For the best experience, open
https://m.samyuktakarnataka.in
on your mobile browser.

ಈ ರಾಮ ಆರಾಮ

04:05 PM Jan 24, 2024 IST | Samyukta Karnataka
ಈ ರಾಮ ಆರಾಮ

ವಿಶ್ವ ದಿನ ಪತ್ರಿಕೆಯಲ್ಲಿ ಭವಿಷ್ಯ ಓದುತ್ತಿದ್ದ. “ಮಡದಿಯಿಂದ ಮಹಾ ರಗಳೆ” ಎಂದಿತ್ತು, ಅದೇ ಸಮಯಕ್ಕೆ ವಿಶಾಲು ಬಿಸಿ ಬಿಸಿ ಕಾಫಿಯನ್ನು ತಂದು ಅವನ ಮುಂದಿಟ್ಟು ಮುಗುಳ್ನಗುತ್ತ ನಿಂತಳು. ವಿಶ್ವ ಓದುತ್ತಿದ್ದ ಪೇಪರನ್ನು ಸರಿಸಿ, ಹರಿಹರನ ರಗಳೆ ಮನೆ ಒಳಗೆ ಬರಬಾರದು, ಈಗ ಹೊಗಳಬೇಕು ಎಂದು ತೀರ್ಮಾನಿಸಿ,
“ವಾವ್! ಇದು ಕಾಫಿ ಅಲ್ಲ, ಅಮೃತ, ಏನ್ ಘಮಘಮ, ನಿನ್ನ ಕಾಫಿ ಕುಡಿತಾ ಇದ್ರೆ ಕಾಲುಗಳು ಇದ್ದಲ್ಲೇ ಕುಣಿದಾಡ್ತಾ ಚಿಕ್ಕಮಗಳೂರು ಬೆಟ್ಟ ಹತ್ತು ಅಂತ ಹೇಳುತ್ತೆ ವಿಶಾಲು” ಎಂದು ರೈಲು ಹತ್ತಿಸಿದ.
“ಆಯ್ತು, ಕಾಲುಗಳನ್ನ ಮೂಳೆ ಡಾಕ್ಟರ್‌ಗೆ ತೋರಿಸೋಣ” ಎಂದ ವಿಶಾಲು ಕಣ್ಣಲ್ಲೇ ನಕ್ಕಳು.
“ಖುಷಿಯಾಗಿದ್ದೀನಿ, ಏನ್ ಬೇಕು ಕೇಳು, ಸ್ಯಾಂಕ್ಷನ್ ಮಾಡ್ತೀನಿ” ಎಂದ.
“ರಾಮನನ್ನು……. ರಾಮಾನನ್ನು …….”
“ರಾಮ ನನ್ನ ಬ್ರೋವರಾ ಕೀರ್ತನೆ……. ತ್ಯಾಗರಾಜರು ಸಿಕ್ಕಿದ್ರಾ?”
“ಹರಿಕಾಂಭೋಜಿ ರಾಗ ನಂತೆ”
“ಆಲಾಪನೆ ಮಾಡದೆ ನೇರವಾಗಿ ಚರಣಕ್ಕೆ ಬಾ” ಎಂದ ವಿಶ್ವ.
“ರಾತ್ರಿ ಕನಸಲ್ಲಿ ವಿಶ್ವಾಮಿತ್ರ ಮಹರ್ಷಿ ಕಾಣಿಸಿಕೊಂಡಿದ್ದರು. ನನ್ನ ತೋರಿಸಿ ಅವಳೇ ತಾಟಕಿ, ಹೂಡು ಅವಳಿಗೆ ಬಾಣ ಅಂದ್ರು, ರಾಮ ನನ್ನತ್ತ ಬಾಣ ಹೂಡಿದ, ನಾನು ಹೆದರಿ ದಿಗ್ಗನೆ ನಿದ್ದೆಯಿಂದ ಎದ್ದು ಕೂತೆ” ಎಂದು ಗಾಬರಿಯಿಂದ ಹೇಳಿದಳು.
“ತಾಟಕಿ ಅಂತ ಮಹರ್ಷಿಗಳು ಹೇಳಿದ ಮೇಲೆ ಆ ಮಾತು ಸುಳ್ಳಲ್ಲ ವಿಶಾಲು” ಎಂದು ರೇಗಿಸಿದ.
“ಅಯೋಧ್ಯೆಗೆ ನಾನು ಹೋಗಬೇಕು ಕಣ್ರೀ”
“ಈಗ ರಶ್ ಜಾಸ್ತಿ, ಶ್ರೀರಾಮ ಮೂರು ಶಿಫ್ಟಲ್ಲಿ ದರ್ಶನ ಕೊಡ್ತಿದ್ದಾನೆ” ಎಂದ.
