ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈ ಬಾರಿ `ಗ್ಯಾರಂಟಿ' ಮುಂಗಡಪತ್ರ

10:52 AM Jan 13, 2024 IST | Samyukta Karnataka

ಕರ್ನಾಟಕದಿಂದ ಹೊಸ ರೂಪ ಪಡೆದುಕೊಂಡಿರುವ ಗ್ಯಾರಂಟಿ ರೂಪದ ಪ್ರಣಾಳಿಕೆಗಳನ್ನು ಅನುಸರಿಸಿ ಕೆಲವೊಂದು ನಿರ್ದಿಷ್ಟ ವರ್ಗಗಳಿಗೆ ನೇರವಾಗಿ ನೆರವು ಸಿಗುವಂತೆ ಮಾಡುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯನ್ನು ಯಾರೊಬ್ಬರೂ ತಳ್ಳಿಹಾಕುವಂತಿಲ್ಲ.

ಜನತಂತ್ರ ಪದ್ಧತಿಯಲ್ಲಿ ಚುನಾವಣೆಗೆ ಯಾವಾಗಲೂ ಹಬ್ಬದಂತಹ ಸಡಗರ. ಈ ಬಾರಿ ಫೆಬ್ರವರಿ ೧ರಂದು ಮಂಡನೆಯಾಗುವ ಕೇಂದ್ರ ಮುಂಗಡಪತ್ರದಲ್ಲಿ ಭರವಸೆಗಳ ಮೂಟೆಯೇ ಇರುವುದು ನಿರೀಕ್ಷಿತ. ಅನುಷಂಗಿಕವಾಗಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಂಡನೆಯಾಗುವ ಮುಂಗಡಪತ್ರಗಳ ಸ್ವರೂಪವೂ ಇದೇ. ಪಕ್ಷ ಹಾಗೂ ನಾಯಕತ್ವ ಬೇರೆಯಾದರೂ ವಿಭಿನ್ನ ರೀತಿಯ ನುಡಿಗಟ್ಟುಗಳೊಂದಿಗೆ ಭರವಸೆಗಳ ಸರಣಿಯನ್ನು ರೂಪಿಸುವ ವಿಚಾರದಲ್ಲಿ ಮಾತ್ರ ಸರ್ವಸಮ್ಮತ ಸಹಮತ.
ಭಾರತದ ರಾಜಕೀಯ ಹಣೆಬರಹವನ್ನು ನಿಷ್ಕರ್ಷಿಸಲಿರುವ ಲೋಕಸಭಾ ಚುನಾವಣೆ ಈ ವರ್ಷದ ಮೇ ತಿಂಗಳ ಒಳಗೆ ಮುಗಿಯಬೇಕು. ಚುನಾವಣೆಯಲ್ಲಿ ಜನಾದೇಶ ಪ್ರಾಪ್ತವಾಗುವ ಪಕ್ಷಕ್ಕೆ ಸರ್ಕಾರ ರಚನೆಯ ಅಧಿಕಾರದ ಸುಯೋಗ. ಇಂತಹ ಸುಯೋಗವನ್ನು ಬರಮಾಡಿಕೊಳ್ಳಲು ಮುಂಗಡಪತ್ರ ಒಂದು ರಾಜಮಾರ್ಗ. ಕರ್ನಾಟಕದಿಂದ ಹೊಸ ರೂಪ ಪಡೆದುಕೊಂಡಿರುವ ಗ್ಯಾರಂಟಿ ರೂಪದ ಪ್ರಣಾಳಿಕೆಗಳನ್ನು ಅನುಸರಿಸಿ ಕೆಲವೊಂದು ನಿರ್ದಿಷ್ಟ ವರ್ಗಗಳಿಗೆ ನೇರವಾಗಿ ನೆರವು ಸಿಗುವಂತೆ ಮಾಡುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯನ್ನು ಯಾರೊಬ್ಬರೂ ತಳ್ಳಿಹಾಕುವಂತಿಲ್ಲ. ಏಕೆಂದರೆ, ಕರ್ನಾಟಕದಲ್ಲಿ ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಜೊತೆಗೆ ಮನೆ ಯಜಮಾನಿಗೆ ೨ ಸಾವಿರ ರೂಪಾಯಿ ಭತ್ಯೆ, ನಿರುದ್ಯೋಗಿ ಯುವಕರಿಗೆ ೧೫೦೦ ರೂ.ನಿಂದ ೩ ಸಾವಿರ ರೂಪಾಯಿ ಭತ್ಯೆ ಕೊಡುತ್ತಿರುವುದರಿಂದ ಕೇಂದ್ರ ಸರ್ಕಾರ ಹಾಗೊಮ್ಮೆ ಇಂತಹ ಭತ್ಯೆಗಳನ್ನು ಬೇರೆ ಬೇರೆ ವರ್ಗದವರಿಗೆ ಘೋಷಿಸಿದರೆ ಆಗ ತಕರಾರು ಎತ್ತುವುದು ಕಷ್ಟವೇ. ಇನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡಾ ಗ್ಯಾರಂಟಿಗಳ ಯಶಸ್ಸಿನ ನಂತರ ಎರಡನೆಯ ಕಂತಾಗಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ರೂಪಿಸುವ ಸಾಧ್ಯತೆಗಳು ಇಲ್ಲದಿಲ್ಲ. ಸಿದ್ದರಾಮಯ್ಯನವರಿಗಿರುವ ಒಂದೇ ಸಮಸ್ಯೆ ಎಂದರೆ ಹಣಕಾಸಿನ ಮುಗ್ಗಟ್ಟು. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕಷ್ಟಪಡುತ್ತಿರುವಾಗ ಹೊಸ ಯೋಜನೆಗಳಿಗೆ ಹಣ ಎಲ್ಲಿಂದ ಪೂರೈಸಬೇಕು ಎಂಬ ಸವಾಲು ಅಗ್ನಪರೀಕ್ಷೆಯಂತೆ ಕಾಡುವುದಂತೂ ಖಂಡಿತ.
