ಉಗ್ರ ಅಕ್ಬರ ಪಾಷಾ ಬೆಳಗಾವಿ ಜೈಲಿಗೆ ಶಿಫ್ಟ್
ಬೆಳಗಾವಿ: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಚಿತ್ರನಟ ದರ್ಶನ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂಬ ವದಂತಿ ಜೋರಾಗಿರುವಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ನಟೋರಿಯಸ್ ಉಗ್ರನನ್ನು ನಾಗಪುರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗ್ರಹಕ್ಕೆ ಶಿಫ್ಟ್ ಮಾಡಲಾಗಿದೆ.
ಅಕ್ಬರ್ ಪಾಷಾ ಎಂಬ ಉಗ್ರನೇ ಬೆಳಗಾವಿ ಹಿಂಡಲಗಾ ಕಾರಾಗ್ರಹಕ್ಕೆ ರವಾನೆಯಾಗಿರುವ ವ್ಯಕ್ತಿ. ಈತನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಇದ್ದು, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ ಗಡ್ಕರಿ ಅವರಿಗೆ ಕೊಲೆ ಬೆದರಿಕೆಯನ್ನ ಹಾಕಿದ ಜಯೇಶ ಪೂಜಾರಿ ಈತನ ಆಪ್ತ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈತನ ಸೂಚನೆಯಂತೆ ೨೦೦ ಕೋಟಿ ರೂ, ನೀಡುವಂತೆ ಜಯೇಶ ಗಡ್ಕರಿಯವರಿಗೆ ಬೆದರಿಕೆ ಹಾಕಿದ್ದಾಗಿ ತನಿಖಾ ತಂಡದ ಮುಂದೆ ತಪ್ಪೊಪ್ಪಿಕೊಂಡಿದ್ದನೆಂದು ಹೇಳಲಾಗಿದೆ.
ಇತ್ತೀಚಗೆ ಬೆಳಗಾವಿ ನ್ಯಾಯಾಲಯದಲ್ಲಿ ಹಾಜರಾಗಲು ಬಂದಿದ್ದಾಗಲೇ ಆರೋಪಿ ಜಯೇಶ ಪೂಜಾರಿ ಪಾಕ್ ಪರ ಘೋಷಣೆ ಕೂಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಜಯೇಶ್ ಪೂಜಾರಿಯನ್ನು ಕೆಲ ದಿನಗಳ ಹಿಂದೆಯೇ ಹಿಂಡಲಗಾಗೆ ರವಾನಿಸಿದ್ದ ನಾಗ್ಪುರ್ ಪೊಲೀಸರು. ಈಗ ಉಗ್ರ ಅಕ್ಬರ್ ಪಾಷಾನನ್ನು ನಾಗ್ಪುರ್ ಕೇಂದ್ರ ಕಾರಾಗೃಹದಿಂದ ವಿಮಾನದ ಮೂಲಕ ಬೆಳಗಾವಿಗೆ ಕರೆತಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಿದ್ದಾರೆ. ಅಕ್ಬರ್ ಪಾಷಾ ಬೆಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.