“ನನ್ನ ನೀವು ಕಳಿಸಿಕೊಡ್ಲೇಬೇಕು” ಎಂದು ಹಟ ಹಿಡಿದಳು.
“ಅಯೋಧ್ಯೆಗೆ ಯರ‍್ಯಾರು ಹೋಗ್ತಾ ಇದ್ದೀರಾ?” ಎಂದು ವಿಶ್ವ ಕೇಳಿದ.
“ನಮ್ಮ ಕಿಟ್ಟಿ ಪಾರ್ಟಿ ಮೀಟಿಂಗ್‌ನಲ್ಲಿ ಒಟ್ಟು ೩೦ ಜನ ಲೇಡೀಸ್ ಇದ್ದೀವಿ”.
“೩೦ ಜನ ಲೇಡೀಸಲ್ಲಿ ಹೆಂಗಸರು ಎಷ್ಟು ಮಂದಿ?” ಎಂದು ಪ್ರಶ್ನಿಸಿ ನಾಲಿಗೆ ಕಚ್ಚಿಕೊಂಡ.
“ಲೇಡೀಸ್ ಅಂದ್ರೇನು?”
“ರೇಶ್ಮೆ ಸೀರೆ ಉಟ್ಕೊಂಡು ಅರಶಿನ, ಕುಂಕುಮ ಹಚ್ಕೊಂಡು ಭಯ ಭಕ್ತಿಯಿಂದ ದೇವಾಲಯಕ್ಕೆ ಹೋಗೋ ಮಾತೆಯರು”.
“ಅದು ನನಗೆ ಗೊತ್ತಿಲ್ಲ, ೧೫ ಜನ ಮಾತ್ರ ಅಯೋಧ್ಯೆಗೆ ಬರ‍್ತೀವಿ ಅಂತ ಹೇಳಿದ್ದಾರೆ” ಎಂದಳು ವಿಶಾಲು.
“ಮಿಕ್ಕ ೧೫ ಜನ ಯಾಕ್ ಹೊಗ್ತ ಇಲ್ಲ? ಅವರಿಗೆ ರಾಮನ್ನ ಕಂಡ್ರೆ ಆಗೋಲ್ವೇನು? ಶತ್ರು ಪಕ್ಷದವರಾ?”
“ಹಾಗಲ್ಲ ರೀ, ಮಿಕ್ಕ ೧೫ ಜನಕ್ಕೆ ಅಯೋಧ್ಯೆಗೆ ಬನ್ನಿ ಅಂತ ಇನ್ವಿಟೇಷನ್ ಬರಲಿಲ್ವಂತೆ” ಎಂದಾಗ ವಿಶ್ವ ಜೋರಾಗಿ ನಕ್ಕ. ದೇವರ ದರ್ಶನದಲ್ಲಿ ರಾಜಕೀಯ ನುಸುಳಿದ್ದು ಟೀವಿ ಪ್ರಭಾವದಿಂದ ಎಂದುಕೊಂಡ.
“ಅಲ್ಲ, ದೇವರ ಹತ್ತಿರ ಹೋಗೋಕೆ ಇನ್ವಿಟೇಷನ್ ಬೇಕಾ? ಈ ಜಗತ್ತಿಗೆ ಬರೋದಕ್ಕೆ ಇನ್ವಿಟೇಷನ್ ಬೇಡ, ಸತ್ತ ಮೇಲೆ ಸ್ವರ್ಗಕ್ಕೆ ಹೋಗೋದಕ್ಕೆ ಪಾಸಪೋರ್ಟ್ ಬೇಡ, ಈ ಮಧ್ಯೆ ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮನ ದರ್ಶನಕ್ಕೆ ಇನ್ವಿಟೇಷನ್ ಬೇಕಾ? ೩ ಕೇಜಿ ತೂಕದ ಮನುಷ್ಯನ ತಲೇಲಿ ೧೦೦ ಗ್ರ್ಯಾಂ ಬುದ್ಧಿ ಬೇಡ್ವಾ?”
“ಯಾರ್ ಯಾರಿಗೋ ಇನ್ವಿಟೇಷನ್ ಬಂದಿದೆ, ನಮಗೇ ಬಂದಿಲ್ಲ ಅಂತ ಕೆಲವರು ಗೊಣಗ್ತಾ ಇದ್ರು”
“ದೇವರು ಇನ್ವಿಟೇಷನ್ ಕೊಟ್ರೆ ಒಂದೇ ಸಲ ಮೇಲಕ್ಕೆ ಕರೆಸಿಕೊಂಡ್ ಬಿಡ್ತಾನೆ, ಇಲ್ಲಿ ಜಂಪ್ ಹೊಡೆದ್ರೆ ಸೀದಾ ಕ್ಷೀರಸಮುದ್ರದೊಳಕ್ಕೆ ಡೀಪ್ ಡೈವ್”
“ಅವರು ಬರದಿದ್ರೆ ಕತ್ತೆ ಬಾಲ, ನಾವು ೧೫ ಮಂದಿ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಮಾಡ್ಕೊಂಡ್ ಬರೋದು ಗ್ಯಾರಂಟಿ” ಎಂದಳು. ವಿಶ್ವನಿಗೆ ಖುಷಿ ಆಯ್ತು.
