For the best experience, open
https://m.samyuktakarnataka.in
on your mobile browser.

ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಭಟ್ ನಿರ್ಧಾರ

05:06 PM May 13, 2024 IST | Samyukta Karnataka
ಪರಿಷತ್ ಚುನಾವಣೆ  ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಭಟ್ ನಿರ್ಧಾರ

ಉಡುಪಿ: ವಿಧಾನ ಪರಿಷತ್ ಸ್ಪರ್ಧೆ ಆಕಾಂಕ್ಷಿಯಾಗಿದ್ದು, ಟಿಕೆಟ್ ಕೈತಪ್ಪಿದ ಬಳಿಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಉಡುಪಿಯ ಬಿಜೆಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಸೋಮವಾರ ಕರಂಬಳ್ಳಿಯ ತನ್ನ ನಿವಾಸದಲ್ಲಿ ತುರ್ತು ಸುದ್ದಿಗೋಷ್ಟಿ ಕರೆದು ಈ ಮಾಹಿತಿ ನೀಡಿದ್ದಾರೆ.
ನೈಋತ್ಯ ಪದವಿಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಅವರು ಪ್ರಕಟಿಸಿದರು. ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತೇನೆ. ಸೋತರೂ ಬಿಜೆಪಿಯಲ್ಲೇ ಇರುತ್ತೇನೆ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯ ಅಥವಾ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ. ನನಗಾಗಿ, ಜನರ ಸೇವೆಗಾಗಿ ಕೆಲಸ ಮಾಡಲು ಈ ನಿರ್ಧಾರ ಮಾಡಿದ್ದೇನೆ ಎಂದು ಭಟ್ ಸ್ಪಷ್ಟಪಡಿಸಿದರು.
ಕರಾವಳಿ ಜಿಲ್ಲೆಗಳಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ಪಕ್ಷ ವರಿಷ್ಠರು ಟಿಕೆಟ್ ನೀಡುವ ಭರವಸೆ ನೀಡಿದ್ದರು. ಈಗ ಅವರ ನಿರ್ಧಾರ ಬದಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ‌ ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಟಿಕೆಟ್ ಸಿಕ್ಕಿದೆ. ಹಾಗಾಗಿ ಜನರೊಂದಿಗೆ ಇದ್ದು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿರುವುದಾಗಿ ರಘುಪತಿ ಭಟ್ ಹೇಳಿದರು. ಅದಕ್ಕೂ ಮುನ್ನ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ರಘುಪತಿ ಭಟ್ ಅವರನ್ನು ಭೇಟಿ‌ ಮಾಡಿ ಮನವೊಲಿಸಲು ಯತ್ನಿಸಿದ್ದರು.