕೇಂದ್ರ ಸರ್ಕಾರ ಮಾರುಕಟ್ಟೆಗೆ ಹಠಾತ್ ಬಿಡುಗಡೆ ಮಾಡಿರುವುದರಿಂದ ದರ ಏಕಾಏಕಿ ಕುಸಿದಿದೆ. ಗೋದಾಮುಗಳಲ್ಲಿ ಸಂಗ್ರಹವಾಗಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ಪೂರೈಕೆ ಮಾಡಿ ನೂತನ ಈರುಳ್ಳಿ ಖರೀದಿಸಲು ಕೇಂದ್ರ ಸರ್ಕಾರ ಈ ಕ್ರಮ ಅನುಸರಿಸಿದೆ ಎಂದು ಈರುಳ್ಳಿ ಬೆಳೆಗಾರರು ಹೇಳಿದ್ದಾರೆ.
ರಾಷ್ಟ್ರದಲ್ಲಿ ಈರುಳ್ಳಿ ದರ ಕೆಜಿಗೆ ೧೫೦ ರೂ. ಏರಿಕೆಯಾಗಿದ್ದ ವೇಳೆ ಕೇಂದ್ರ ಸರ್ಕಾರ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಹೀಗಾಗಿ ವಿದೇಶಕ್ಕೆ ಈರುಳ್ಳಿ ರಫ್ತಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ.
ದರ ಕುಸಿತವಾಗಿರುವ ಹಿನ್ನೆಲೆಯಲ್ಲಿ ವರ್ತಕರು ಲೋಡುಗಟ್ಟಲೇ ಈರುಳ್ಳಿ ಖರೀದಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ ೧೫ ರಿಂದ ೨೦ ರೂ. ಇದೆ.