“ರೀ ಒಂದು ಡೌಟು, ಮನೇಲಿ ಹೇಳ್ದೇನೇ ಶ್ರೀರಾಮ ಸೀತೇನಾ ಮದುವೆ ಆದ್ನಂತೆ ಹೌದೇನ್ರೀ?”
“ಗುರುಗಳಾದ ವಿಶ್ವಾಮಿತ್ರರ ಜೊತೆ ಕಾಡಿಗೆ ಬಂದ ರಾಮ ಲಕ್ಷö್ಮಣರು ದುಷ್ಟರನ್ನ ಬಲಿ ಹಾಕಿದರು. ಆನಂತರದ ದಿನಗಳಲ್ಲಿ ಜನಕ ಮಹಾರಾಜ ಸೀತೆಗೆ ಸ್ವಯಂವರ ಏರ್ಪಡಿಸಿದ. ಘಟಾನುಘಟಿಗಳು ಸ್ವಯಂವರಕ್ಕೆ ಬಂದಿದ್ರು, ರಾಜರು, ರಾಜಕುಮಾರರು, ಮಾಂಡಲೀಕರೆಲ್ಲ ಹಾಜರಿದ್ರು, ಯಾರ ಕೈಲೂ ಶಿವಧನಸ್ಸನ್ನ ಎತ್ತೋಕ್ ಆಗ್ಲಿಲ್ಲ. ಆಗ ವಿಶ್ವಾಮಿತ್ರ ರಾಮನ ಕಡೆಗೆ ನೋಡಿದ, ನಿನ್ನ ಕೈಯಲ್ಲಿ ಆಗುತ್ತೆ ಹೋಗು ಬಿಲ್ಲನ್ನು ಎತ್ತು ಎಂದ. ರಾಮ ಗುರುವಾಜ್ಞೆಯನ್ನ ಪಾಲಿಸಿದ”.
“ರಾಮನ ಕೈಯಲ್ಲಿ ಆಗುತ್ತೆ ಅಂತ ವಿಶ್ವಾಮಿತ್ರರಿಗೆ ಹೆಂಗ್ ಗೊತ್ತಿತ್ತು?”
“ಇದಕ್ಕೆ ಉತ್ತರ ನಾನು ಹೇಳಲ್ಲ ಖ್ಯಾತ ಚಿಂತಕರೂ, ಬರಹಗಾರರೂ, ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರೂ ಆಗಿದ್ದ ಲಾಂಗುಲಾಚಾರ್ಯರವರು ಹೇಳಿದ್ದಾರೆ”
“ಏನಂತ ಹೇಳಿದ್ದಾರೆ”
“ಅವರು ಪುರಾಣಗಳ ಬಗ್ಗೆ ಅಧ್ಯಯನ ಮಾಡಿದವರು, ಅವರು ತಮಾಷೆಯ ಸಾಲುಗಳಲ್ಲಿ ಹೇಳ್ತಾರೆ, ಅದು ಬಹಳ ಪುರಾತನವಾದ ಶಿವಧನಸ್ಸು, ಶಿವ ಅದನ್ನು ಉಪಯೋಗಿಸೋದನ್ನ ಬಿಟ್ಟು ಎಷ್ಟೋ ಶತಮಾನಗಳಾಗಿತ್ತು, ಅದು ಒಳಗೇ ತುಕ್ಕು ಹಿಡಿದಿತ್ತು, ಎತ್ತಿದ ಕೂಡ್ಲೇ ಮರ‍್ದೋಗುತ್ತೆ ಅಂತ ವಿಶ್ವಾಮಿತ್ರನಿಗೆ ಗೊತ್ತಿತ್ತು. ಹೀಗಾಗಿ ರಾಮನಿಗೆ ಧೈರ್ಯ ತುಂಬಿದರು. ರಾಮ ಶಿವಧನಸ್ಸನ್ನು ಎತ್ತಿದ ಕೂಡಲೇ ಲೊಟಕ್ ಅಂತ ಮುರಿಯಿತು, ಸೀತಾ ರಾಮರ ಕಲ್ಯಾಣವಾಯ್ತು”
“ರೀ ಇನ್ನೊಂದು ಅನುಮಾನ ಕಣ್ರೀ, ರಾಮನ ಜೊತೆ ಸೀತೆ ಕಾಡಿಗೆ ಹೋಗೋಷ್ಟಿರಲಿಲ್ಲ ಅಲ್ಲವಾ?”