ಕೇಂದ್ರ ಸರ್ಕಾರದ ಈ ಬಾರಿಯ ಮುಂಗಡಪತ್ರ ಲೇಖಾನುದಾನ ಸ್ವರೂಪದ್ದು. ಏಕೆಂದರೆ, ಚುನಾವಣೆಯ ನೆರಳಿನಲ್ಲಿ ಮಂಡನೆಯಾಗುವ ಮುಂಗಡಪತ್ರಕ್ಕೆ ಪೂರ್ಣ ಪ್ರಮಾಣದ ಹಣಕಾಸು ವೆಚ್ಚದ ಜವಾಬ್ದಾರಿ ಹೊರಿಸುವುದು ಅನೈತಿಕ. ಇದು ಮೊದಲಿನಿಂದಲೂ ಪರಿಪಾಲಿಸಿಕೊಂಡು ಬಂದಿರುವ ಪದ್ಧತಿ. ಹಾಗೊಮ್ಮೆ ಚುನಾವಣೆಯ ನಂತರ ಮುಂದೆ ಬರುವ ಸರ್ಕಾರ ಈ ಮಧ್ಯಂತರ ಮುಂಗಡಪತ್ರದ ಯೋಜನೆಗಳನ್ನು ಕೈಬಿಟ್ಟು ಅಥವಾ ಮಾರ್ಪಾಟು ಮಾಡಿ ಪ್ರತ್ಯೇಕವಾದ ಮುಂಗಡಪತ್ರ ಮಂಡಿಸುವ ಅವಕಾಶವೂ ಇದೆ. ಹೀಗಾಗಿ ತಾತ್ಪೂರ್ತಿಕವಾಗಿ ಮಂಡನೆಯಾಗುವ ಈ ಮುಂಗಡಪತ್ರಕ್ಕೆ ವೈಚಾರಿಕತೆಯ ಲೇಪವಿದ್ದರೂ ಆಚಾರವಂತಿಕೆಗೆ ಹೆಚ್ಚಿನ ಒತ್ತು.
ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೆ ಬಂದು ವಸೂಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಮುಂಗಡಪತ್ರಗಳ ಗಾತ್ರ ಅದಕ್ಕೆ ಹೊಂದುವಂತೆ ಹೆಚ್ಚಳವಾಗುತ್ತಿರುವುದು ಒಂದು ರೀತಿಯಲ್ಲಿ ದೇಶದ ಆರ್ಥಿಕ ಸ್ಥಿತಿಯ ಲವಲವಿಕೆಯ ದಿಕ್ಸೂಚಿ. ತೆರಿಗೆ ಸಂಗ್ರಹಣೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನಿರುದ್ಯೋಗದ ಬವಣೆ ಹಾಗೂ ಅರೆ ಉದ್ಯೋಗದ ಸಂಕಟ ಯುವಕರನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಸ್ಥಿತಿಯಲ್ಲಿ ಸರ್ಕಾರಗಳು ಇಲ್ಲ. ಏಕೆಂದರೆ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾವಂತ ಯುವಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಸರ್ಕಾರಿ ಉದ್ಯೋಗಗಳ ನೇಮಕಾತಿ ಬಹುತೇಕ ಸ್ಥಗಿತಗೊಂಡಿರುವಾಗ ಖಾಸಗಿ ವಲಯದ ಉದ್ಯೋಗಗಳನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರಗಳು ಮುಂಗಡಪತ್ರದ ಮೂಲಕ ನಿರುದ್ಯೋಗ ಬವಣೆಯ ನಿವಾರಣೆಗೆ ಪರಿಹಾರ ಸೂತ್ರ ರೂಪಿಸುವ ನಿಟ್ಟಿನಲ್ಲಿ ನೀತಿ ಆಯೋಗ ಹಾಗೂ ಹಣಕಾಸು ಆಯೋಗಗಳ ಜೊತೆ ಸಮಾಲೋಚಿಸಿ ನಿರ್ಧಾರವನ್ನು ಪ್ರಕಟಿಸಿದರೆ ಅದು ನಿಜವಾದ ಅರ್ಥದಲ್ಲಿ ದೇಶದ ಹಣೆಬರಹವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಈ ಬಾರಿಯ ಮುಂಗಡಪತ್ರದಲ್ಲಿ ಇಂತಹ ಗ್ಯಾರಂಟಿ ಗುಣ ಇದ್ದರೆ ಅದು ಸ್ವಾಗತಾರ್ಹ ಬೆಳವಣಿಗೆ.

Next Article