ಉಗ್ರಬೆದರಿಕೆಗಳನ್ನು ಮೆಟ್ಟಿನಿಂತು ನಾವು ಮುನ್ನಡೆಯುತ್ತಿದ್ದೇವೆ
ಬೆಂಗಳೂರು: ಭಯೋತ್ಪಾದಕರ ಗುರಿ ಯಾರತ್ತ ಇರುತ್ತದೆ ಎಂಬುದನ್ನು ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ತನಿಖೆ ಬಹಿರಂಗಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಷ್ಟ್ರೀಯ ಹಿತಾಸಕ್ತಿ ತನ್ನ ಪರಮ ಆದ್ಯತೆಯನ್ನಾಗಿಸಿಕೊಂಡಿರುವ ಕರ್ನಾಟಕ ಬಿಜೆಪಿ ಹಾಗೂ ರಾಷ್ಟ್ರ ಭಕ್ತ ಸಂಘಟನೆಗಳ ಮೇಲೆ ದಾಳಿ ನಡೆಸುವುದು ದೇಶ ಕಂಟಕ ಉಗ್ರಸಂಘಟನೆಗಳ ಮುಂಚೂಣಿ ಯೋಜನೆಯಾಗಿರುತ್ತದೆ ಎಂಬುದನ್ನು ಅನೇಕ ಘಟನೆಗಳು ತೋರಿಸಿಕೊಟ್ಟಿವೆ. ಇಂಥಾ ಉಗ್ರಬೆದರಿಕೆಗಳನ್ನು ಮೆಟ್ಟಿನಿಂತು ನಾವು ಮುನ್ನಡೆಯುತ್ತಿದ್ದೇವೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಅಜೆಂಡಾ, ಅಧಿಕಾರಕ್ಕಾಗಿ ಮತಬ್ಯಾಂಕ್ ರಾಜಕಾರಣವಾದರೆ ಬಿಜೆಪಿ ಮಿತ್ರ ಪಕ್ಷಗಳ ಕಾರ್ಯಸೂಚಿ ರಾಷ್ಟ್ರ ರಕ್ಷಣೆ ಹಾಗೂ ಅಭಿವೃದ್ಧಿಯ ಚಿಂತನೆಯಾಗಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಭಯೋತ್ಪಾದಕ ಚಟುವಟಿಕೆಗಳಿಗೆ ತಾಣವಾಗುತ್ತದೆ, ಅಪರಾಧಗಳು ತಲೆ ಎತ್ತಲು ಮುಕ್ತವಾಗಿರುತ್ತದೆ ಎಂಬ ಆರೋಪಗಳಲ್ಲಿ ಹುರುಳಿರುವುದನ್ನು ಸಂಭವಿಸುವ ಘಟನೆಗಳು ಸಾಕ್ಷಿ ಹೇಳುತ್ತವೆ. ಕಳೆದ ಒಂದೂವರೆ ವರುಷದ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಸಾಕ್ಷಿಯಾಗಿ ಸಂಭವಿಸಿರುವ ಅನೇಕ ದುರ್ಘಟನೆಗಳು ನಮ್ಮ ಮುಂದಿವೆ, ಅಭಿವೃದ್ಧಿಯತ್ತ ಒಂದೇ ಒಂದು ಹೆಜ್ಜೆ ಇಡದ ಭ್ರಷ್ಟ ಹಗರಣಗಳ ಸರಮಾಲೆ ಹೊತ್ತ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯ ವಿಷಯದಲ್ಲಾದರೂ ಜನರಿಗೆ ನೆಮ್ಮದಿ ಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಿ ಎಂದಿದ್ದಾರೆ.