For the best experience, open
https://m.samyuktakarnataka.in
on your mobile browser.

ಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ

12:08 PM Jul 09, 2024 IST | Samyukta Karnataka
ಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ

ಒಂದೆರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಿನ್ನೆ ಹೆಚ್ಚು ಮಳೆಯಾದ ಕಾರಣ ಇಂದು ಶಾಲಾ‌, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

ಬೆಂಗಳೂರು: ಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂದರೆ ರಸ್ತೆಯ ಮೇಲೆ ನೀರು ನಿಲ್ಲುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ತೀವ್ರ ಮಳೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತ ವತಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮುಂಚಿತವಾಗಿಯೇ ಉಡುಪಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಜೊತೆಗೆ ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯಬೇಕು ಎಂದು ಸೂಚಿಸಲಾಗಿತ್ತು. ಬೀಳುವ ಹಂತದಲ್ಲಿದ್ದ ಸುಮಾರು 400 ಮರಗಳನ್ನು ಕಡಿಯಲಾಗಿದ್ದು, 80 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದೆ. ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಈ ಪ್ರದೇಶದಿಂದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷ ಮಳೆಯಿಂದಾಗಿ ಎದುರಿಸಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ‌ ಎಚ್ಚರಿಕೆ ವಹಿಸಲಾಗಿದೆ. ಗುಡ್ಡ ಕುಸಿತದಿಂದ ಕೆಲವು ಮನೆಗಳಿಗೆ ಹಾನಿ‌ ಉಂಟಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ತ್ವರಿತಗತಿಯಲ್ಲಿ ಪರಿಹಾರ ನೀಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂದರೆ ರಸ್ತೆಯ ಮೇಲೆ ನೀರು ನಿಲ್ಲುತ್ತದೆ. ನಾನು ಉಸ್ತುವಾರಿ ಸಚಿವೆಯಾದ ನಂತರದಲ್ಲಿ ಒಳಚರಂಡಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಒಂದೆರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಿನ್ನೆ ಹೆಚ್ಚು ಮಳೆಯಾದ ಕಾರಣ ಇಂದು ಶಾಲಾ‌, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದಿದ್ದಾರೆ.