“ಕೈಕೇಯಿ ಕಂಡೀಷನ್ ಪ್ರಕಾರ ರಾಮ ೧೪ ವರ್ಷ ಕಾಡು ಸೇರ‍್ತಾನೆ, ಆಗ ಅರಮನೇಲಿ ಸೀತೆ ಒಬ್ಬಳೇ ಆಗ್ತಾಳೆ, ಒಬ್ಬ ಅತ್ತೆ ಕಾಟ ಸಹಿಸೋದೇ ಕಷ್ಟ. ಅಂತಾದ್ರಲ್ಲಿ ಮೂವರು ಅತ್ತೆಯರ ಕೈಯಲ್ಲಿ ಸಿಕ್ಕಿ ಬಿದ್ದರೆ ನಿತ್ಯ ಇಡ್ಲಿಗ್ ರುಬ್ಬು, ದೋಸೆಗ್ ರುಬ್ಬು ಅಂತ ಹೇಳಿ ರುಬ್ಹಾಬಕ್ ಬಿಡ್ತಾರೆ ಅನ್ನೋ ಭಯಕ್ಕೆ ರಾಮನ ಹಿಂದೆ ಸೀತೆ ಹೊರಟು ಬಿಟ್ಟಳಂತೆ”. ಎಂದು ವಿಶ್ವ ನಗೆ ಲೇಖನವೊಂದನ್ನು ವಿವರಿಸಿದಾಗ ವಿಶಾಲು ನಕ್ಕಳು.
“ಕಡೇ ಅನುಮಾನ ಒಂದಿದೆ, ಸೀತೆ ಕಾಡಿಗೆ ಹೊರಟಾಗ ಹೆಚ್ಚಿನ ಒಡವೆ, ರೇಷ್ಮೆ ವಸ್ತ್ರ, ಆಭರಣಗಳನ್ನ ಅರಮನೆಯಲ್ಲೇ ಬಿಟ್ಟು, ನಾರು ಮಡಿ ಉಟ್ಟು ಹೋದಳು, ಆದರೆ ಕಾಡಲ್ಲಿ ಬಂಗಾರದ ಜಿಂಕೆಗೆ ಯಾಕೆ ಆಸೆ ಪಟ್ಟಳು?”
“ಇದು ಲೇಡೀಸ್‌ಗೆ ಬರೋ ಗೋಲ್ಡ್ ಮೇನಿಯಾ ಕಾಯಿಲೆ. ಯಾವತ್ತೂ ಬಂಗಾರಕ್ಕೆ ಆಸೆ ಪಡದ ಸೀತೆ ಬಂಗಾರದ ಜಿಂಕೆಗೆ ಆಸೆ ಪಟ್ಟ ದಿನ ಯಾವುದು ಗೊತ್ತಾ? ಅಂದೇ ಅಕ್ಷಯ ತದಿಗೆ! ಆ ದಿನ ಮಹಿಳಾ ಮಣಿಗಳಿಗೆ ಬಂಗಾರದ ಸೆಳೆತ ಇರುವ ದಿನ. ಇದು ನನ್ನ ಸಂಶೋಧನೆ” ಎಂದಾಗ ವಿಶಾಲು,
“ಅಯೋಧ್ಯೆಗೆ ನನ್ನ ಕಳಿಸಿಕೊಡಿ” ಎಂದಳು.
“ಅಯೋಧ್ಯೆಗೆ ಮರಳಿ ಬಂದ ರಾಮನ್ನ ನೋಡಿದರೆ ನಮ್ಮೆಲ್ಲರ ಪಾಪ ಪರಿಹಾರವಾಗಿ ಅನಂತ ಸುಖ ಪ್ರಾಪ್ತಿಯಾಗುತ್ತೆ. ಅದ್ಸರಿ ಎಷ್ಟು ಬೇಕು ಹಣ ದಾರಿ ಖರ್ಚಿಗೆ?”
“ದುಡ್ಡು ಬೇಡ ಕಣ್ರಿ”
“ಖರ್ಚುಗಳನ್ನ ಮುಜರಾಯಿ ಇಲಾಖೆ ಸ್ಪಾನ್ಸರ್ ಮಾಡುತ್ತಾ?”
“ಇಲ್ಲ, ಉಜ್ಜೋಕೆ ನಿಮ್ಮ ಕ್ರೆಡಿಟ್ ಕಾರ್ಡ್ ತಗೊಂಡಿದ್ದೀನಿ ಸಾಕು” ಎಂದಾಗ ವಿಶ್ವನಿಗೆ ಶಾಖ್ ಆಗಿ “ರಾಮ ರಾಮ” ಎಂದ.