ಉತ್ತಮರ ಆಯ್ಕೆಗೆ ಸ್ವಾಮೀಜಿಗಳು ಕೈಜೋಡಿಸಲಿ
ಗದಗ: ಉನ್ನತ ವ್ಯಾಸಂಗ ಮಾಡಿದ್ದರೂ ಅಪ್ಪಟ ಗ್ರಾಮೀಣ ಸೊಗಡು ಮೈಗೂಡಿಸಿಕೊಂಡು ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್ ಬಗ್ಗೆಯೇ ಸದಾಕಾಲ ಚಿಂತನೆ ನಡೆಸುವ ಹಿರಿಯ ಸಹಕಾರಿ ಧುರೀಣ, ಮಾಜಿ ಶಾಸಕ ಡಿ.ಆರ್. ಪಾಟೀಲ ಹಳೆಯ ಪರಂಪರೆಯ ಕೊನೆಯ ಕೊಂಡಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಬಣ್ಣಿಸಿದರು.
ಜಗದ್ಗುರು ತೋಂಟದಾರ್ಯ ಮಠದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಪ್ರಕಟಿಸಿದ ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಡಿ.ಆರ್. ಪಾಟೀಲ ಅವರು ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಶಾಸಕರಾಗಿದ್ದರೂ ಅವರೆಂದು ಯಾವುದೇ ಹಮ್ಮು ಬಿಮ್ಮು ತೋರಿದವರಲ್ಲ. ಅವರು ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿಯಾಗಿದ್ದಾರೆ. ಲಕ್ಷಾಂತರ ಜನರಲ್ಲಿ ಎದ್ದು ಕಾಣುವ ಗುಣ ಹೊಂದಿದ್ದಾರೆಂದು ಬಣ್ಣಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಡಿ.ಆರ್. ಪಾಟೀಲ ರಾಜಕೀಯ ಅಜಾತಶತ್ರುವಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಪಾರ ಬದ್ಧತೆ ಹೊಂದಿದ್ದಾರೆ. ತಾವು ಗ್ರಾಮೀಣಾಭಿವೃದ್ದಿ ಸಚಿವರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ನೇರ ಹಣ ಬರುವಂತಾಗಲು ಕಾರಣ ಡಿ.ಆರ್. ಪಾಟೀಲರಾಗಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಗಳು ವಿಧಾನ ಮಂಡಳದಲ್ಲಿರುವದರಿಂದ ಶಾಸನ ಸಭೆಗಳ ಗೌರವ ಹೆಚ್ಚಲಿದೆ ಎಂದು ನುಡಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ರಾಜಕೀಯ ತಳಮಟ್ಟಕ್ಕೆ ಹೋಗಿದೆ. ಕಲುಷಿತ ರಾಜಕೀಯವನ್ನು ಸುಧಾರಿಸಲು ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ರಾಜ್ಯದಲ್ಲಿನ ಎಲ್ಲ ಸ್ವಾಮೀಜಿಗಳನ್ನು ಒಗ್ಗೂಡಿ ಉತ್ತಮರು ಶಾಸನ ಸಭೆಗಳಿಗೆ ಆಯ್ಕೆಯಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ತೋಂಟದ ಡಾ.ಸಿದ್ದರಾಮ ಶ್ರೀಗಳು ನೇತೃತ್ವ ವಹಿಸಬೇಕು ಎಂದು ಮನವಿ ಮಾಡಿದರು.
ಶಿರಸಿಯ ಪ್ರಮೋದ ಹೆಗಡೆ ಮಾತನಾಡಿ ಪಶ್ಚಿಮ ಘಟ್ಟವನ್ನು ಉಳಿಸಿದ ಕೀರ್ತಿ ದಿ.ಕೆ.ಎಚ್. ಪಾಟೀಲರಿಗೆ ಸಲ್ಲುತ್ತದೆ. ಡಿ.ಆರ್. ಪಾಟೀಲ ಕುಟುಂಬ ಸಜ್ಜನಿಕೆಗೆ ಸಾಕ್ಷಿಯಾಗಿದೆಯೆಂದು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ ಕೃಷ್ಣಾ, ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ, ಪ್ರೊ.ಐ.ಜಿ. ಸನದಿ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿದರು. ಗ್ರಂಥಕರ್ತ ಜಗನ್ನಾಥಸಿಂಗ್ ಜಮಾದಾರ, ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ಸಚಿವ ಡಾ.ಎಚ್.ಕೆ. ಪಾಟೀಲ ಮಾತನಾಡಿ, ಡಿ.ಆರ್.ಪಾಟೀಲ ಸರ್ವ ಜಾತಿ, ಧರ್ಮಗಳ ಜನತೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರು ಅರ್ಧ ಆಯುಷ್ಯ ತಮ್ಮ ತಂದೆ ದಿ.ಕೆ.ಎಚ್. ಪಾಟೀಲರ ಕನಸು ನನಸು ಮಾಡುವದರಲ್ಲಿಯೇ ಕಳೆದಿದ್ದಾರೆ. ತಾವು ಆರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಡಿ.ಆರ್.ಪಾಟೀಲ ಕಾರಣವೆಂದು ಹೇಳಿದರು.
ಡಾ.ತೋಂಟದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಜಿ.ಎಸ್.ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪ್ರಾ.ಶಿವಾನಂದ ಪಟ್ಟಣಶೆಟ್ಟಿ, ಪ್ರೊ.ಕೆ.ಎಚ್. ಬೇಲೂರ ಮುಂತಾದವರಿದ್ದರು.