ಈಶ್ವರಪ್ಪ ಕೆರಳಿದ ಸಿಂಹ
ಶಿವಮೊಗ್ಗ: ತಮ್ಮ ಪುತ್ರನಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿರುವ ಬಿಜೆಪಿಯ ಕಟ್ಟಾಳು, ಕಟ್ಟರ್ ಹಿಂದುತ್ವವಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಕ್ಷರಶಃ ಕೆರಳಿದ ಸಿಂಹದಂತಾಗಿದ್ದಾರೆ.
ಇದೇ ನೋವಿನಲ್ಲಿರುವ ಅವರು, ತಮ್ಮ ಮುಂದಿನ ನಿರ್ಧಾರ ಕುರಿತು ಇದೇ ಮಾ. ೧೫ರಂದು ಶುಕ್ರವಾರ ಬೆಳಗ್ಗೆ ಸಾಗರದಲ್ಲಿ ಹಾಗೂ ಸಂಜೆ ೫ಕ್ಕೆ ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ತಮ್ಮ ಆಪ್ತರು ಅಭಿಮಾನಿಗಳು, ಕಾರ್ಯಕರ್ತರ ಸಭೆ ಕರೆದಿದ್ದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ಸಾಕಷ್ಟು ಬೇಸರದಲ್ಲಿರುವ ಈಶ್ವರಪ್ಪನವರು ಪ್ರಧಾನಿ ಮೋದಿಯೇ ನನ್ನ ನಾಯಕ ಎನ್ನುತ್ತಿದ್ದಾರೆ. ಅಲ್ಲದೆ ಪ್ರಾಣ ಹೋದರೂ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಮೋದಿ ಇದೇ ೧೮ರಂದು ಶಿವಮೊಗ್ಗಕ್ಕೆ ಬರಲಿದ್ದು, ಬಿಜೆಪಿಯವರ ಫ್ಲೆಕ್ಸ್‌ಗಳಲ್ಲಿ ಈಶ್ವರಪ್ಪನವರ ಫೋಟೋ ರಾರಾಜಿಸುತ್ತಿದೆ.
ಹಾಗಾದರೆ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಹೋಗುತ್ತಾರಾ ಅಥವಾ ಇಲ್ಲವಾ? ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸಬೇಕಾ ಅಥವಾ ಪಕ್ಷ ನಿಷ್ಠರಾಗಿ ಉಳಿದುಕೊಳ್ಳಬೇಕಾ ಎನ್ನುವ ಪ್ರಶ್ನೆಗೆ ಶುಕ್ರವಾರದ ಸಭೆ ಉತ್ತರಿಸಲಿದೆ. ಈ ಸಭೆ ಅತ್ಯಂತ ಕುತೂಹಲ ಮೂಡಿಸಿದ್ದು, ಈಶ್ವರಪ್ಪನವರ ನಿರ್ಧಾರದ ಮೇಲೆ ಶಿವಮೊಗ್ಗದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ.